ಕರ್ನಾಟಕ

ಸೂರ್ಯನ ಕೋಪಕ್ಕೆ ಬದುಕು ಹೈರಾಣ: ಪ್ಯಾನ್‌ ತಿರುಗಲ್ಲ; ನಿದ್ರೆ ಬರಲ್ಲ!

Pinterest LinkedIn Tumblr

20-Heat-1ದಾವಣಗೆರೆ: ಭೂಮಿ ಕಾದ ಕಾವಲಿಯಂತಾಗಿದೆ. ಕಾಂಕ್ರೀಟ್‌ ರಸ್ತೆಗಳಿಂದ ಹೊಮ್ಮುವ ಬಿಸಿಗಾಳಿಗೆ ಮುಖಕೊಡಲು ಆಗದ ಸ್ಥಿತಿಯಿದೆ. ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು, ವೃದ್ಧರು ಬಿಸಿಲ ಬೇಗೆಗೆ ಹೈರಾಣಾಗಿದ್ದಾರೆ. ಬಿಸಿಲ ಝಳಕ್ಕೆ ಹೆದರಿ ಜನರು ಮನೆಬಿಟ್ಟು ಹೊರಬರಲೂ ಆಗದ ಪರಿಸ್ಥಿತಿಯಿದೆ. ಹಗಲು ವೇಳೆ ಸೂರ್ಯ ಶಿಕಾರಿಗೆ ಹೊರಟಂತೆ ಭಾಸವಾಗುತ್ತಿದ್ದಾನೆ.
‘ಸ್ಮಾರ್ಟ್‌ಸಿಟಿ’ಯಲ್ಲಿ ಇದೀಗ ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚುತ್ತಲೇ ಇದೆ. ಭಾನುವಾರ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಭಾನುವಾರ ದಿನವಿಡೀ ಬೇರೆಲ್ಲಾ ದಿನಗಳಿಂತ ಬಿಸಿಲ ತೀವ್ರತೆ ಹೆಚ್ಚಾಗಿತ್ತು. ಇದು ಬೇಸಿಗೆ ಆರಂಭವಷ್ಟೇ. ಈಗಲೇ ಇಂತಹ ಕೆಟ್ಟಸ್ಥಿತಿ ನಿರ್ಮಾಣ ಆಗಿರುವುದು ‘ಸ್ಮಾರ್ಟ್‌ಸಿಟಿ’ ಕನಸಿ ನಲ್ಲಿರುವ ಜನರಿಗೆ ಆತಂಕ ಉಂಟು ಮಾಡಿದೆ.
ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಆಗುವಂತಹ ಅನುಭವ ಮಧ್ಯಕರ್ನಾಟಕ ದಾವಣಗೆರೆಯಲ್ಲಿ ಆಗುತ್ತಿದೆ! ಎಲ್ಲೆಲ್ಲೂ ಕಾಂಕ್ರೀಟ್‌ ರಸ್ತೆಗಳೇ ರಾರಾಜಿಸುತ್ತಿರುವುದು, ರಸ್ತೆ ವಿಸ್ತರಣೆಗೋಸ್ಕರ ರಸ್ತೆಗಳ ಅಂಚಿನಲ್ಲಿದ್ದ ಮರಗಳನ್ನು ಕಡಿದು ಹಾಕಿದ ಪರಿಣಾಮವೇ ನಗರದ ತಾಪಮಾನ ಏರಿಕೆಗೆ ಕಾರಣವಾಗಿದೆ ಎಂಬುದು ಜನರವಾದ.
ಪುಣೆ– ಬೆಂಗಳೂರು ರಸ್ತೆಯಲ್ಲಿ ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ಬೈಕ್‌ ಅಥವಾ ಕಾಲ್ನಡಿಗೆಯಲ್ಲಿ ಹೊರಟರೆ ಅರ್ಧ ಕಿಲೋಮೀಟರ್‌ ಸಹ ಮುಂದೆ ಸಾಗಲು ಆಗದ ಸ್ಥಿತಿಯಿದೆ. ಕಾಂಕ್ರೀಟ್‌ ರಸ್ತೆಯಿಂದ ಹೊಮ್ಮುವ ಬಿಸಿಗಾಳಿಗೆ ಬೈಕ್‌ ಸವಾರನೇ ಬಸವಳಿದು ಹೋಗುತ್ತಿದ್ದಾನೆ.
