ಕರ್ನಾಟಕ

ಯಡಿಯೂರಪ್ಪನವರಿಗೆ ಒಲಿಯಲಿದೆಯೇ ರಾಜ್ಯಾಧ್ಯಕ್ಷ ಪಟ್ಟ …?

Pinterest LinkedIn Tumblr

yaddiಬೆಂಗಳೂರು, ಮಾ.7-ಮಾಜಿ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪನವರ ಆಸೆಗೆ ತಣ್ಣೀರು ಎರಚುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸಿವೆ. ಶತಾಯಗತಾಯ ರಾಜ್ಯಾಧ್ಯಕ್ಷ ಸ್ಥಾನ ಪಡೆಯಲೇಬೇಕೆಂದು ಪಣತೊಟ್ಟಿರುವ ಅವರ ಕನಸಿಗೆ ರಾಷ್ಟ್ರೀಯ ವರಿಷ್ಠರು ಬ್ರೇಕ್ ಹಾಕಿದ್ದು ಸದ್ಯದ ಪರಿಸ್ಥಿತಿಯಲ್ಲಿ ಹಾಲಿ ಅಧ್ಯಕ್ಷ ಪ್ರಹ್ಲಾದ್ ಜೋಶಿಯವರನ್ನು ಮುಂದುವರೆಸಲು ತೀರ್ಮಾನಿಸಿದ್ದಾರೆ.  ನವೆಂಬರ್‌ವರೆಗೂ ಪ್ರಹ್ಲಾದ್ ಜೋಶಿಯನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಲು ವರಿಷ್ಠರು ಸೂಚನೆ ನೀಡಿದ್ದಾರೆ. ಯಡಿಯೂರಪ್ಪನವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದ ಹೆಚ್ಚಿಗೆ ಹೆಚ್ಚುವರಿಯಾಗಿ ಪ್ರಧಾನ ಕಾರ್ಯದರ್ಶಿ ಇಲ್ಲವೆ ಪಕ್ಷದ ಅತ್ಯುನ್ನತ ಸ್ಥಾನವಾದ ಸಂಸದೀಯ ಮಂಡಳಿಯಲ್ಲಿ ಸದಸ್ಯ ಸ್ಥಾನ ನೀಡಲು ಮುಂದೆ ಬಂದಿದ್ದಾರೆ.

ಕಳೆದ ಶುಕ್ರವಾರ ನಡೆದಿರುವ ದಿಢೀರ್ ಬೆಳವಣಿಗೆಯಲ್ಲಿ ಸದ್ಯಕ್ಕೆ ಕರ್ನಾಟಕದ ಅಂತರಿಕ ವಿಷಯದಲ್ಲಿ ವರಿಷ್ಠರು ಮಧ್ಯಪ್ರವೇಶ ಮಾಡಲು ನಿರಾಕರಿಸಿದ್ದಾರೆ. ಯಥಾಸ್ಥಿತಿಯನ್ನೇ ಕಾಪಾಡಿಕೊಂಡು ಪಕ್ಷ ಸಂಘಟನೆ ಹಾಗೂ ಸರ್ಕಾರದ ವಿರುದ್ಧ ಹೋರಾಟಕ್ಕೆ ವೇದಿಕೆ ಸಿದ್ದಪಡಿಸಬೇಕೆಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ತಿಂಗಳ ಅಂತ್ಯಕ್ಕೆ ಪ್ರಹ್ಲಾದ್ ಜೋಶಿಯವರ ಅಧಿಕಾರವಾಧಿ ಪೂರ್ಣಗೊಳ್ಳಲಿತ್ತು. ತೆರವಾಗಲಿರುವ ಈ ಸ್ಥಾನಕ್ಕೆ ಯಡಿಯೂರಪ್ಪ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕೆಂಬುದು ಪಕ್ಷದ ಕೆಲವು ಹಿರಿ ಮತ್ತು ಕಿರಿಯರ ಒತ್ತಾಯವಾಗಿತ್ತು.

