ಕರ್ನಾಟಕ

ಲೋಕಾಯುಕ್ತ ದಿಂದ ACBಗೆ ಪ್ರಮುಖ 700 ಪ್ರಕರಣಗಳ ವರ್ಗಾವಣೆ : ನಿಟ್ಟುಸಿರುಬಿಟ್ಟ ರಾಜಕಾರಣಿಗಳು

Pinterest LinkedIn Tumblr

lokaಬೆಂಗಳೂರು, ಮಾ.17- ದೇಶಕ್ಕೆ ಮಾದರಿಯಾಗಿ ಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿಗಳಿಗೆ ಶ್ರೀಕೃಷ್ಣನ ಜನ್ಮಸ್ಥಳದ ದರ್ಶನ ಮಾಡಿಸಿದ್ದ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಪರ್ಯಾಯವಾಗಿ ರಚನೆಯಾಗಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಿಂದ ಪ್ರಮುಖ 700 ಪ್ರಕರಣಗಳು ಹಳ್ಳ ಹಿಡಿಯುವ ಸಾಧ್ಯತೆಯಿದೆ. ಏಕೆಂದರೆ ರಾಜ್ಯ ಸರ್ಕಾರ ಸ್ಥಾಪಿಸಿರುವ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಲೋಕಾಯುಕ್ತ ಸಂಸ್ಥೆಯ ಸುಮಾರು 700 ಕ್ಕೂ ಅಧಿಕ ಪ್ರಕರಣಗಳನ್ನು ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ. ಗೃಹ ಸಚಿವಾಲಯದ ಅಧೀನದ ಎಡಿಜಿಪಿ ಶ್ರೇಣಿಯ ಅಧಿಕಾರಿಯೊಬ್ಬರು ಎಸಿಬಿ ಮುಖ್ಯಸ್ಥರಾಗಲಿದ್ದು, ಇವರ ಅಧೀನದದಲ್ಲಿ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆ ನಡೆಸಲಾಗುತ್ತದೆ.ಅಲ್ಲದೆ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಲೋಕಾಯುಕ್ತ ಸಂಸ್ಥೆ ದಾಖಲಿಸಿಕೊಂಡಿರುವ 700ಕ್ಕೂ ಹೆಚ್ಚು ಪ್ರಕರಣಗಳನ್ನು ಎಸಿಬಿಯೇ ತನಿಖೆ ನಡೆಸಲಿದೆ.

700ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪ್ರಮುಖವಾಗಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಕೇಳಿಬಂದಿರುವ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಹಾಗೂ ಇತ್ತೀಚೆಗೆ ದಾಖಲಾಗಿರುವ ಹಿರಿಯ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ವಿರುದ್ಧದ ಪ್ರಕರಣ ಕೂಡ ಎಸಿಬಿ ವ್ಯಾಪ್ತಿಗೆ ಬರಲಿರುವ ಮಾಹಿತಿ ಲಭ್ಯವಾಗಿದ್ದು,ಈ ಮೂಲಕ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸಲು ಸರ್ಕಾರ ಮುಂದಾಗಿದೆ ಎಂಬ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಲೋಕಾಯುಕ್ತ ಸಂಸ್ಥೆಯ ಬಳಿ ಸುಮಾರು 12 ಸಾವಿರಕ್ಕೂ ಅಧಿಕ ತನಿಖೆಗೊಳಪಡದ ದೂರುಗಳು ದಾಖಲಾಗಿದ್ದು, ಈ ಪೈಕಿ ರಾಜ್ಯ ಸರ್ಕಾರ 700 ಪ್ರಕರಣಗಳನ್ನು ಎಸಿಬಿ ವ್ಯಾಪ್ತಿಗೆ ರವಾನೆ ಮಾಡಿದೆ.

ಇದಲ್ಲದೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದಾಖಲಾಗಿರುವ ಇತರೆ 800 ಪ್ರಕರಣಗಳ ತನಿಖೆಯನ್ನು ಕೂಡ ಎಸಿಬಿ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಚಿಂತಿಸಿದೆ. ಇದರಲ್ಲಿ ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ರೋಷನ್ ಬೇಗ್, ಕೆ.ಜೆ.ಜಾರ್ಜ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಆರ್.ಅಶೋಕ್, ಹಾಲಿ ಶಾಸಕರು, ಮಾಜಿ ಸಚಿವರು ಲೋಕಾಯುಕ್ತ ಕಂಟಕದಿಂದ ಪಾರಾಗಲಿದ್ದಾರೆ. ವಿಶೇಷವಾಗಿ ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಸಿದ್ದರಾಮಯ್ಯ ಪಾರಾಗುವುದು ಬಹುತೇಕ ಖಚಿತವಾಗಿದೆ. ಈವರೆಗೂ ಲೋಕಾಯುಕ್ತ ಅಧಿಕಾರಿಗಳೇ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸುತ್ತಿದ್ದರು.