ಅದರ ಜೊತೆಗೆ ದ್ವಿಚಕ್ರ ಸವಾರರಿಗೆ ಹೆಲ್ಮೆಟ್ ಕಾಟ ಬೇರೆ. ಹೆಲ್ಮೆಟ್ ಧರಿಸಿದ ತಲೆ ಸಹ ಕಾದ ಕಾವಲಿಯಂತಾಗಿದೆ. ಎಲ್ಲೆಡೆಯೂ ಬಿಸಿಗಾಳಿಯದ್ದೇ ಆರ್ಭಟ! ನಗರದಲ್ಲಿ ಬೆಳಿಗ್ಗೆ 8ಕ್ಕೇ ಸೂರ್ಯ ತನ್ನ ಪ್ರತಾಪ ಆರಂಭಿಸಲು ಪ್ರಾರಂಭಿಸಿದ್ದಾನೆ. ಹೀಗಾಗಿ, ಇದರ ಸಹವಾಸವೇ ಬೇಡವೆಂದು ಕೆಲವರು ಬೆಳಿಗ್ಗೆಯ ದೈಹಿಕ ಕಸರತ್ತಿಗೂ ವಿರಾಮ ಹೇಳಿದ್ದಾರೆ.
ಇನ್ನು ಕೆಲವರು ಮುಂಜಾನೆಯೇ ಎದ್ದು ದೈಹಿಕ ಕಸರತ್ತು ಮುಗಿಸಿ, ಮಜ್ಜಿಗೆ, ಹಣ್ಣಿನ ರಸ, ಎಳನೀರಿನ ಮೊರೆ ಹೋಗಿ ಮನೆಯತ್ತ ಹೆಜ್ಜೆ ಹಾಕುತ್ತಿರುವ ದೃಶ್ಯ ಎರಡು ದಿನಗಳಿಂದ ಸಾಮಾನ್ಯವಾಗಿದೆ. ವೃದ್ಧರು ಹಗಲು ವೇಳೆ ಮನೆ ಬಿಟ್ಟು ಆಚೆ ಬರುತ್ತಿಲ್ಲ. ಮನೆಯಲ್ಲಿದ್ದರೂ ಕರೆಂಟ್‌ ಇಲ್ಲದ ಕಾರಣ ಪ್ಯಾನ್‌ ತಿರುಗುತ್ತಿಲ್ಲ.
ಕಚೇರಿಗೆ ಹೋಗುವವರಿಗೂ ಬಿಸಿಲ ಪ್ರಖರತೆ ಸಂಕಷ್ಟವೊಡ್ಡುತ್ತಿದೆ. ಕಚೇರಿಯಲ್ಲೂ ಕುಳಿತು ಕೆಲಸ ಮಾಡಲು ಆಗದ ಸ್ಥಿತಿಯಿದೆ. ಸಂಜೆ ಬಳಿಕ ಸೂರ್ಯ ತನ್ನ ಕೋಪ ಕಡಿಮೆ ಮಾಡಿಕೊಂಡರೂ ಭೂಮಿ ಮಾತ್ರ ತಣ್ಣಗಾಗುತ್ತಿಲ್ಲ. ಸಂಜೆ ವೇಳೆ ಉದ್ಯಾನಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ.
ಮರದ ಕೆಳಗೆ ತಂಗಾಳಿ ಪಡೆಯಲು ಕುಂದವಾಡ ಕೆರೆ, ಟಿ.ವಿ. ಸ್ಟೇಷನ್‌ ಕೆರೆ, ವಿಶ್ವೇಶ್ವರಯ್ಯ ಉದ್ಯಾನ, ಕಾಸಲ್‌ ವಿಠಲ್‌ ಉದ್ಯಾನ, ರವೀಂದ್ರನಾಥ್‌ ಪಾರ್ಕ್‌ನಲ್ಲಿ ಹೆಚ್ಚಿನ ಜನರು ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಜೊತೆಗೆ , ಕೂಲರ್‌, ಪ್ಯಾನ್‌ಗಳು ಖರೀದಿಯೂ ಜೋರಾಗಿದೆ. ಆದರೆ, ಪ್ಯಾನ್‌ ತಿರುಗಲು ಕರೆಂಟ್‌ ಇಲ್ಲದಿರುವುದು ಜನರ ಸಂಕಷ್ಟವನ್ನು ಇಮ್ಮಡಿಗೊಳಿಸಿದೆ.