ಆದರೆ ಯಡಿಯೂರಪ್ಪನವರ ತವರು ಜಿಲ್ಲೆಯವರೇ ಆದ ಪ್ರಭಾವಿ ಮುಖಂಡರೊಬ್ಬರು ಅಧ್ಯಕ್ಷ ಸ್ಥಾನ ನೀಡಲು ತಕರಾರು ತೆಗೆದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬಿಎಸ್‌ವೈ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಪಕ್ಷಕ್ಕೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಲಿವೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಅವರ ವಾದವೇನು: ಆರ್‌ಎಸ್‌ಎಸ್ ಹಿನ್ನೆಲೆಯುಳ್ಳ ಮುಖಂಡರು ಪಕ್ಷದ ಮುಖಂಡರಿಗೆ ಮುಂದಿಟ್ಟಿರುವ ವಾದವೆಂದರೆ ಯಡಿಯೂರಪ್ಪ ಈಗಾಗಲೇ ಒಂದು ಬಾರಿ ಪಕ್ಷವನ್ನು ಬಿಟ್ಟು ಹೋಗಿ ಮರಳಿ ಬಂದವರು.

ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಮೂಲ ಬಿಜೆಪಿಗಿಂತ ವಲಸಿಗರ ಕೈ  ಮೇಲಾಗುತ್ತದೆ. ರಾಜ್ಯ  ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಯಾವ ಬಣಗಳು ಸೃಷ್ಟಿಯಾಗಿವೆಯೋ ಅದೇ ರೀತಿ ಪಕ್ಷದಲ್ಲಿ ಎರಡು ಬಣವಾಗುತ್ತದೆ. ಹಾಲಿ ಅಧ್ಯಕ್ಷರಾಗಿರುವ ಪ್ರಹ್ಲಾದ್ ಜೋಶಿ ಹೇಗೋ ಪಕ್ಷವನ್ನು ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ಜಿಪಂ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ನಮಗೆ ಭಾರೀ ಹಿನ್ನಡೆಯಾಗಿಲ್ಲ. ಆಡಳಿತ ರೂಢ ಕಾಂಗ್ರೆಸ್‌ಗೆ ಸರಿಸಮಾನವಾಗಿ ನಾವು ಸ್ಥಾನ ಪಡೆದಿದ್ದೇವೆ.

ಶಿವಮೊಗ್ಗ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲಾ ಪಂಚಾಯ್ತಿಯಲ್ಲಿ ನಮಗೆ ಸರಳ ಬಹುಮತದ ಮೂಲಕ ಅಧಿಕಾರ ಹಿಡಿಯಲು ಬೇಕಾಗಿರುವುದು ಕೇವಲ ಒಂದು ಸ್ಥಾನ ಮಾತ್ರ. ಇನ್ನು ರಾಯಚೂರು, ಬಿಜಾಪುರದಲ್ಲಿ ಎರಡು ಸ್ಥಾನ ಬಂದಿದ್ದರೆ ಒಟ್ಟು 12 ಜಿಲ್ಲಾಪಂಚಾಯ್ತಿಗಳಲ್ಲಿ ನಾವೇ ಅಧಿಕಾರ ಹಿಡಿಯುತ್ತಿದ್ದೇವು.  ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರದಲ್ಲಿದ್ದಾಗಲೂ 12 ಜಿಪಂ ಹಾಗೂ 101 ತಾಪಂಗಳಲ್ಲಿ ಅಧಿಕಾರಕ್ಕೆ ಬಂದಿತ್ತು. ಈಗ ಪ್ರತಿಪಕ್ಷವಾಗಿ ನಾವು ಕಾಂಗ್ರೆಸ್‌ಗೆ ಸರಿಸಮಾನವಾಗಿ ಸ್ಥಾನಮಾನ ಗೆದ್ದಿದ್ದೇವೆ. ಈಗಿನ ಲೆಕ್ಕಾಚಾರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರದಲ್ಲಿ ಮುಂದುವರೆದರೆ ಬಿಜೆಪಿ ಯಾರ ಬೆಂಬಲವಿಲ್ಲದೆಯೂ ನೂರು ಸ್ಥಾನ ಪಡೆಯಲಿದೆ.

