ಕರ್ನಾಟಕ

ತೀವ್ರಗೊಂಡ ‘ಕಿರಗೂರಿನ ಗಯ್ಯಾಳಿಗಳು’ ಬೀಪ್ ವಿವಾದ

Pinterest LinkedIn Tumblr

kiragoorina-gayyaligalu

ಬೆಂಗಳೂರು: ಎರಡು ವಾರದ ಹಿಂದ ಬಿಡುಗಡೆಯಾದ ‘ಕಿರಗೂರಿನ ಗಯ್ಯಾಳಿಗಳು’ ಚಿತ್ರತಂಡ ಈ ವಾರವೂ ಸೆನ್ಸಾರ್ ಮಂಡಲಿಯ ಎದುರು ಪ್ರತಿಭಟನೆ ಮುಂದುವರೆಸಿದೆ. ಕಥೆಗೆ ಅವಶ್ಯಕವಾದ, ಕಥೆ ನಡೆಯುವ ಪ್ರದೇಶದ ಸೊಗಡಿನ ಮಾತುಗಳಿಗೆ ಕತ್ತರಿ ಹಾಕಿದ್ದನ್ನು ವಿರೋಧಿಸಿ ಈ ಪ್ರತಿಭಟನೆ ಮುಂದುವರೆದಿದೆ.

ಈ ವಿವಾದವನ್ನು ಬಗೆಹರಿಸಲು ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಲಿಯೊಂದಿಗೆ ಸಭೆ ಕರೆದಿದ್ದ ಪ್ರಾದೇಶಿಕ ಸೆನ್ಸಾರ್ ಮಂಡಲಿ ಅಧ್ಯಕ್ಷೆ ನತಾಶ ಡಿಸೋಜ ನಂತರ ಸಭೆಯಿಂದ ಹೊರನಡೆದಿದ್ದಾರೆ ಎಂದು ತಿಳಿದುಬಂದಿದೆ.

ಇದರ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕಿ ಸುಮನಾ ಕಿತ್ತೂರು “ಸೆನ್ಸಾರ್ ಮಂಡಲಿಯ ಈ ನಡೆ ಅತಾರ್ಕಿಕ. ಪ್ರಮೋಗಳಲ್ಲಿ ಅವರು ಅವಕಾಶ ನೀಡಿದ್ದ ಪದಗಳನ್ನು ಸಿನೆಮಾದಲ್ಲಿ ತೆಗೆದುಹಾಕಿದ್ದಾರೆ” ಎಂದಿದ್ದಾರೆ.

ಇದನ್ನು ಸಮರ್ಥಿಸಿಕೊಂಡಿದ್ದ ಮಂಡಲಿ, ಪ್ರಮೋದಲ್ಲಿ ಆ ಪದ ಒಮ್ಮೆ ಮಾತ್ರ ಬಳಕೆಯಾಗಿತ್ತು, ಸಿನೆಮಾದಲ್ಲಿ ಹಲವಾರು ಬಾರಿ ಬಳಕೆಯಾಗಿದೆ ಎಂದಿದ್ದರು. “ಒಂದು ಪದವನ್ನು ಒಂದು ಬಾರಿ ಬಳಸಿದರೂ ಹತ್ತು ಬಾರಿ ಬಳಸಿದರೂ ಅದೇ ಅರ್ಥ ನೀಡುತ್ತದೆ. ಸಿನೆಮಾಗೆ ಆಗಲೇ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿ ಪ್ರದರ್ಶನ ಕಾಣುತ್ತಿರುವುದರಿಂದ ಈಗ ಏನು ಮಾಡಲು ಸಾಧ್ಯವಿಲ್ಲ ಎಂದು ತಿಳಿದಿದೆ ” ಎನ್ನುತ್ತಾರೆ ಸುಮನಾ.

