
ಮೈಸೂರು: ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದ ವಿದ್ಯಾರ್ಥಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮುಂಡಿಬೆಟ್ಟದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯುವರಾಜ ಕಾಲೇಜಿನ ಬಿಎಸ್ಸಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದೀಪ್ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.
ಮೃತ ಯುವಕ ಪ್ರತಿ ಸೆಮಿಸ್ಟರ್ ನಲ್ಲಿ 2-3 ವಿಷಯಗಳಲ್ಲಿ ಫೇಲ್ ಆಗುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಮನನೊಂದಿದ್ದ ಸಂದೀಪ್ ನಿನ್ನೆ ರಾತ್ರಿ ಚಾಮುಂಡಿ ಬೆಟ್ಟದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದ. ತಕ್ಷಣವೇ ಈತನನ್ನು ಚಾಮುಂಡಿಬೆಟ್ಟದ ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದರಿಂದ ವೈದ್ಯರ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ. ಆತ ಸಾಯುವುದಕ್ಕೂ ಮುನ್ನ ಸೆಮಿಸ್ಟರ್‌ನಲ್ಲಿ ಫೇಲ್ ಆಗಿದ್ದಕ್ಕೆ ಹೀಗೆ ಮಾಡಿಕೊಂಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.
ಅಲ್ಲದೆ ಈ ವಿಚಾರವನ್ನು ಮನೆಯವರಿಗೆ ತಿಳಿಸಲು ಸ್ನೇಹಿತನ ಮೊಬೈಲ್ ನಂಬರ್ ಅನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.