ಯಡಿಯೂರಪ್ಪನವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ವಾದ ಮುಂದಿಟ್ಟಿರುವವರು ಒಂದು ಬಾರಿ ಪಕ್ಷ ಬಿಟ್ಟು ಹೋದವರು. ಅಲ್ಲದೆ ಇವರ ಮೇಲೆ ಗಂಭೀರವಾದ ಭ್ರಷ್ಟಾಚಾರದ ಆರೋಪಗಳು ಇವೆ. ಈ ಹಿಂಬಾಲಕರಿಂದ ಪಕ್ಷಕ್ಕೆ ನಮಗೆ ಮುಜುಗರವಾಗುವುದಲ್ಲದೇ ಹಿನ್ನಡೆಯಾಗುತ್ತದೆ. ಒಂದು ವೇಳೆ ಬಿಎಸ್‌ವೈಗೆ ಅಧ್ಯಕ್ಷ ಸ್ಥಾನ ನೀಡಿದರೆ ಮೂಲ ಕಾರ್ಯಕರ್ತರು ಹಾಗೂ ಹಿರಿಯರು ಮೂಲೆಗುಂಪಾಗುತ್ತಾರೆ.  ಯಡಿಯೂರಪ್ಪ ತಮ್ಮ ಬೆಂಬಲಿಗರನ್ನು ಮುಂದಿಟ್ಟುಕೊಂಡು ಬಿಜೆಪಿ ಅಧಿಕಾರಕ್ಕೆ ಬಂದರೆ ನನ್ನನ್ನೇ ಮುಖ್ಯಮಂತ್ರಿ ಮಾಡಿ ಎಂಬ ವಾದವನ್ನು ಮುಂದಿಡಬಹುದು. ಈಗಾಗಲೇ ಹಿಂದೆ ಅಧಿಕಾರದಲ್ಲಿದ್ದಾಗ ಎಂತಹ ಆಟವಾಡಿದ್ದಾರೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ.

ಹೀಗಾಗಿ ಬಿಎಸ್‌ವೈಗೆ ಪಟ್ಟ ಕಟ್ಟುವ ಬದಲು ಚಿಂತನಮಂಥನ ನಡೆಸುವುದು ಅಗತ್ಯವೆಂದು ಈ ಪ್ರಭಾವಿ ಮುಖಂಡರು ಹೇಳಿರುವುದು ಯಡಿಯೂರಪ್ಪನವರ ಕನಸಿಗೆ ವಿಘ್ನ ತಂದಿದೆ. ಪಂಚ ರಾಜ್ಯಗಳತ್ತ ಗಮನ ಇನ್ನು ಬಿಜೆಪಿ ವರಿಷ್ಠರು ಕರ್ನಾಟಕದ ವಿದ್ಯಾಮಾನಗಳ ಬಗ್ಗೆ ಗಮನಹರಿಸುವುದು ಅಷ್ಟಕಷ್ಟೇ. ಏಕೆಂದರೆ ಮುಂದಿನ ತಿಂಗಳು ಕೇರಳ, ತಮಿಳುನಾಡು, ಪಾಂಡಿಚೇರಿ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ವರಿಷ್ಠರೆಲ್ಲರೂ ಈ ರಾಜ್ಯಗಳತ್ತ ಗಮನಹರಿಸುವುದರಿಂದ ಕರ್ನಾಟಕದ ವಿದ್ಯಾಮಾನಗಳ ಬಗ್ಗೆ ಗಮನ ನೀಡುವುದು ತೀರಾ ಕಷ್ಟ. ಫಲಿತಾಂಶ ಮೇ 19ರಂದು ಪ್ರಕಟಗೊಳ್ಳಲಿದೆ. ಅಲ್ಲಿಯವರೆಗೂ ಕರ್ನಾಟಕದ ಪರಿಸ್ಥಿತಿ ಯಥಾಸ್ಥಿತಿಯಲ್ಲಿರಲಿದೆ.

Write A Comment