ಕರ್ನಾಟಕ

ಎಲ್ಲಿ ಮರೆಯಾದೆ ಗುಬ್ಬಚ್ಚಿ, ಏಕೆ ದೂರಾದೆ……

Pinterest LinkedIn Tumblr

sparrow

ಬೆಂಗಳೂರು ನಗರದ ಜನತೆಗೆ ಗುಬ್ಬಚ್ಚಿ ಪುಸ್ತಕಗಳಲ್ಲಿ ನೋಡುವ ಚಿತ್ರವಾಗಷ್ಟೇ ಉಳಿಯುವ ದಿನ ದೂರವಿಲ್ಲ. ಬೆಳಗಾದರೆ ಗುಬ್ಬಚ್ಚಿಗಳ ಚಿಲಿಪಿಲಿಯಿಂದಲೇ ಎಚ್ಚರಗೊಂಡು ಈ ಪುಟ್ಟ, ಮುದ್ದು ಪಕ್ಷಿಗಳನ್ನು ಕಣ್ಣರಳಿಸಿ ನೋಡುತ್ತಿದ್ದ ನಮ್ಮ ಈಗಿನ ಕಂದಮ್ಮಗಳಿಗೆ ಈಗ ಗುಬ್ಬಚ್ಚಿ ಕಾಣಸಿಗುವುದೇ ಅಪರೂಪ.

ಇನ್ನೇನಿದ್ದರೂ ಗುಬ್ಬಚ್ಚಿಗಳನ್ನು ಕವಿತೆಗಳಲ್ಲಿ, ಚಿತ್ರಗಳಲ್ಲಷ್ಟೇ ನೋಡಿ ಖುಷಿಪಡಬೇಕು.ಮೊಬೈಲ್ ಟವರ್‌ಗಳ ಹಾವಳಿಯಿಂದ ಗುಬ್ಬಚ್ಚಿಗಳು ಹೊರಟುಹೋದವು ಎಂಬುದು ಒಂದು ವಾದವಾದರೆ, ಪುಟ್ಟ ಶ್ವಾಸಕೋಶದ ಈ ಹಕ್ಕಿಗಳಿಗೆ ನಗರದಲ್ಲಿ ಹೆಚ್ಚಾಗುತ್ತಿರುವ ವಾಯುಮಾಲಿನ್ಯವನ್ನು ಸಹಿಸಲಾಗದೆ ದೂರ ಓಡುತ್ತಿವೆ ಎನ್ನುವವರಿದ್ದಾರೆ.

ಗುಬ್ಬಚ್ಚಿಯನ್ನು ಮನುಷ್ಯರು ಮುಟ್ಟಿದರೆ, ಅದನ್ನು ಬೇರೆ ಗುಬ್ಬಚ್ಚಿಗಳು ಮತ್ತೆ ತಮ್ಮ ಬಳಿ ಸೇರಿಸುವುದಿಲ್ಲ ಎಂಬ ನಂಬಿಕೆಯೊಂದಿದೆ. ಆದರೆ ಮನುಷ್ಯರಂತೆ ಗುಬ್ಬಚ್ಚಿಗಳೂ ಅಸ್ಪೃಶ್ಯತೆ ಆಚರಿಸುತ್ತವೆಂದರೆ, ಏಕೋ ನಂಬಿಕೆ ಬಾರದು.

ಏನಾದರಾಗಲಿ, ನಗರದ ಒಳಗಂತೂ ಗುಬ್ಬಚ್ಚಿಗಳು ತೀರಾ ತೀರಾ ಅಪರೂಪವಾಗುತ್ತಿರುವುದಂತೂ ನೋವಿನ ಸಂಗತಿಯೇ. ಇಂತಹ ದಿನಗಳಲ್ಲಿ ಪ್ರೇಮಿಗಳ ದಿನಾಚರಣೆಗಿಂತ ವಿಶ್ವ ಗುಬ್ಬಚ್ಚಿ ದಿನಾಚರಣೆ ಅರ್ಥವತ್ತಾಗಿ ಕಾಣುತ್ತಿದೆ!.