ಆದರೆ, ಸರ್ಕಾರ ರಚನೆ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ ಒಂದು ರೀತಿ ಹಲ್ಲಿಲ್ಲದ ಹಾವಿನಂತೆ ಕೆಲಸ ಮಾಡಬೇಕಾಗಿದೆ. ಏಕೆಂದರೆ, ಎಸಿಬಿಗೆ ಮುಖ್ಯಸ್ಥರನ್ನಾಗಿ ಎಡಿಜಿಪಿ ದರ್ಜೆಯ ಅಧಿಕಾರಿಯನ್ನು ನೇಮಕ ಮಾಡುವ ಅಧಿಕಾರ ಮುಖ್ಯಮಂತ್ರಿಗಿರುತ್ತದೆ. ಸ್ವತಃ ರಾಜ್ಯದ ಮುಖ್ಯಮಂತ್ರಿ ಮೇಲೆ ಅಕ್ರಮ ಡಿ ನೋಟಿಫಿಕೇಷನ್ ಪ್ರಕರಣ ಕೇಳಿಬಂದಿರುವುದರಿಂದ ಎಸಿಬಿ ಮುಖ್ಯಸ್ಥರಾಗುವ ಎಡಿಜಿಪಿ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೆ ದೂರು ದಾಖಲಿಸುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಪ್ರಕರಣಗಳ ಕುರಿತು ಮುಖ್ಯಮಂತ್ರಿಗೆ ಮೊದಲು ಮಾಹಿತಿ ನೀಡಬೇಕು.

ನಂತರ ವಿಚಾರಣೆ ನಡೆಸಿ ದೂರು ದಾಖಲಿಸಬೇಕು. ಈ ಹಿಂದೆ ಲೋಕಾಯುಕ್ತ ಪೊಲೀಸರು ಯಾರ ವಿರುದ್ಧವಾದರೂ ಸರಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸುತ್ತಿದ್ದರು. ಇದೀಗ ಇದನ್ನು ಕಿತ್ತುಕೊಂಡಿರುವ ಸರ್ಕಾರ ತಮ್ಮ ಕೈ ಕೆಳಗೆ ಕೆಲಸ ಮಾಡುವ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತದೆ. ವಿರೋಧ ಪಕ್ಷಗಳು ಹಾಗೂ ಕೆಲ ಅಧಿಕಾರಿಗಳನ್ನು ಗುರಿಯಾಗಿಟ್ಟುಕೊಂಡು ಹಣಿಯಲು ಆಡಳಿತಾರೂಢ ಸರ್ಕಾರಕ್ಕೆ ಇದು ನೆರವಾಗುವ ಸಾಧ್ಯತೆಯಿದೆ.

700 ಪ್ರಕರಣಗಳು ದಾಖಲು:

ಈ ಹಿಂದೆ ಲೋಕಾಯುಕ್ತ ಸಂಸ್ಥೆಗೆ ಮುಖ್ಯಸ್ಥರಾಗಿದ್ದ ಭಾಸ್ಕರ್‌ರಾವ್ ಅವಧಿಯಲ್ಲಿ 700 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಪ್ರಮುಖವಾಗಿ ಸಿದ್ದರಾಮಯ್ಯ, ಕೆ.ಜೆ.ಜಾರ್ಜ್ ಮತ್ತು ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ. ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ, ನೂತನ ಎಸಿಬಿ ಮುಖ್ಯಸ್ಥ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ಎದುರಾಗಿದೆ. ಇದು ಒಂದು ರೀತಿ ಕುರಿ ಕಾಯಲು ತೋಳವನ್ನು ನೇಮಿಸಿದಂತಾಗಿದೆ ಸರ್ಕಾರದ ಪರಿಸ್ಥಿತಿ. ಒಟ್ಟು 700 ಪ್ರಕರಣಗಳು, 12 ಸಾವಿರ ದೂರುಗಳು ವಿಚಾರಣಾ ಹಂತದಲ್ಲಿವೆ. ಪ್ರಮುಖವಾಗಿ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ವಿರುದ್ಧವೂ ಸದ್ಯದಲ್ಲೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಲಿದೆ.

ಈಗ ಸರ್ಕಾರ ಸಂಸ್ಥೆಗೆ ಕೊನೆಯ ಮೊಳೆ ಹೊಡೆದಿರುವುದರಿಂದ ಭ್ರಷ್ಟ ಅಧಿಕಾರಿಗಳು ಕೂಡ ಶಿಕ್ಷೆಯಿಂದ ಪಾರಾಗಲಿದ್ದಾರೆ. ಅನೇಕ ನಿವೃತ್ತ ನ್ಯಾಯಾಧೀಶರು, ಕಾನೂನು ತಜ್ಞರು ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಎಸಿಬಿ ಮುಖ್ಯಸ್ಥರಾಗುವವರು ಸರ್ಕಾರದ ಕೆಳಗೆ ಕೆಲಸ ನಿರ್ವಹಣೆ ಮಾಡಬೇಕಾಗಿದೆ. ಇಂಥವರಿಂದ ಸಮಾಜದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ತರಲು ಸಾಧ್ಯವೇ ಎಂಬುದು ಕೆಲವರ ಅನುಮಾನ.

Write A Comment