ಆದರೆ ಈ ಹೋರಾಟ ಮುಂದೆ ಇಂತಹ ಸಿನೆಮಾಗಳನ್ನು ಮಾಡುವವರಿಗೆ ಅನುಕೂಲವಾಗಲೆಂದು ಎಂದಿದ್ದಾರೆ. ಈ ವಿಷಯದಲ್ಲಿ ಸೆನ್ಸಾರ್ ಮಂಡಲಿಯ ವಿರುದ್ಧ ಕೋರ್ಟ್ ಮೊರೆ ಹೋಗಲು ಸಿನೆಮಾದ ನಿರ್ಮಾಣ ಸಂಸ್ಥೆ ಮೇಘಾ ಮೂವೀಸ್ ನಿರ್ಧರಿಸಿದೆ.

ಈ ಪ್ರತಿಭಟನೆಯಿಂದ ತಮ್ಮ ಸಮಯ ಹರಣವಾಗುತ್ತಿದೆ ಎನ್ನುವ ಪ್ರಾದೇಶಿಕ ಸೆನ್ಸಾರ್ ಮಂಡಲಿ ಅಧ್ಯಕ್ಷೆ “ನಿರ್ದೇಶಕಿಗೆ ಇದರಿಂದ ತೊಂದರೆಯಾಗಿದ್ದರೆ, ಇದನ್ನು ಉನ್ನತ ಮಂಡಲಿಗೆ ಮರುಪರೀಶಲೆನೆ ಕಳುಹಿಸಬಹುದಿತ್ತು. ಈಗಾಗಲೇ ಅವರು ಪ್ರಮಾಣಪತ್ರ ಸ್ವೀಕರಿಸಿರುವುದರಿಂದ ಮತ್ತೇನೂ ಮಾಡಲು ಸಾಧ್ಯವಿಲ್ಲ” ಎಂದು ಕೈಚೆಲ್ಲಿದ್ದಾರೆ.
ಈ ಪ್ರತಿಭಟನೆಗಳಿಂದ ಬಿಡುಗಡೆಯಾಗಬೇಕಿರುವ ಸಿನೆಮಾಗಳ ಸೆನ್ಸಾರ್ ಗೆ ತೊಂದರೆಯಾಗುತ್ತಿದೆ ಎಂದು ಕೂಡ ಅವರು ಹೇಳಿದ್ದಾರೆ.

ಸಿನೆಮಾ ಮತ್ತು ಪುಸ್ತಕಗಳು ವಿಭಿನ್ನ ಎನ್ನುವ ಅವರು “ಈ ಸಿನೆಮಾ ಪುಸ್ತಕವೊಂದರಿಂದ ಸ್ಫೂರ್ತಿ ಪಡೆದದ್ದು ಎಂಬ ಅರಿವಿದೆ. ಆದರೆ ಸಿನೆಮಾ ಸಾಮಾನ್ಯ ವೀಕ್ಷಣೆಗೆ ಲಭ್ಯವಿದ್ದು, ಅದಕ್ಕಿರುವ ನಿಯಮಗಳು ಅವರಿಗೆ ತಿಳಿದಿರಬೇಕು” ಎನ್ನುತ್ತಾರೆ.

ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ವಾಣಿಜ್ಯ ಮಂಡಲಿ ಅಧ್ಯಕ್ಷ ಸಾ ರಾ ಗೋವಿಂದು “ಸೆನ್ಸಾರ್ ಮಂಡಲಿ ತಪ್ಪೆಸಗಿದೆ. ಮಂಡಲಿಯ ಸದಸ್ಯರು ಪ್ರಾದೇಶಿಕ ಅಧಿಕಾರಿಗೆ ತಪ್ಪು ಸಲಹೆ ನೀಡಿದ್ದಾರೆ. ಈ ವಿವಾದ ಬಗೆಹರಿಸಿಕೊಳ್ಳಲು ನಾವು ಮುಂಬೈನಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಲಿದ್ದೇವೆ” ಎಂದಿದ್ದಾರೆ.

Write A Comment