ಕರ್ನಾಟಕ

ಹುತಾತ್ಮ ಯೋಧರ ಕುಟುಂಬದವರಿಗೆ KSRTCಯಿಂದ ಜೀವಮಾನ ಉಚಿತ ಬಸ್ ಪಾಸ್

Pinterest LinkedIn Tumblr

ramalinga
ಬೆಂಗಳೂರು, ಮಾ.8-ಸಿಯಾಚಿನ್ ಹಿಮಪಾತದಲ್ಲಿ ವೀರಮರಣ ಹೊಂದಿದ ಹುತಾತ್ಮ ಯೋಧರಾದ ಹನುಮಂತಪ್ಪ ಕೊಪ್ಪದ್ ಹಾಗೂ ನಾಗೇಶ್ ಅವರ ಕುಟುಂಬದವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಉಚಿತ ಜೀವಮಾನ ಪಾಸ್ ನೀಡಲಾಯಿತು. ಕೆಎಸ್‌ಆರ್‌ಟಿಸಿ ಇಂದು ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಮಹಾದೇವಿ ಕೊಪ್ಪದ್ ಹಾಗೂ ಹುತಾತ್ಮ ಯೋಧ ನಾಗೇಶ್ ಪತ್ನಿ ಆಶಾ ಅವರಿಗೆ ಉಚಿತ ಪಾಸ್ ಹಾಗೂ  ವೈಯಕ್ತಿಕವಾಗಿ ತಲಾ 50 ಸಾವಿರ ರೂ. ನೀಡಿ  ಗೌರವಿಸಿದರು.

ಮಹಾದೇವಿ ಕೊಪ್ಪದ್ ಮತ್ತು ಆಶಾ ಅವರು ಮಹಿಳಾ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಟ್ಟರು. ಇದೇ ವೇಳೆ ಸಂಸ್ಥೆಯ 18 ವಿಭಾಗ ಮತ್ತು ಕಾರ್ಯಾಗಾರಗಳ ಮಹಿಳಾ ನಿರ್ವಾಹಕಿಯರು ಮತ್ತು ಮಹಿಳಾ ತಾಂತ್ರಿಕ ಸಿಬ್ಬಂದಿಗಳಿಗೆ ಸನ್ಮಾನ ಮಾಡಲಾಯಿತು.ರಸಪ್ರಶ್ನೆ, ರಂಗೋಲಿ ಸ್ಪರ್ಧೆ, ಮ್ಯೂಸಿಕಲ್ ಛೇರ್, ಮಡಿಕೆ ಒಡೆಯುವ ಆಟಗಳಲ್ಲಿ ವಿಜೇತ ಸಿಬ್ಬಂದಿಗೆ ಬಹುಮಾನ  ವಿತರಿಸಲಾಯಿತು. ಮಹಿಳಾ ದಿನಾಚರಣೆ ಅಂಗವಾಗಿ ವೈದ್ಯಕೀಯ ಹಾಗೂ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ವಿಧಾನಪರಿಷತ್ ಸದಸ್ಯರಾದ ಜಯಮಾಲಾ, ತಾರಾ ಅನುರಾಧ, ಕಿದ್ವಾಯಿ ಆಸ್ಪತ್ರೆಯ ವೈದ್ಯೆ ಡಾ.ಅರುಣಾ, ಮಹಿಳಾ ಉದ್ಯಮಿ ಉಮಾರೆಡ್ಡಿ, ವಿಶ್ವಸಂಸ್ಥೆಯ ಪ್ರಶಸ್ತಿ ಪುರಸ್ಕೃತರಾದ ಅಶ್ವಿನಿ ಅಂಗಡಿ, ಕೆಎಸ್‌ಆರ್‌ಟಿಸಿ  ಉಪಾಧ್ಯಕ್ಷ ಲೋಹಿತ್ ಡಿ.ನಾಯ್ಕರ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಮಣರೆಡ್ಡಿ , ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದರ್‌ಕುಮಾರ ಕಟಾರಿಯಾ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

Write A Comment