ಕರ್ನಾಟಕ

ಪರೀಕ್ಷೆ ಓದಿಗೆ ಕರೆಂಟ್ ಭಾಗ್ಯ ವಿದ್ಯಾರ್ಥಿಗಳಿಗೆ ಅಭಯ

Pinterest LinkedIn Tumblr

dkcಬೆಂಗಳೂರು, ಮಾ. ೨೨- ರಾಜ್ಯಾದ್ಯಂತ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯುತ್ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಿಧಾನ ಪರಿಷತ್‌ನಲ್ಲಿಂದು ತಿಳಿಸಿದರು.

ಪರೀಕ್ಷಾ ಸಮಯದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸಿ ಜನರಿಂದ ಬೈಯಿಸಿಕೊಳ್ಳುವ ಉದ್ದೇಶ ನಮಗಿಲ್ಲ ಎಂದು ಹೇಳಿದರು.

ಪ್ರೋತ್ಸಾಹಕ್ಕೆ ಚಿಂತನೆ

ಗ್ರಾಮಪಂಚಾಯ್ತಿಗಳಲ್ಲಿ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್‌ಗಳನ್ನು 100ಕ್ಕೆ 100ರಷ್ಟು ಪಾವತಿ ಮಾಡುವ ಗ್ರಾಮಪಂಚಾಯ್ತಿಗಳಿಗೆ ಪ್ರೋತ್ಸಾಹ ಧನ ನೀಡುವ ಉದ್ದೇಶ ಸರ್ಕಾರಕ್ಕಿದೆ ಎಂದು ಹೇಳಿದರು.

ಗ್ರಾಮಪಂಚಾಯ್ತಿಗಳಿಗೆ ಶೇ. 25ರಷ್ಟು ಪ್ರೋತ್ಸಾಹ ಧನ ನೀಡಿದರೆ ಆ ಮೊತ್ತವನ್ನು ಯಾರು ಭರಿಸಬೇಕು ಎಂಬ ಕುರಿತಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಜೊತೆ ಚರ್ಚೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದರು.

ಕಳೆದ ಹಲವಾರು ವರ್ಷಗಳಿಂದ ಕರ್ನಾಟಕ ವಿದ್ಯುತ್‌ಚ್ಛಕ್ತಿ ಪ್ರಸರಣ ನಿಗಮಕ್ಕೆ 14 ರಿಂದ 15 ಸಾವಿರ ಕೋಟಿ ಹಣ ಬರಬೇಕಾಗಿದೆ ಎಂದು ಹೇಳಿದರು.

ಕೋಟಾ ಶ್ರೀನಾಥ್ ಪೂಜಾರಿ ಪ್ರಶ್ನೆಗೆ ಉತ್ತರಿಸಿದ ಸಚಿವರು 3283 ಕೋಟಿ ರೂ. ಹಣವನ್ನು ತಕ್ಷಣ ವಸೂಲಿ ಮಾಡುವ ಕುರಿತಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಪ್ರಶ್ನೋತ್ತರ ಅವದಿಯಲ್ಲಿ ವಿಮಲಾಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯಾದ್ಯಂತ ವಿದ್ಯುತ್ ಸಮಸ್ಯೆ ಎದುರಾಗದಂತೆ ನೋಡಿಕೊಂಡು ವಿದ್ಯಾರ್ಥಿಗಳ ಪರೀಕ್ಷೆಗೆ ನೆರವಾಗುವುದಾಗಿ ಹೇಳಿದರು.

ರಾಜ್ಯದಲ್ಲಿ ಎಲ್ಇಡಿ ಬಲ್ಬ್‌ಗಳನ್ನು ವಿತರಿಸಲು ಆಂದೋಲನ ಕೈಗೆತ್ತಿಕೊಂಡಿದ್ದು, ಇದುವರೆಗೂ ಪ್ರತಿ ಬಲ್ಬ್‌ಗೆ 100 ರೂ.ನಂತೆ 46 ಲಕ್ಷದ 45 ಸಾವಿರದ 607 ಬಲ್ಬ್‌ಗಳನ್ನು ವಿತರಿಸಲಾಗಿದೆ ಎಂದ ಅವರು ಆರೂವರೆ ಕೋಟಿ ಬಲ್ಬ್‌ಗಳನ್ನು ವಿತರಿಸುವ ಗುರಿ ಇದೆ. ಇದಕ್ಕಾಗಿ ಟೆಂಡರ್ ಕರೆಯಲಾಗಿದೆ. ಉತ್ಪಾದಕರು ಬೆಲೆ ಕಡಿಮೆಯಾಯಿತು ಎಂದು ತಗಾದೆ ತೆಗೆದಿದ್ದಾರೆ. ಅವರ ಮನವೊಲಿಸಲಾಗುವುದು ಎಂದು ಹೇಳಿದರು.

ಎಲ್‌ಇಡಿ ಬಲ್ಬ್‌ಗಳಿಂದ ಗ್ರಾಹಕರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದನ್ನು ಕೇಂದ್ರ ಎನರ್ಜಿ ಎಫಿಸೆನ್ಸಿ ಸರ್ವಿಸ್ ಲಿಮಿಟೆಡ್ ದೃಢಪಡಿಸಿದೆ ಎಂದು ಹೇಳಿದರು.

ದೇಶಾದ್ಯಂತ 7 ಕೋಟಿಗೂ ಹೆಚ್ಚು ಎಲ್‌ಇಡಿ ಬಲ್ಬ್‌ಗಳನ್ನು ಈಗಾಗಲೇ ಕೇಂದ್ರ ಸರ್ಕಾರ ವಿತರಿಸಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವ ವೇಳೆ ವಿದ್ಯುತ್ ಕೈಕೊಟ್ಟ ಬಗ್ಗೆ ನನಗೂ ವಿಷಾದವಿದೆ. ಕೆಲವು ತಾಂತ್ರಿಕ ಕಾರಣದಿಂದ ವಿದ್ಯುತ್ ಕಡಿತವಾಯಿತು ಎಂದು ಹೇಳಿದರು.

Write A Comment