ರಾಷ್ಟ್ರೀಯ

ಕೈಗಳೇ ಇಲ್ಲದ ಕಲಾವಿದೆಯ ಕುಂಚದಲ್ಲಿ ಅರಳಿದ ಕಲೆ…

Pinterest LinkedIn Tumblr

Sarita Dwivedi, who lost her right leg and two hands in an accident at the age of 4, busy in making a Madhubani painting in Shilpotsav, the  ongoing art exhibition organised by Upendra Maharathi Shilp Anusandhan Sansthan in Patna on Friday Pix by Nagendra Kumar Singh Story by Shuchi

ಈ ಸುಂದರ ಕಲಾಕೃತಿಗಳು ಎಂಥವರ ಮನಸ್ಸನ್ನಾದ್ರೂ ಸೂರೆಗೊಳ್ಳುತ್ತವೆ. ಕಲಾವಿದನ ಕೈಚಳಕ ನೋಡಿ ಕಲಾ ಪ್ರೇಮಿಗಳು ಬೆರಗಾಗುತ್ತಾರೆ. ಆದ್ರೆ ಈ ಅದ್ಭುತ ಶಿಲ್ಪಕಲೆಗಳ ಸೃಷ್ಟಿಕರ್ತೆ ಕೈಗಳೇ ಇಲ್ಲದ ಅಸಾಧಾರಣ ಕಲಾವಿದೆ. ಹೌದು, ಅಲಹಾಬಾದ್ನ ಸರಿತಾ ದ್ವಿವೇದಿ ನಾಲ್ಕು ವರ್ಷದವರಿದ್ದಾಗ್ಲೇ ಕೈಯನ್ನು ಕಳೆದುಕೊಂಡಿದ್ರು. ೧೧,೦೦೦ ವೋಲ್ಟೇಜ್ ವಿದ್ಯುತ್ ಹರಿಯುತ್ತಿದ್ದ ಹೈಟೆನ್ಷನ್ ವೈರ್ ತಗುಲಿದ್ರಿಂದ ಸರಿತಾ ತಮ್ಮೆರಡು ಕೈಗಳು ಹಾಗೂ ಬಲಗಾಲನ್ನೇ ಕಳೆದುಕೊಂಡಿದ್ರು. ಆದ್ರೆ ಅಂಗವೈಕಲ್ಯ ಅವರ ಆತ್ಮವಿಶ್ವಾಸಕ್ಕೆ ಅಡ್ಡಿಯಾಗಲೇ ಇಲ್ಲ.

sarita1

“ವಿಕಲಾಂಗತೆಯನ್ನು ಮೆಟ್ಟಿ ನಿಲ್ಲಲು ನಾನು ನನ್ನ ಸೃಜನಶೀಲತೆಯನ್ನು ಬಳಸಿಕೊಂಡೆ. ನಾನು ಸಾಮಾನ್ಯ ಮಕ್ಕಳಂತೆ ಬೆಳೆದೆ, ನನ್ನ ಕುಟುಂಬದವರು ಪ್ರತಿ ಹೆಜ್ಜೆಗೂ ನನ್ನನ್ನು ಬೆಂಬಲಿಸಿದ್ರು. ಓದಿನಿಂದ ಬಿಡುವು ಸಿಕ್ಕಿದಾಗಲೆಲ್ಲ ನಾನು ಚಿತ್ರ ಬಿಡಿಸುತ್ತಿದ್ದೆ” ಎನ್ನುತ್ತಾರೆ ಸರಿತಾ. ಅವರು ಕೇವಲ ಕಲಾವಿದೆ ಮಾತ್ರವಲ್ಲ, ಹೊಲಿಗೆ, ಕರಕುಶಲ ವಸ್ತುಗಳ ತಯಾರಿಕೆ ಮತ್ತು ಮಣ್ಣಿನ ಮಾದರಿಗಳನ್ನು ತಯಾರಿಸುವುದರಲ್ಲಿ ಪರಿಣಿತರು.

