ಕರ್ನಾಟಕ

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿ ತಲೆಮರಿಸಿಕೊಂಡಿದ್ದ ಐವರು ಬಂಧನ

Pinterest LinkedIn Tumblr

kshನೆಲಮಂಗಲ, ಮಾ.17-ಕ್ಷುಲ್ಲಕ ವಿಚಾರದ ಜಗಳದ ದ್ವೇಷದಿಂದ ಸ್ನೇಹಿತನನ್ನೇ ಕೊಲೆ ಮಾಡಿ ಶವಸುಟ್ಟು ಏನೂ ಅರಿಯದವರಂತೆ ಇದ್ದ ಐದು ಜನರನ್ನು ಬಂಧಿಸುವಲ್ಲಿ ನೆಲಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ. ವೆಂಕಟೇಶ್ ಅಲಿಯಾಸ್ ವೆಂಕಿ, ನವೀನ್ ಅಲಿಯಾಸ್ ಆಟೋ ನವೀನ್, ವಿಕಾಸ್ ಅಲಿಯಾಸ್ ವಿಕ್ಕಿ, ಕಿರಣ್ ಅಲಿಯಾಸ್ ಮಂಜ ಮತ್ತು ಸಚಿನ್ ಬಂಧಿತ ಹಂತಕರು. ಮ್ಯಾಕ್ಸಿಕ್ಯಾಬ್ ಚಾಲಕ ಪ್ರದೀಪ್ ಅಲಿಯಾಸ್ ಕ್ವಾರ್ಟರ್(25) ಸ್ನೇಹಿತರಿಂದಲೇ ಕೊಲೆಯಾದವನು. ಕಳೆದ 10 ತಿಂಗಳ ಹಿಂದೆ ಪ್ರದೀಪ್‌ನನ್ನು ಕೊಲೆ ಮಾಡಿ ಪೆಟ್ರೋಲ್ ಸುರಿದು ಶವ ಸುಟ್ಟು ಹಾಕಿದ್ದರು. 2015ರ ಮೇ ತಿಂಗಳಲ್ಲಿ ಅರ್ಧ ಬೆಂದ ಶವ ಪತ್ತೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಮೃತನ ಗುರುತು ಪತ್ತೆಯಾಗಿರಲಿಲ್ಲ.

ತನಿಖೆ ಮುಂದುವರೆಸಿದ್ದ ಪೊಲೀಸರು, ಅಪರಾಧ ಹಿನ್ನೆಲೆವುಳ್ಳ ಸಚಿನ್‌ನನ್ನು ವಶಕ್ಕೆ ಪಡೆದು ಮ್ಯಾಕ್ಸಿ ಕ್ಯಾಬ್ ಚಾಲಕ ಪ್ರದೀಪ್ ಕಾಣೆಯಾಗಿರುವ ಬಗ್ಗೆ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಎಸ್‌ಪಿ ರಮೇಶ್‌ಬಾನೂತ್ ತಿಳಿಸಿದರು. ಈತ ನೀಡಿದ ಸುಳಿವಿನ ಮೇರೆಗೆ ಪೊಲೀಸರು ಉಳಿದ ನಾಲ್ವರನ್ನು ಬಂಧಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಸಂಜಯ್ ಮತ್ತು ಕೀರ್ತಿಗಾಗಿ ಶೋಧ ನಡೆಸುತ್ತಿದ್ದಾರೆ. ಕೊಲೆಯಾದ ಪ್ರದೀಪ್ ಹಾಗೂ ಆರೋಪಿಗಳು ಸ್ನೇಹಿತರಾಗಿದ್ದು, ಕ್ಷುಲ್ಲಕ ವಿಚಾರಕ್ಕೆ ಪ್ರದೀಪ್ ಹಾಗೂ ವೆಂಕಟೇಶ್ ನಡುವೆ ಜಗಳವಾಗಿದ್ದು, ಇದೇ ದ್ವೇಷದಲ್ಲಿ ಆತನ ಕೊಲೆಗೆ ಸಂಚು ರೂಪಿಸಿದ್ದಾನೆ. ಅದರಂತೆ 2015ರ ಮೇ 6ರಂದು ರಾತ್ರಿ ಆರೋಪಿಗಳೆಲ್ಲರೂ ಕುದುರೆಗೆರೆಯ ಬಾರ್‌ವೊಂದರಲ್ಲಿ ಮದ್ಯ ಸೇವಿಸಿದ್ದಾರೆ.

ನಂತರ ವೆಂಕಟೇಶ್,ಕಿರಣ್, ಸಚಿನ್ ಮೂವರು ನೈಸ್ ರಸ್ತೆ ಸಮೀಪದ ನಿರ್ಜನ ಪ್ರದೇಶದ ನವಿಲೆ ಬಡಾವಣೆಗೆ ತೆರಳಿದ್ದು, ನವೀನ್ ಹಾಗೂ ವಿಕಾಸ್ ಕರೆ ಮಾಡಿ ಪ್ರದೀಪ್‌ನನ್ನು ಬಾರ್‌ಗೆ ಕರೆಸಿಕೊಂಡು ಮದ್ಯಪಾನ ಮಾಡಿಸಿದ್ದಾರೆ. ಸ್ನೇಹಿತರನ್ನು ನೋಡಿ ಬರುವ ಎಂದು ಪ್ರದೀಪ್‌ನನ್ನು ನವಿಲೆ ಬಡಾವಣೆಗೆ ಕರೆದೊಯ್ದಿದ್ದು, ಅಲ್ಲಿ ಇತರ ಆರೋಪಿಗಳ ಜೊತೆ ಸೇರಿ ವೆಂಕಟೇಶ್ ಆತನನ್ನು ಕೊಲೆ ಮಾಡಿ ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು ಎಂದು ಎಸ್ಪಿಯವರು ಘಟನೆ ಕುರಿತು ವಿವರಿಸಿದರು.

ಬಂಧಿತರ ವಿರುದ್ಧ ಬೆಂಗಳೂರಿನ ಕಾಮಾಕ್ಷಿಪಾಳ್ಯ, ಪೀಣ್ಯ, ಸೋಲದೇವನಹಳ್ಳಿ, ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ, ಮಂಡ್ಯದ ಬಸರಾಳು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು. ಸಿಪಿಐ ನಾಗೇಶ್, ಪಿಎಸ್‌ಐ ಅಶೋಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ನಿಗೂಢವಾಗಿದ್ದ ಕೊಲೆ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಂಡದ ಕಾರ್ಯವನ್ನು ಶ್ಲಾಘಿಸಿದರು.

Write A Comment