ಕರ್ನಾಟಕ

ಡಿ.ಕೆ. ರವಿ ಸಾವು ನಿಲುವಳಿ ಸೂಚನೆ ಸಭಾಪತಿ ತಿರಸ್ಕಾರ

Pinterest LinkedIn Tumblr

D.H-Shankaramurthyಬೆಂಗಳೂರು, ಮಾ. ೨೨- ಐಎಎಸ್ ಅಧಿಕಾರಿ ಡಿ.ಕೆ ರವಿ ಸಾವಿನ ಕುರಿತು ನಿಲುವಳಿ ಸೂಚನೆಯಡಿ ಚರ್ಚೆ ನಡೆಸಲು ಅವಕಾಶ ನೀಡುವಂತೆ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಮಾಡಿದ ಮನವಿಯನ್ನು ಸಭಾಪತಿ ಡಿ.ಎಚ್. ಶಂಕರಮೂರ್ತಿ ತಿರಸ್ಕರಿಸಿದ ಘಟನೆ ವಿಧಾನ ಪರಿಷತ್‌ನಲ್ಲಿಂದು ನಡೆಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯ ಶರವಣ ಡಿ.ಕೆ. ರವಿ ಸಾವಿನ ಬಗ್ಗೆ ಚರ್ಚೆ ನಡೆಸಲು ನಿಲುವಳಿ ಸೂಚನೆಯಡಿ ಮನವಿ ನೀಡಿದ್ದೇವೆ. ಅವಕಾಶ ಕೊಡಿ ಎಂದು ಸಭಾಪತಿಗಳಿಗೆ ಮನವಿ ಮಾಡಿದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷದ ನಾಯಕ ಈಶ್ವರಪ್ಪ ಚರ್ಚೆಗೆ ಅವಕಾಶ ನೀಡುವಂತೆ ಬಿಗಿ ಪಟ್ಟು ಹಿಡಿದರು.

ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರ ಮನವಿಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕ ಎಸ್.ಆರ್ ಪಾಟೀಲ್, ಆಡಳಿತ ಪಕ್ಷದ ಸದಸ್ಯರಾದ ಆರ್.ವಿ ವೆಂಕಟೇಶ್, ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಹಲವು ಸದಸ್ಯರು ಈಗಾಗಲೇ ಒಂದು ನಿಲುವಳಿ ಸೂಚನೆ ಚರ್ಚೆಯಲ್ಲಿದೆ. ಅದಕ್ಕೆ ಸರ್ಕಾರ ಇನ್ನು ಉತ್ತರ ನೀಡಿಲ್ಲ. ಹೀಗಾಗಿ ಮತ್ತೊಂದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಸಭಾಪತಿಗಳಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಪಕ್ಷದ ನಾಯಕ ಈಶ್ವರಪ್ಪ, ಜೆಡಿಎಸ್‌ನ ಹಿರಿಯ ನಾಯಕ ಬಸವರಾಜ ಹೊರಟ್ಟಿ, ಬಿಜೆಪಿ ಸದಸ್ಯರಾದ ಗೋ. ಮಧುಸೂದನ್, ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಮತ್ತಿತರರು ನಿನ್ನೆ ನೀಡಿದ ನಿಲುವಳಿ ಸೂಚನೆಯೇ ಬೇರೆ. ಇಂದು ನೀಡಿರುವ ನಿಲುವಳಿ ಸೂಚನೆಯೇ ಬೇರೆ. ನಿನ್ನೆಯ ನಿಲುವಳಿ ಸೂಚನೆಯನ್ನು ತಿರಸ್ಕರಿಸಿ ನಿಯಮ 68ರಡಿ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಮತ್ತೊಂದು ನಿಲುವಳಿ ಸೂಚನೆ ಕೈಗೆತ್ತಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ. ಈ ಬಗ್ಗೆ ಸಭಾಪತಿಗಳು ಅವಕಾಶ ಕಲ್ಪಿಸಬೇಕು ಎಂದರು.

ಪ್ರತಿಪಕ್ಷದ ಸದಸ್ಯರ ಬೇಡಿಕೆಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯ ವೀರಣ್ಣ ಮತ್ತಿಕಟ್ಟಿ. ಸದನದಲ್ಲಿ ನಾವೇ ಮಾಡಿಕೊಂಡ ನಿಯಮಗಳಿವೆ. ಅದನ್ನು ಗೌರವಿಸದಿದ್ದರೆ ಹೇಗೆ. ಸಭಾಪತಿಗಳಾದ ತಮಗೆ ಅಧಿಕಾರವಿದೆ. ಈ ಬಗ್ಗೆ ನೀವೆ ನಿರ್ಧರಿಸಿ ಎಂದು ಹೇಳಿದರು.

ಆಡಳಿತ ಪಕ್ಷದ ಸದಸ್ಯರು ಡಿ.ಕೆ ರವಿ ಸಾವಿನ ಬಗ್ಗೆ ಚರ್ಚೆ ನಡೆಸುವುದು ಸರಿಯಲ್ಲ. ಈಗಾಗಲೇ ವಿಷಯದ ಕುರಿತು ಚರ್ಚೆಯಾಗಿದೆ. ಅಲ್ಲದೆ ಸಿಬಿಐ ತನಿಖೆ ನಡೆಯುತ್ತಿದೆ. ತನಿಖಾ ಹಂತದಲ್ಲಿರುವಾಗ ಚರ್ಚೆಗೆ ಅವಕಾಶ ಬೇಡ ಎಂದು ಮನವಿ ಮಾಡಿದರು.

ಇತ್ತ ಪ್ರತಿಪಕ್ಷಗಳ ಸಚಿವರು ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಬಿಗಿಪಟ್ಟು ಹಿಡಿದರು. ಆಗ ಮಧ್ಯ ಪ್ರವೇಶಿಸಿದ ಸಭಾಪತಿ ಡಿ.ಎಚ್. ಶಂಕರಮೂರ್ತಿ ಪ್ರಕರಣದ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದೆ. ಈ ಬಗ್ಗೆ ಚರ್ಚೆ ನಡೆಸಲು ನಿಯಮದಲ್ಲಿ ಅವಕಾಶವಿಲ್ಲ ಎಂದು ಹೇಳಿ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರ ಬೇಡಿಕೆಯನ್ನು ತಿರಸ್ಕರಿಸಿದರು.

Write A Comment