ಕರ್ನಾಟಕ

ಬಿಎಸ್‌ವೈಗೆ ಜೈಕಾರ: ಜೋಶಿಗೆ ಧಿಕ್ಕಾರ

Pinterest LinkedIn Tumblr

prahalad_joshi-e1458822736915ಹುಬ್ಬಳ್ಳಿ: ನಗರದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಪತ್ರಿಕಾಗೋಷ್ಠಿ ನಡೆಸುತ್ತಿರುವುದನ್ನು ಅರಿತು ಕಳಸಾ ಬಂಡೂರಿ ಹೋರಾಟಗಾರರು ಜೋಶಿ ಅವರಿಗೆ ಮನವಿ ಸಲ್ಲಿಸಲು ಬಂದಿದ್ದರು. ಈ ವೇಳೆ ಹೋರಾಟಗಾರರನ್ನು ಮಾತನಾಡಿಸಲಿಲ್ಲವೆಂದು ಜೋಶಿ ಅವರ ವಿರುದ್ದ ಧಿಕ್ಕಾರ ಕೂಗಿದ್ದರು.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿ ಮುಗಿದ ಮೇಲೆ ಕಳಸಾ ಬಂಡೂರಿ ಯೋಜನೆ ಅನುಷ್ಠಾನ ಕುರಿತಂತೆ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಮನವೊಲಿಸುವಂತೆ ಮನವಿ ಮಾಡಲು ಕಳಸಾ ಬಂಡೂರಿ ಹೋರಾಟಗಾರರು ಯತ್ನಿಸಿದರು. ಆದರೆ ಹೋರಾಟಗಾರರ ಮನವಿ ಸ್ವೀಕರಿಸುವ ಹಾಗೂ ಅವರ ಜೊತೆ ಮಾತನಾಡುವ ಉಸಾಬರಿಗೆ ಜೋಶಿ ಹೋಗಲಿಲ್ಲ. ಇದರಿಂದ ಸಿಟ್ಟಾದ ಹೋರಾಟಗಾರರು ಜೋಶಿ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು.

ಈ ವೇಳೆ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮಾಜಿ ಸಿಎಂ ಯಡಿಯೂರಪ್ಪ ರೈತರ ಘೋಷಣೆಗಳ ಕೂಗನ್ನು ಕೇಳಿ ಹೊರ ಬಂದರು. ಆಗ ಕಳಸಾ ಬಂಡೂರಿ ಹೋರಾಟಗಾರರು ಯಡಿಯೂರಪ್ಪನವರ ಬಳಿ ತಮ್ಮ ಅಳಲು ತೋಡಿಕೊಂಡರು. 15 ನಿಮಿಷಗಳ ಕಾಲ ಶಾಂತವಾಗಿ ಹೋರಾಟಗಾರರ ಸಮಸ್ಯೆ ಆಲಿಸಿದ ಯಡಿಯೂರಪ್ಪ, ಕಳಸಾ ಬಂಡೂರಿ ಹೋರಾಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು. ಇದರಿಂದ ಸಂತೋಷಗೊಂಡ ಹೋರಾಟಗಾರರು ಯಡಿಯೂರಪ್ಪ ಅವರಿಗೆ ಜೈಕಾರ ಹಾಕಿದರು.

ನಮ್ಮ ಸಂಸದರಾದವರು ನಮ್ಮ ಸಮಸ್ಯೆಯನ್ನು ಸೌಜನ್ಯಕ್ಕೂ ಕೇಳಲಿಲ್ಲ. ಆದ್ರೆ ಯಡಿಯೂರಪ್ಪ ಅವರು ತಾವಾಗಿಯೇ ಬಂದು ನಮ್ಮ ಸಮಸ್ಯೆಯನ್ನು ಆಲಿಸಿದರು. ಜೋಶಿಯಂತವರು ನಮ್ಮ ಸಂಸದರಾಗಿದ್ದಕ್ಕೆ ನಾಚಿಕೆಯಾಗುತ್ತದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಯಾರು ಅನ್ನುವದನ್ನು ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Write A Comment