ಇಂದು ವಿಶ್ವ ಗುಬ್ಬಚ್ಚಿ ದಿನ. ಆದರೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲೆಡೆ ಗುಬ್ಬಚ್ಚಿ ಸಂಕುಲ ಮಾಯವಾಗುತ್ತಿರುವುದು ನೋವಿನ ಸಂಗತಿ. ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿಗಳ ಕಲರವ ಹಳ್ಳಿಗಾಡಿನಿಂದಲೂ ದೂರವಾಗಿವೆ, ಇದಕ್ಕೆ ಕಾರಣಗಳು ಹತ್ತು ಹಲವು ಪ್ರಮುಖವಾಗಿ ಸಕಾಲಕ್ಕೆ ಮಳೆಬಾರದೆ ಬೆಳೆಯಾಗದಿರುವುದೂ ಒಂದು.

ಹಸಿರಿನಿಂದ ಕಂಗೊಳಿಸುತ್ತಿದ್ದ ಬಹತೇಕ ಹಳ್ಳಿಗಳು ಈಗ ಬೆಂಗಾಡಿನಂತಾಗಿವೆ. ಉತ್ತಿ ಬೆಳೆಯುವ ರೈತ ಹೊಲ-ಗದ್ದೆಗಳ ಕಡೆ ಕಣ್ಣೆತ್ತಿಯೂ ನೋಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರಾಗಿ, ಜೋಳ, ಭತ್ತ ಸೇರಿದಂತೆ, ಹಲವಾರು ಬೆಳೆಗಳು ಅಷ್ಟಾಗಿ ಕಾಣುತ್ತಿಲ್ಲ.

ಗುಬ್ಬಚ್ಚಿ ಸೇರಿದಂತೆ ಪಕ್ಷಿ ಸಂಕುಲಕ್ಕೆ ಆಹಾರ ಮೂಲಗಳು ಈ ಬೆಳೆಗಳು, ಕ್ರಮೇಣ ಈ ಬೆಳೆಗಳು ದೂರವಾದಂತೆ ಗುಬ್ಬಚ್ಚಿಗಳಿಗೂ ಆಹಾರ, ನೀರು ಇಲ್ಲದೆ ಆ ಸಂತತಿಯೂ ಕಣ್ಮರೆಯಾಗಿದೆ.ಬೆಂಗಳೂರು ಸೇರಿದಂತೆ ರಾಜ್ಯದಲ್ಲೆಡೆ ಮೊಬೈಲ್ ಟವರ್‌ಗಳ ಹಾವಳಿಯಿಂದ ಗುಬ್ಬಚ್ಚಿ ಸಂಕುಲಕ್ಕೆ ಮಾರಕವಾಗಿ ಪರಿಣಮಿಸಿದೆ.

ಮೊಬೈಲ್ ಟವರ್‌ಗಳಿಂದ ಹೊರಹೋಗುವ ತರಂಗಗಳು ಗುಬ್ಬಚ್ಚಿಗಳ ಜೀವಕ್ಕೆ ಮಾರಕ ಎಂದು ಪರಿಸರ ತಜ್ಞರು ಬೊಬ್ಬೆ ಹೊಡೆಯುತ್ತಿದ್ದರೂ ಅವರ ಮಾತುಗಳಿಗೆ ಇಂದು ಬೆಲೆ ಇಲ್ಲದಂತಾಗಿದೆ. ಗುಬ್ಬಚ್ಚಿ ಸಂಕುಲ ಸಂರಕ್ಷಣೆಗೆ ಹಲವು ಪ್ರಯತ್ನಗಳು ನಡೆದಿವೆಯಾದರೂ ಇನ್ನೂ ನಿರೀಕ್ಷಿತ ಫಲ ದೊರೆತಿಲ್ಲ.

Write A Comment