ಕರ್ನಾಟಕ

ಡಿಕೆ ರವಿ ನಿಗೂಢ ಸಾವು ಪ್ರಕರಣ: ಸಿಬಿಐ ವರದಿ ನಂತರ ಮುಂದಿನ ಕ್ರಮ: ಗೃಹ ಸಚಿವ ಪರಮೇಶ್ವರ

Pinterest LinkedIn Tumblr

Bangalore: BJP Leaders stage protest, pressing the demand a CBI probe into the death of IAS officer D K Ravi, in Bangalore on Wednesday. PTI Photo (PTI3_18_2015_000137A)

ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ. ರವಿ ನಿಗೂಢ ಸಾವಿನ ಪ್ರಕರಣವನ್ನು ಈಗಾಗಲೇ ಸಿಬಿಐ ವಹಿಸಲಾಗಿದ್ದು, ಸಿಬಿಐ ವರದಿ ನೀಡಿದ ನಂತರ ರಾಜ್ಯ ಸರ್ಕಾರ ಮುಂದಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಬುಧವಾರ ಹೇಳಿದ್ದಾರೆ.

ಇಂದು ಡಿ.ಕೆ. ರವಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಬೆಂಗಳೂರಿನ ಆನಂದ್ ರಾವ್ ವೃತ್ತದಲ್ಲಿ ನಡೆಯುತ್ತಿದ್ದ ಶ್ರದ್ಧಾಂಜಲಿ ಸಭೆ ಹಾಗೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪರಮೇಶ್ವರ ಅವರು, ಸಿಬಿಐ ವರದಿ ಬಂದ ನಂತರವೆ ಸರ್ಕಾರ ಮುಂದಿನ ಕ್ರಮ ತೆಗೆದುಕೊಳ್ಳಲಿದೆ ಮತ್ತು ಶೀಘ್ರ ವರದಿ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದರು. ಅಲ್ಲದೆ ಪ್ರತಿಭಟನೆ ಹಿಂಪಡೆಯುವಂತೆ ಡಿ.ಕೆ.ರವಿ ಕುಟುಂಬಸ್ಥರಿಗೆ ಪರಮೇಶ್ವರ ಮನವಿ ಮಾಡಿದರು. ಆದರೆ ಇದಕ್ಕೆ ಒಪ್ಪದ ಡಿ.ಕೆ.ರವಿ ತಾಯಿ ಗೌರಮ್ಮ, ನಾವು ಪ್ರತಿಭಟನೆ ಮಾಡುವುದಕ್ಕಾಗಿಯೇ ಬೆಂಗಳೂರಿಗೆ ಬಂದಿದ್ದು, ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿದ್ದಾರೆ.

ಇದುವರೆಗೆ ನನ್ನ ಮಗನ ಸಾವಿಗೆ ನ್ಯಾಯ ಸಿಕ್ಕಿಲ್ಲ. ಇನ್ನೊಂದು ವಾರದಲ್ಲಿ ರಾಜ್ಯ ಸರ್ಕಾರ ಸ್ಪಂದಿಸಬೇಕು. ಇಲ್ಲದಿದ್ದರೆ ಮಗನ ಶವವನ್ನು ಹೊರತೆಗೆದು ವಿಧಾನಸೌಧದ ಮುಂದಿಟ್ಟು ಪ್ರತಿಭಟಿಸುವುದಾಗಿ ಗೌರಮ್ಮ ಎಚ್ಚರಿಕೆ ನೀಡಿದ್ದಾರೆ.

ಮಗ ಡಿ.ಕೆ. ರವಿಯ ಮರಣೋತ್ತರ ಪರೀಕ್ಷೆ ಸರಿಯಾಗಿ ನಡೆದಿಲ್ಲ. ಇನ್ನೊಮ್ಮೆ ಮರಣೋತ್ತರ ಪರೀಕ್ಷೆ ಮಾಡಬೇಕು. ಆಗ ಸತ್ಯಾಂಶ ಹೊರಬರಲು ಸಾಧ್ಯವಿದೆ ಎಂದು ಗೌರಮ್ಮ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

ಕಳೆದ ಭಾನುವಾರ ಡಿ.ಕೆ.ರವಿ ಅವರ ಪುಣ್ಯತಿಥಿ ಅವರ ಹುಟ್ಟೂರು ದೊಡ್ಡಕೊಪ್ಪಲುವಿನಲ್ಲಿ ನಡೆದಿತ್ತು. ಈ ವೇಳೆ ಸರ್ಕಾರ ನನ್ನ ಮಗನನ್ನು ಸಂಪೂರ್ಣವಾಗಿ ಮರೆತಿದೆ ಎಂದು ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

Write A Comment