ಅಂಗವೈಕಲ್ಯಕ್ಕೆ ಸವಾಲೊಡ್ಡಿ ಅವರು ಸ್ವಾವಲಂಬಿಯಾಗಿದ್ದಾರೆ. ಸರಿತಾ ಅಲಹಾಬಾದ್ನ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. ಚಿಕ್ಕಂದಿನಿಂದ್ಲೂ ಗ್ರೀಟಿಂಗ್ ಕಾರ್ಡ್ಗಳ ತಯಾರಿಕೆ, ರಂಗೋಲಿ ಸ್ಪರ್ಧೆಗಳಲ್ಲಿ ಸರಿತಾ ಭಾಗವಹಿಸುತ್ತಿದ್ರು. ಡ್ರಾಯಿಂಗ್ ಶಿಕ್ಷಕಿ ಇಂದು ಪಾಂಡೆ ಸರಿತಾ ಅವರ ಪೇಂಟಿಂಗ್ಗಳನ್ನು ಮೆಚ್ಚಿಕೊಳ್ಳುತ್ತಿದ್ರು, ಸದಾ ಅವರನ್ನು ಪ್ರೋತ್ಸಾಹಿಸುತ್ತಿದ್ರು.

“ಬಾಲ ಶ್ರೀ ಪ್ರಶಸ್ತಿ ಒಲಿದು ಬಂದಾಗ, ನನ್ನಲ್ಲಿ ಕಲೆಯ ಬಗ್ಗೆ ಎಂತಹ ಆಸಕ್ತಿ ಇದೆ ಅನ್ನೋದು ಅರಿವಾಗಿತ್ತು. ಈ ಗೆಲುವು ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಪೇಂಟಿಂಗ್ ಅನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಆಗ ನಾನು ನಿರ್ಧರಿಸಿದ್ದೆ.

ಅಲಹಾಬಾದ್ ವಿಶ್ವವಿದ್ಯಾನಿಲಯದ ಫೈನ್ ಆಟ್ರ್ಸ್ ಡಿಪಾರ್ಟ್ಮೆಂಟ್ನ ಮುಖ್ಯಸ್ಥರಾಗಿದ್ದ ಅಜಯ್ ಜೇಟ್ಲಿ ಅವರು ಕೂಡ ನಾನು ಗುರಿ ತಲುಪಲು ಅಪಾರ ಪ್ರೋತ್ಸಾಹ ನೀಡಿದ್ದಾರೆ. ೬ನೇ ತರಗತಿಯಲ್ಲಿದ್ದಾಗ ನಾನವರನ್ನು ಭೇಟಿಯಾಗಿದ್ದೆ, ಚಿತ್ರಕಲೆಯ ಸೂಕ್ಷ್ಮಗಳನ್ನೆಲ್ಲ ಅವರು ತಿಳಿಸಿಕೊಟ್ಟಿದ್ದಾರೆ” ಅಂತಾ ಸರಿತಾ ಹೆಮ್ಮೆಯಿಂದ ಹೇಳಿಕೊಳ್ತಾರೆ. ಭಾರತ ಸರ್ಕಾರ ನೀಡುವ ‘ಮೈಂಡ್ ಆಫ್ ಸ್ಟೀಲ್’ ಪ್ರಶಸ್ತಿಗೂ ಸರಿತಾ ಭಾಜನರಾಗಿದ್ದಾರೆ.

ಸದ್ಯ ಸರಿತಾ ಅಲಹಾಬಾದ್ ವಿಶ್ವವಿದ್ಯಾನಿಲಯದ ಫೈನ್ ಆರ್ಟ್ಸ್ ವಿದ್ಯಾರ್ಥಿನಿ.

