ತುಮಕೂರು,ಮಾ.14- ಉದ್ಯಮಿ ದಂಪತಿಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರು ಮಹಾನಗರವನ್ನು ಬೆಚ್ಚಿಬೀಳಸಿದೆ. ಶಾಂತಿ ಸುವ್ಯವಸ್ಥೆಗೆ ಹೆಸರಾಗಿದ್ದ ಕಲ್ಪತರು ನಾಡಿನಲ್ಲಿ ಇತ್ತೀಚೆಗೆ ಅಪರಾಧ ಚಟುವಟಿಕೆಗಳು ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟಾಗಿದೆ. ನಿನ್ನೆ ತಡರಾತ್ರಿ ತುಮಕೂರಿನ ಅಶೋಕನಗರದ ಮನೆಯೊಂದರಲ್ಲಿ ರೈಸ್ಮಿಲ್ ಮಾಲೀಕ ಎಸ್.ಡಿ.ಗೋಪಾಲ್(60) ಹಾಗೂ ಅವರ ಪತ್ನಿ ರೂಪಾ ಗೋಪಾಲ್ ಅವರನ್ನು ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ.
ಆಸ್ತಿ ಹಿನ್ನೆಲೆಯಲ್ಲಿ ಸಂಬಂಧಿಕರೇ ಸುಫಾರಿ ಕೊಟ್ಟು ಈ ಕೃತ್ಯ ನಡೆಸದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ನಿನ್ನೆ ಘಟನೆ ನಡೆಯುವುದಕ್ಕೂ ಮುನ್ನ ಇವರ ಮಗ ಧೀರಜ್ ವಿವಾಹ ಸಂಬಂಧ ತಂದೆತಾಯಿಯೊಂದಿಗೆ ಗಲಾಟೆ ಮಾಡಿಕೊಂಡು ತೀವ್ರ ಆಕ್ರೋಶಗೊಂಡು ಹೊರ ಹೋಗಿದ್ದ. ನಂತರ ಮನೆಗೆ ವಾಪಸ್ ಬಂದಾಗ ತಂದೆತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಸ್ನೇಹಿತರಿಗೆ ಸುದ್ದಿ ಮುಟ್ಟಿಸಿ ನಂತರ ಎನ್ಇಪಿಎಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮನೆ ನವೀಕರಣ ಕಾರ್ಯ ನಡೆಯುತ್ತಿದ್ದು, ಕಳೆದ ಒಂದು ವಾರದ ಹಿಂದೆ ನವೀಕರಣ ಕಾರ್ಯವು ಸಹ ಸ್ಥಗಿತಗೊಂಡಿದ್ದು , ಈ ಹತ್ಯೆ ಪೂರ್ವ ನಿಯೋಜಿತವಾಗಿದೆ ಎಂದು ಶಂಕೆ ವ್ಯಕ್ತವಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಎನ್ಇಪಿಎಸ್ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ರಾಜು, ಚಿದಾನಂದಸ್ವಾಮಿ, ಎಎಸ್ಪಿ ಮಂಜುನಾಥ್ ಹಾಗೂ ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದು, ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕೃತ್ಯಕ್ಕೆ ಯಾವ ಆಯುಧ ಬಳಸಿದ್ದಾರೆ ಎಂಬುದು ತಿಳಿದುಬಂದಿಲ್ಲ.
ಸ್ಥಿತಿವಂತರಾಗಿದ್ದ ಎಸ್.ಡಿ.ಗೋಪಾಲ್ ಹಾಗೂ ಅವರ ಪತ್ನಿಯವರನ್ನು ಯಾರು ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಸಂಬಂಧ ಎನ್ಇಪಿಎಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.