ಸಖತ್‌ ವ್ಯಾಪಾರ: ನೀರಡಿಕೆ ಹಣ್ಣುಗಳಿಗೆ ಈಗ ದಿಢೀರ್‌ ಬೇಡಿಕೆ. ಅಲ್ಲದೇ ಜ್ಯೂಸ್‌ ಅಂಗಡಿಗಳ ಮುಂದೆಯೂ ಜನದಟ್ಟಣೆ. ಆದರೆ, ವಿದ್ಯುತ್‌ ಅಭಾವದ ಕಾರಣ ಗ್ರಾಹಕರು ಐಸ್‌ ಸಹಿತ ಜ್ಯೂಸ್‌ ಕೇಳಿದರೆ, ಪೂರೈಕೆ ಮಾಡಲು ಅಂಗಡಿ ಮಾಲೀಕರಿಗೆ ಸಾಧ್ಯವಾಗುತ್ತಿಲ್ಲ.
ರಾತ್ರಿ ವೇಳೆ ತಣ್ಣನೇ ಬಿಯರ್‌ ಬೇಕು ಎಂದರೂ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಸಿಗುತ್ತಿಲ್ಲ. ಇದಕ್ಕೆ ಕರೆಂಟ್‌ ಅಭಾವವೇ ಕಾರಣ. ಕಾಲೇಜುಗಳಿಗೆ ತೆರಳುವ ಹುಡುಗಿಯರು ಬಿಸಿಲಿಗೆ ಮುಖದ ಕಾಂತಿ ಹಾಳಾಗುತ್ತದೆ ಎಂದು ಮುಖಕ್ಕೆ ದುಪಟ್ಟು ಕಟ್ಟಿಕೊಳ್ಳುವುದು, ಕೊಡೆ ಹಿಡಿದು ಸಾಗುವ ದೃಶ್ಯಗಳು ಸಾಮಾನ್ಯವಾಗಿವೆ.
ಪರೀಕ್ಷೆ ಜ್ವರದ ನಡುವೆ ಬಿಸಿಲ ಜ್ವರ: ಇದು ಪರೀಕ್ಷಾ ಕಾಲ ಬೇರೆ. ಪರೀಕ್ಷಾ ಕೇಂದ್ರದ ಕೆಲವು ಕೊಠಡಿಗಳಲ್ಲಿ ಪ್ಯಾನ್‌ ಇಲ್ಲ; ಇದ್ದರೂ ತಿರುಗದ ಸ್ಥಿತಿಯಿದೆ. ಬಿಸಿಯ ಗಾಳಿಯ ಜೊತೆಯಲ್ಲಿ ಪರೀಕ್ಷೆ ಬರೆಯುವ ಸ್ಥಿತಿ ವಿದ್ಯಾರ್ಥಿಗಳದ್ದು. ಇನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳ ಸ್ಥಿತಿಯಂತೂ ಹೇಳಿತೀರದಾಗಿದೆ.
‘ಕಳೆದ ವರ್ಷಕ್ಕಿಂತ ಈ ಬಾರಿ ನಗರದಲ್ಲಿ ಉಷ್ಣಾಂಶ ಹೆಚ್ಚಾಗಿದೆ. ಮನೆಯೊಳಗೆ ಇರಲು ಆಗದ ಸ್ಥಿತಿ; ಹೊರಗೆ ಹೋಗಲೂ ಸಂಕಟ. ಮರಗಳನ್ನು ಬೆಳೆಸುವುದನ್ನು ಬಿಟ್ಟು ಕಡಿದರೆ ಇಂತಹದ್ದೇ ಪರಿಸ್ಥಿತಿ. ಇನ್ನೊಂದು ವಾರದಲ್ಲಿ ಮಳೆ ಬಂದು ಭೂತಾಯಿ ಒಡಲು ತಂಪ್ಪಾದರೆ ನೆಮ್ಮದಿ ಜೀವನ; ಇಲ್ಲದಿದ್ದರೆ ವೃದ್ಧರು, ಸಣ್ಣ ಮಕ್ಕಳು ಬದುಕು ಸಾಗಿಸುವುದು ದುಸ್ತರ’ ಎನ್ನುತ್ತಾರೆ ಕೆ.ಬಿ.ಬಡಾವಣೆಯ ನಿವಾಸಿ ವಿಶ್ವನಾಥ್‌.

Write A Comment