ಕರ್ನಾಟಕ

ಮೀನುಗಳ ಅಲಕ್ಷ್ಯಕ್ಕೆ ಮೇಯರ್ ಆಕ್ರೋಶ ಮೀನುಗಳ ಮಾರಣ ಹೋಮ

Pinterest LinkedIn Tumblr

fish-fiಬೆಂಗಳೂರು, ಮಾ. ೧೫- ಹಲಸೂರು ಕೆರೆ ನೀರು ಶುದ್ಧೀಕರಣಕ್ಕೆ ಬಿಬಿಎಂಪಿ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಆದರೆ ಮೀನುಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ವರ್ತನೆ ತೋರಿರುವ ಮೀನುಗಾರಿಕೆ ಇಲಾಖೆ ಅಧಿಕಾರಿಗಳನ್ನು ಮೇಯರ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೀನುಗಳ ಮಾರಣಹೋಮ ನಡೆದಿರುವ ಹಲಸೂರು ಕೆರೆಗೆ ವಾರ್ತಾ ಸಚಿವ ರೋಷನ್ ಬೇಗ್, ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಮೀನು ಸಾಗಾಣಿಕೆಗೆ ಟೆಂಡರ್ ತೆಗೆದುಕೊಂಡಾಗ ಕೆರೆಯಲ್ಲಿ ಆಮ್ಲಜನಕದ ಪ್ರಮಾಣವನ್ನು ಸರಿಯಾಗಿ ಇರುವಂತೆ ಕಾಪಾಡಿಕೊಳ್ಳಬೇಕಿತ್ತು ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು.

ಮೀನುಗಳ ಮಾರಣಹೋಮದ ಘಟನೆಯನ್ನು ಬಿಬಿಎಂಪಿ ಗಂಭೀರವಾಗಿ ಪರಿಗಣಿಸಿದೆ.

ಪಾಲಿಕೆಗೆ ಜನರ ಶಾಪ

ಮೀನುಗಾರಿಕೆ ಇಲಾಖೆ ಬೇಜವಾಬ್ದಾರಿತನದಿಂದ ಪಾಲಿಕೆಗೆ ಜನರು ಶಾಪ ಹಾಕುತ್ತಿದ್ದಾರೆ ಎಂದರು. ಮೀನುಗಳ ಮರಣವನ್ನು ತಡೆಗಟ್ಟಲು ಅಸಮರ್ಥವಾದ ಮೀನುಗಾರಿಕೆ ಇಲಾಖೆ ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಮಂಜುನಾಥ ರೆಡ್ಡಿ ಅವರು ಎಚ್ಚರಿಕೆ ನೀಡಿದರು.

ಕೆರೆ ನೀರನ್ನು ಶುದ್ಧೀಕರಿಸಲು ಪಾಲಿಕೆ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಇದರಿಂದ ನಾಗರಿಕರಿಗೆ ಅನುಕೂಲವಾಗಬೇಕು. ಅದು ಬಿಟ್ಟು ಕೆರೆ ಜಾಗದಲ್ಲಿ ಪರಿಸರ ಕೆಡದಿರುವಂತೆ ಕ್ರಮ ಏಕೆ ಕೈಗೊಂಡಿಲ್ಲ ಎಂದರು.

ಮುಖ್ಯಮಂತ್ರಿಗೆ ವಿವರ

ವಾರ್ತಾ ಸಚಿವ ರೋಷನ್ ಬೇಗ್ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಘಟನೆಯ ಬಗ್ಗೆ ಸಮಗ್ರವಾಗಿ ವಿವರ ನೀಡುವುದಾಗಿ ತಿಳಿಸಿದರು.

ಪರಿಸರ ಮಾಲಿನ್ಯ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಅವರು ಮಾತನಾಡಿ, ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆಗೆ 4 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಪ್ರತಿಕೂಲ ಪರಿಣಾಮ ಇಲ್ಲ

ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡುವುದರಿಂದ ಮೀನುಗಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದರು.

ಆ‌ಡಳಿತ ಪಕ್ಷದ ನಾಯಕ ಆರ್.ಎಸ್. ಸತ್ಯನಾರಾಯಣ, ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಸ್ಥಳೀಯ ಪಾಲಿಕೆ ಸದಸ್ಯೆ ಮಮತಾ ಶರವಣ ಹಾಗೂ ಬಿಬಿಎಂಪಿ, ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Write A Comment