“ನನ್ನನ್ನು ಒಬ್ಬ ಪ್ರತಿಭಾವಂತ ಕಲಾವಿದೆಯಾಗಿ ಜನರು ಗುರುತಿಸಬೇಕೆಂದು ನಾನು ಬಯಸಿದ್ದೆ. ನನ್ನ ಅಂಗವೈಕಲ್ಯದಿಂದಾಗಿಯೇ ಜನರು ನನ್ನನ್ನು ನೆನಪಿನಲ್ಲಿಟ್ಟುಕೊಳ್ಳುವಂತಾಗಬಾರದು. ಯಾಕಂದ್ರೆ ನನ್ನ ನಿತ್ಯ ಜೀವನದಲ್ಲಿ ಅದರಿಂದ ಯಾವುದೇ ಅಡ್ಡಿಯಾಗಿಲ್ಲ” ಅನ್ನೋದು ಸರಿತಾ ಅವರ ಮನದಾಳದ ಮಾತು. “ಹೆತ್ತವರಾಗಿ ನಾವು ಅವರ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದೆವು, ಅವಳ ಮುಂದೆ ಬೆಟ್ಟದಂತಹ ಸವಾಲಿತ್ತು. ಇ

ಬ್ಬರು ಸಹೋದರಿಯರು ಹಾಗೂ ಒಬ್ಬ ಸಹೋದರ ಕೂಡ ಇನ್ನೂ ನೆಲೆ ಕಂಡುಕೊಂಡಿರಲಿಲ್ಲ. ಆದ್ರೀಗ ಮಗಳ ಸಾಧನೆ ನೋಡಿ ಹೆಮ್ಮೆ ಉಂಟಾಗುತ್ತದೆ. ಹತ್ತಾರು ಪ್ರಶಸ್ತಿಗಳು ಅವಳನ್ನು ಅರಸಿ ಬಂದಿವೆ. ಅವಳ ಚಿತ್ರಕಲೆಗಳಿಗೆ ಪ್ರಾಯೋಜಕರಾಗಲು ಯಾರಾದರೂ ಮುಂದೆ ಬಂದರೆ, ಅವಳ ವಿದ್ಯಾಭ್ಯಾಸದ ಖರ್ಚು ವೆಚ್ಚಗಳನ್ನು ಭರಿಸಿದ್ರೆ ನಮಗೆ ನಿಜಕ್ಕೂ ಸಂತೋಷವಾಗುತ್ತದೆ”.

ಎನ್ನುತ್ತಾರೆ ಸರಿತಾ ಅವರ ತಾಯಿ ವಿಮ್ಲಾದೇವಿ. ಸರಿತಾಳ ತಾಯಿ ಎಂದೆನಿಸಿಕೊಳ್ಳಲು ವಿಮ್ಲಾದೇವಿ ಹೆಮ್ಮೆಪಡುತ್ತಾರೆ.

“ಅಂಗವಿಕಲತೆ ಇದ್ರೆ ಏನನ್ನೋ ಮಾಡಲು ಸಾಧ್ಯವಿಲ್ಲ ಅನ್ನೋದು ಸುಳ್ಳು. ಅಂಗವೈಕಲ್ಯ ಕೇವಲ ಮನಸ್ಸಿನ ಭ್ರಮೆ ಅಷ್ಟೆ” ಎನ್ನುತ್ತಾರೆ ಸರಿತಾ. ಕೈಗಳಿಲ್ಲದಿದ್ರೇನಂತೆ, ಹಲ್ಲುಗಳ ನಡುವೆ, ಕಾಲ್ಬೆರಳ ನಡುವೆ ಕುಂಚವನ್ನಿಟ್ಟುಕೊಂಡು ಅತ್ಯದ್ಭುತ ಚಿತ್ರಗಳನ್ನು ಸರಿತಾ ಬಿಡಿಸಿದ್ದಾರೆ. ಸರಿತಾ ಅವರ ಕಲಾ ಪ್ರೇಮ ಮತ್ತು ಜೀವನೋತ್ಸಾಹ ಎಲ್ಲರಿಗೂ ಮಾದರಿಯಾಗುವಂಥದ್ದು. ಸರಿತಾ ಇನ್ನಷ್ಟು ಅತ್ಯುತ್ತಮ ಪೇಂಟಿಂಗ್ಗಳ ಮೂಲಕ ಹೆಸರು ಮಾಡಲಿ, ಉಜ್ವಲ ಭವಿಷ್ಯ ಅವರದ್ದಾಗಲಿ ಅನ್ನೋದೇ ಎಲ್ಲರ ಹಾರೈಕೆ.

Write A Comment