ಕರ್ನಾಟಕ

ರಾಜ್ಯದಲ್ಲಿರುವ 1450 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಚಿಂತನೆ

Pinterest LinkedIn Tumblr

paraತುಮಕೂರು, ಮಾ.7-ರಾಜ್ಯದಲ್ಲಿರುವ 3351 ತಾಂಡಾಗಳ ಪೈಕಿ 1450 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ನಗರದ ಮರಳೂರು ದಿಣ್ಣೆಯಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಿಲ್ಲಾ ಬಂಜಾರ ಭವನದ ಶಂಕುಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಆಫ್ಘಾನಿಸ್ತಾನದ ಘೋರ್ ಪ್ರಾಂತ್ಯದ  ಮೂಲದವರಾದ ಲಂಬಾಣಿ ಜನಾಂಗ ಜೀವನೋಪಾಯಕ್ಕಾಗಿ ಊರಿನಿಂದ ಊರಿಗೆ ವಲಸೆ ಹೋಗುತ್ತಿದ್ದರು.  ಇದನ್ನು ತಡೆದು ಒಂದೇ ಕಡೆ ನೆಲೆಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ತಾಂಡಾ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಮುಂದಾಗಿದ್ದು, ಮಾರ್ಗಸೂಚಿಗಳ ಅನ್ವಯ 1450 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಗುರುತಿಸಲಾಗಿದೆ ಎಂದು ತಿಳಿಸಿದರು.

ಶಿವಮೊಗ್ಗ, ಚಿತ್ರದುರ್ಗ, ಗುಲ್ಬರ್ಗ, ಬಿಜಾಪುರ ಜಿಲ್ಲೆಗಳಲ್ಲಿ ಬಂಜಾರ ಭವನ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಮೈಸೂರು, ರಾಯಚೂರು, ಕೊಪ್ಪಳ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ  ಭವನಗಳು ನಿರ್ಮಾಣ ಹಂತದಲ್ಲಿವೆ. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಬಂಜಾರ ಭವನಕ್ಕೆ ಸರ್ಕಾರ ಮುಂದಾಗಿದೆ ಎಂದು ಹೇಳಿದರು. ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಸಮಾಜದಲ್ಲಿ ಇನ್ನೂ ಏಳ್ಗೆ ಕಾಣಬೇಕಾದ ಲಂಬಾಣಿ ಸಮುದಾಯಕ್ಕೆ ಭವನ ನಿರ್ಮಾಣ ಮಾಡುತ್ತಿರುವುದು ಸಂತಸದ ವಿಷಯ. ಸಂಕಷ್ಟದಲ್ಲಿರುವ ಜನಾಂಗದ ಹೆಣ್ಣುಮಕ್ಕಲ ಶಿಕ್ಷಣಕ್ಕಾಗಿ ಪ್ರತ್ಯೇಕ ವಿದ್ಯಾರ್ಥಿ ನಿಲಯದ ನಿರ್ಮಾಣದ ಚಿಂತನೆ ನಡೆಯಬೇಕಿದೆ. ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ನಿವೇಶನ ಒದಗಿಸಲು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕೆಂದು ಪರಮೇಶ್ವರ್ ಅವರಲ್ಲಿ ಮನವಿ ಮಾಡಿದರು.

ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಲಜಾ ನಾಯಕ್ ಮಾತನಾಡಿ, ತಾಂಡಾಗಳ ಮೂಲಭೂತ ಸೌಲಭ್ಯಕ್ಕಾಗಿ ನಿಗಮದಿಂದ ತಲಾ 10 ಲಕ್ಷ ರೂ. ವೆಚ್ಚದಲ್ಲಿ 723 ಸಮುದಾಯ ಭವನಗಳ ನಿರ್ಮಾಣ ಪೂರ್ಣಗೊಂಡಿದ್ದು, 415 ಭವನಗಳ ನಿರ್ಮಾಣಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.ಶಾಸಕ ಸುಧಾಕರ್‌ಲಾಲ್, ಲಿಡ್ಕರ್ ಅಧ್ಯಕ್ಷ ಆರ್.ರಾಮಕೃಷ್ಣ, ಮೇಯರ್ ಯಶೋಧಮ್ಮ ಶ್ರೀನಿವಾಸ್, ನಿಗಮದ ವ್ಯವಸ್ಥಾಪಕ ನಿರ್ದೇಶಕ ಭೋಜನಾಯಕ್, ಸಂಘದ ಅಧ್ಯಕ್ಷ ಎಂ.ಎನ್.ಮೂರ್ತಿನಾಯಕ್, ಜಿಪಂ ಸದಸ್ಯೆ ಗಾಯಿತ್ರಿಬಾಯಿ, ರಘುನಾಥ್ ಸೇರಿದಂತೆ ಮತ್ತಿತರರಿದ್ದರು.

Write A Comment