ಕರ್ನಾಟಕ

ಮಾರ್ಚ್ 29: ದ್ವಿತೀಯ ಪಿಯು ರಸಾಯನಶಾಸ್ತ್ರ ಪರೀಕ್ಷೆ

Pinterest LinkedIn Tumblr

PU-Boardಬೆಂಗಳೂರು: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ತಿಳಿಸಿದರು. ಜೊತೆಗೆ ರಸಾಯನಶಾಸ್ತ್ರ ಪತ್ರಿಕೆಯ ಮರುಪರೀಕ್ಷೆಗೆ ಮಾ.29 ರಂದು ದಿನಾಂಕ ನಿಗದಿಗೊಳಿಸಲಾಗಿದೆ ಎಂದು ವಿಧಾನಪರಿಷತ್‌ನಲ್ಲಿ ಇದೇ ವೇಳೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಾಹಿತಿ ನೀಡಿದರು.

ಪ್ರಶ್ನೆ ಪತ್ರಿಕೆ ಬಯಲು ಘಟನೆ ಕುರಿತು ಸದನಕ್ಕೆ ಮಾಹಿತಿ ನೀಡಿದ ಕಿಮ್ಮನೆ ರತ್ನಾಕರ, ಇದೊಂದು ನೋವಿನ ಸಂಗತಿ. 37 ಪ್ರಶ್ನೆಗಳ ಪೈಕಿ 36 ಪ್ರಶ್ನೆಗಳು ಮೂಲ ಪ್ರಶ್ನೆ ಪತ್ರಿಕೆಯಲ್ಲಿದ್ದ ಪ್ರಶ್ನೆಗಳಾಗಿದ್ದವು. ಪ್ರಕರಣ ಬೆಳಕಿಗೆ ಬಂದ ತತ್‌ಕ್ಷಣ ಪರೀಕ್ಷೆ ರದ್ದುಗೊಳಿಸಿ, ಮಾ.29ರಂದು ಮರುಪರೀಕ್ಷೆಗೆ ದಿನಾಂಕ ನಿಗದಿಗೊಳಿಸಲಾಯಿತು. ಅಲ್ಲದೇ ಮೇಲ್ನೋಟಕ್ಕೆ ತಪ್ಪಿತಸ್ಥರು ಎಂದು ಕಂಡು ಬಂದವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಪ್ರಶ್ನೆ ಪತ್ರಿಕೆ ತಯಾರಿಕೆಗೆ ಕಠಿಣ ನಿಯಮಗಳನ್ನು ಮತ್ತು ಪ್ರತಿ ಹಂತದಲ್ಲೂ ಗೌಪ್ಯತೆ ಕಾಪಾಡಲಾಗಿರುತ್ತದೆ. ಅಷ್ಟಿದ್ದರೂ ಪ್ರಶ್ನೆ ಪತ್ರಿಕೆ ಬಯಲು ಆಗಿದ್ದರೆ, ಪ್ರಶ್ನೆ ಪತ್ರಿಕೆ ತಯಾರಕರು, ಸಂಬಂಧಪಟ್ಟ ತಹಿಶೀಲ್ದಾರರು, ಬಿಇಓ, ಪ್ರಾಂಶುಪಾಲರು, ಖಜಾನೆ ಅಧಿಕಾರಿ ಸೇರಿದಂತೆ ಒಟ್ಟು 16 ಮಂದಿಯನ್ನು ವಿಚಾರಣೆ ಗೊಳಪಡಿಸಬೇಕಾಗುತ್ತದೆ. ಹೀಗಿರುವಾಗ ಇಲಾಖಾ ತನಿಖೆಯಿಂದ ಸತ್ಯ ಹೊರಬರುವ ವಿಶ್ವಾಸ ನನಗಿಲ್ಲ. ಹಾಗಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿಕೊಡುವಂತೆ ಗೃಹ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.

ಸಿಐಡಿ ತನಿಖೆ: ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ| ಜಿ. ಪರಮೇಶ್ವರ್‌, ಶಿಕ್ಷಣ ಇಲಾಖೆಯ ಮನವಿಯಂತೆ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶಿಸಲಾಗಿದೆ. ಆದಷ್ಟು ಬೇಗ ವರದಿ ನೀಡುವಂತೆ ಸಿಐಡಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಗಣಿತ ಪತ್ರಿಕೆ ಕಠಿಣವಾಗಿರಲಿಲ್ಲ: ಜೊತೆಗೆ ಗಣಿತ ಪತ್ರಿಕೆ ಕಠಿಣ ಆಗಿತ್ತು ಅಥವಾ ಪಠ್ಯಕ್ರಮಕ್ಕೆ ಹೊರತಾದ ಪ್ರಶ್ನೆಗಳು ಬಂದಿದ್ದವು ಅನ್ನುವುದು ಸರಿಯಲ್ಲ. ಇಡೀ ಪ್ರಶ್ನೆ ಪತ್ರಿಕೆಯಲ್ಲಿ ಒಂದೇ ಒಂದು ಪ್ರಶ್ನೆ ಪಠ್ಯಕ್ರಮಕ್ಕೆ ಹೊರತಾಗಿರಲಿಲ್ಲ. 2009ರಿಂದ ರಾಷ್ಟ್ರೀಯ ಶಿಕ್ಷಣ ನೀತಿ ಒಪ್ಪಿಕೊಂಡ ಬಳಿಕ ತಯಾರಿಸಲಾಗುತ್ತಿರುವ ಮಾದರಿಯಲ್ಲೇ ಈ ಬಾರಿಯೂ ಪ್ರಶ್ನೆ ಪತ್ರಿಕೆ ತಯಾರಿಸಲಾಗಿದೆ. ಪ್ರಶ್ನೆಗಳು ಮತ್ತು ಅದಕ್ಕೆ ಬರೆದ ಉತ್ತರ ನನ್ನ ಬಳಿ ಪುರಾವೆ ಇದೆ. ಅಲ್ಲದೇ ಪ್ರಶ್ನೆ ಪತ್ರಿಕೆ ಕಠಿಣ ಆಗಿರಲಿಲ್ಲ ಮತ್ತು ಪಠ್ಯಕ್ರಮದಲ್ಲಿ ಇಲ್ಲದ ಪ್ರಶ್ನೆಗಳು ಬಂದಿದ್ದವು ಅನ್ನವುದು ಸರಿಯಲ್ಲ ಅಂತ ರಾಜ್ಯದ ನೂರಾರು ವಿದ್ಯಾರ್ಥಿಗಳು ಇ-ಮೇಲ್‌ ಮೂಲಕ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ಇದೇ ವೇಳೆ ಕಿಮ್ಮನೆ ರತ್ನಾಕರ ಸ್ಪಷ್ಟನೆ ನೀಡಿದರು.
-ಉದಯವಾಣಿ

Write A Comment