ಕರ್ನಾಟಕ

‘ನ್ಯಾಯ ಕೊಡಿ, ಇಲ್ಲದಿದ್ದರೆ ದಯಾಮರಣ ನೀಡಿ’: ಮಕ್ಕಳೊಂದಿಗೆ ಅಹೋರಾತ್ರಿ ಮಹಿಳೆಯೊಬ್ಬರ ಪ್ರತಿಭಟನೆ

Pinterest LinkedIn Tumblr

court
ತುಮಕೂರು, ಮಾ.9- ನನ್ನ ಪತಿಯ ಸಾವಿಗೆ ಕಾರಣರಾದವರಿಗೆ  ಶಿಕ್ಷೆ ನೀಡಿ, ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ತುತ್ತಿನ ಚೀಲ ತುಂಬಿಸಿಕೊಳ್ಳಲು ಉದ್ಯೋಗ ನೀಡಿ ಇಲ್ಲವಾದರೆ ದಯಾಮರಣ ನೀಡಿ ಎಂದು ಮಹಿಳೆಯೊಬ್ಬರು ತನ್ನ ಐದು ಮಕ್ಕಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.  ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಯರ್ರದಕಟ್ಟೆ ಗ್ರಾಮದ ನಿವಾಸಿ ರಮೇಶನನ್ನು ಜಮೀನಿನ ವಿಚಾರವಾಗಿ ಹಿಂದೆ ಅದೇ ಗ್ರಾಮದ ಕೆಲವರು ಕೊಂದು ನಂತರ ವಿದ್ಯುತ್ ತಂತಿ ಮೇಲೆ ಶವವನ್ನಿಟ್ಟು ಆತ್ಮಹತ್ಯೆ ಎಂದು ಬಿಂಬಿಸಿದ್ದರು ಎಂದು ರಮೇಶನ ಪತ್ನಿ ಸುಶೀಲಮ್ಮ ದೂರಿದ್ದಾರೆ.

ನನಗೆ ಐದು ಹೆಣ್ಣು ಮಕ್ಕಳಿದ್ದಾರೆ. ಸಂಸಾರದ ಜವಾಬ್ದಾರಿ ಹೊತ್ತಿದ್ದ ನನ್ನ ಪತಿಯ ಸಾವಿನಿಂದ ನನ್ನ ಕುಟುಂಬ ಬೀದಿ ಪಾಲಾಗಿದೆ. ನನ್ನ ಐದೂ ಮಕ್ಕಳು ಓದುತ್ತಿದ್ದಾರೆ. ಅವರನ್ನು ಓದಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಜೀವನ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ ನನ್ನ ಪತಿ ಸಾವಿಗೆ ಕಾರಣರಾದವರನ್ನು ಬಂಧಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು  ಈಗಾಗಲೇ ಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿಗಳು ಕೂಡ ಸುಳ್ಳು ಭರವಸೆ ನೀಡಿದ್ದಾರೆ ಎಂದು ಅವರು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ನಾವು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನ್ಯಾಯಕ್ಕಾಗಿ ಅಹೋರಾತ್ರಿ ದಯಾಮರಣ ಕೋರಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ಕುರಿತು ರಾಜ್ಯಪಾಲರಿಗೆ, ಪ್ರಧಾನ ಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಬರೆಯಲಾಗಿದೆ. ಈಗಲೂ ನ್ಯಾಯ ದೊರಕದಿದ್ದರೆ ನಾವೆಲ್ಲರೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನೊಂದ ಮಹಿಳೆ ತಿಳಿಸಿದ್ದಾರೆ.

Write A Comment