ಕರ್ನಾಟಕ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಸಿಬಿಐ ದಿಢೀರ್ ದಾಳಿ : 8 ಮಂದಿ ಕಸ್ಟಮ್ಸ್ ಅಧಿಕಾರಿಗಳ ಬಂಧನ

Pinterest LinkedIn Tumblr

CBIಬೆಂಗಳೂರು, ಮಾ.19-ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಿಢೀರ್ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಆಮದಾಗುತ್ತಿದ್ದ ವಸ್ತುಗಳಿಗೆ ಸುಂಕ ತೆರಿಗೆ ವಂಚಿಸುತ್ತಿದ್ದ 8 ಕಸ್ಟಮ್ಸ್ ಅಧಿಕಾರಿಗಳನ್ನು ಬಂಧಿಸಿದ್ದಾರೆ. ನರಸಿಂಹಸ್ವಾಮಿ, ಸುಂದರಂ, ವಿಶ್ವೇಶ್ವರಭಟ್, ಪ್ರೇಮ್‌ಕುಮಾರ್, ಸೋಮಸುಂದರ್ ಸೇರಿದಂತೆ 8 ಮಂದಿ ಕಸ್ಟಮ್ಸ್ ಅಧಿಕಾರಿಗಳನ್ನು ಬಂಧಿಸಿರುವ ಸಿಬಿಐ ಅಧಿಕಾರಿಗಳು, ಬಂಧಿತರಿಂದ 75 ಸಾವಿರ ರೂ. ಹಣ ವಶಪಡಿಸಿಕೊಂಡಿದ್ದಾರೆ.

ಅಧಿಕಾರಿಗಳಿಂದ ದಾಖಲೆಗಳು ಮತ್ತು ಆಮದಾಗುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿರುವ ಸಿಬಿಐ ಅಧಿಕಾರಿಗಳು, ಕಸ್ಟಮ್ಸ್ ಅಧಿಕಾರಿಗಳ ಮನೆ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿರುವ ಅಧಿಕಾರಿಗಳು, ಬಂಧಿತ ಕಸ್ಟಮ್ಸ್ ಅಧಿಕಾರಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ. ಇಂಪೋರ್ಟ್ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಕಸ್ಟಮ್ಸ್ ಅಧಿಕಾರಿಗಳು ಏರ್ ಇಂಡಿಯಾ ಕಾರ್ಗೋ ಕಾಂಪ್ಲೆಕ್ಸ್, ಏರ್ ಕಾರ್ಗೋ ಕಾಂಪ್ಲೆಕ್ಸ್ ಮೂಲಕ ಆಮದಾಗುತ್ತಿದ್ದ ವಸ್ತುಗಳಿಗೆ ತೆರಿಗೆಯನ್ನು ವಂಚಿಸುತ್ತಿದ್ದರು. ಇದಕ್ಕಾಗಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಜಾಡು ಹಿಡಿದ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ತೆರಿಗೆ ವಂಚಿಸುತ್ತಿದ್ದ ಕಸ್ಟಮ್ಸ್ ಅಧಿಕಾರಿಗಳನ್ನು ಬಂಧಿಸಿದ್ದಲ್ಲದೆ, ಇವರ ಪರವಾಗಿ ಹಣ ವಸೂಲಿ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ದಾಖಲೆಗಳು ಹಾಗೂ ಆಮದಾದ ವಸ್ತುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Write A Comment