ಕರ್ನಾಟಕ

16 ಬಾರಿ ಆತ್ಮಹತ್ಯೆಗೆ ಯತ್ನಿಸಿ ಗೆದ್ದು ಬಂದ ಯುವಕನ ಕಥೆ!

Pinterest LinkedIn Tumblr

Grungy portrait of addiction, has film grain at full size

ಬೆಂಗಳೂರು: ಆತ 16 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಸಾಯಲು ಅವನು ಕಂಡುಕೊಳ್ಳದ ದಾರಿ ಬಾಕಿಯಿಲ್ಲ ಎನ್ನಬಹುದು. ಇಲಿಗೆ ತಿನ್ನಿಸುವ ವಿಷ ಸೇವಿಸಿದ್ದ. ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ, ಕೊನೆಗೆ 40 ನಿದ್ದೆ ಮಾತ್ರೆ ಕೂಡ ತಿಂದಿದ್ದ. ಆದರೆ ಆಯಸ್ಸು ಗಟ್ಟಿಯಾಗಿತ್ತು.

ಕೊನೆಯ ಸಲ ಅವನು ಆತ್ಮಹತ್ಯೆಗೆ ಯತ್ನಿಸಿದ್ದು ಕಳೆದ ಮೇ ತಿಂಗಳಿನಲ್ಲಿ, ಅದು ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದಾಗ. ಆಗ ಅವನು ಮೆಡಿಕಲ್ ನಿಂದ 40 ನಿದ್ದೆ ಮಾತ್ರೆಗಳನ್ನು ಖರೀದಿಸಿ ಸೇವಿಸಿದ್ದ. ಅವನಿಗೆ ಓದಿನ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಖಿನ್ನತೆಗೆ ಒಳಗಾಗಿದ್ದ. ಅವನಿಗೆ ಉತ್ತೇಜನ ನೀಡುವವರು ಯಾರೂ ಇರಲಿಲ್ಲ. ಅವನು ನಿದ್ದೆ ಮಾತ್ರೆ ಸೇವಿಸಿದ್ದು ಗೊತ್ತಾಗಿ ಪೋಷಕರು ಆಸ್ಪತ್ರೆಗೆ ದಾಖಲಿಸಿ ಬದುಕಿಸಿದರು.

ಇಲ್ಲಿ ನಾವು ಹೇಳಹೊರಟಿರುವುದು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ 19 ವರ್ಷದ ಪ್ರಣವ್(ಹೆಸರು ಬದಲಿಸಲಾಗಿದೆ) ಎನ್ನುವ ಯುವಕನ ಕಥೆ. ಸಾವನ್ನು ಗೆದ್ದು ಬಂದವನ ನೈಜ ಕಥೆ. ಆರು ತಿಂಗಳ ಹಿಂದೆ ಟಿವಿ ಶೋವೊಂದರಲ್ಲಿ ಕಾಣಿಸಿದ ಸಂಖ್ಯೆ ಅವನ ಜೀವನದ ದಿಕ್ಕನ್ನೇ ಬದಲಿಸಿತು. ಅದೊಂದು ಸಾ-ಮುದ್ರಾ ಫೌಂಡೇಶನ್ ಎಂಬ ಎನ್ ಜಿಒದ ಸಹಾಯವಾಣಿ ಸಂಖ್ಯೆಯಾಗಿತ್ತು.

ಎನ್ ಜಿಒದ ಸ್ಥಾಪಕಿ ಭಾರತಿ ಸಿಂಗ್ ಹೀಗೆ ವಿವರಿಸುತ್ತಾರೆ.” ಆ ಯುವಕ ದೂರವಾಣಿ ಕರೆ ಮಾಡಿ ಒಂದೇ ಸಮನೆ ಅಳುತ್ತಿದ್ದ. ನನ್ನನ್ನು ಕೂಡಲೇ ಭೇಟಿ ಮಾಡಬೇಕೆಂದು ಹೇಳಿದ. ನನ್ನ ಬಳಿ ಬಂದವನೇ 16 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಹೇಳಿದಾಗ ನಿಜಕ್ಕೂ ಆಘಾತವಾಯಿತು. ಹೀಗೆ ಆತ್ಮಹತ್ಯೆಗೆ ಯತ್ನಿಸುವವರು ತಮ್ಮ ಹತ್ತಿರದವರ ಮತ್ತು ಪ್ರೀತಿಪಾತ್ರದವರ ಗಮನವನ್ನು ಸೆಳೆಯಲು ಈ ರೀತಿ ಮಾಡುತ್ತಾರೆ ಎನ್ನಿಸಿತು.”

ಯುವಕ ಹೇಗೆ ಬದಲಾದ: ಎಲ್ಲದರಲ್ಲೂ ಋಣಾತ್ಮಕವಾಗಿಯೇ ಯೋಚಿಸುತ್ತಿದ್ದ ಯುವಕ ನಿಧಾನವಾಗಿ ಬದಲಾಗತೊಡಗಿದ. ಆಶಾಭಾವನೆ ಅವನಲ್ಲಿ ಹುಟ್ಟಿಕೊಂಡಿತು. ಅದು ಹೇಗೆ ಎಂದರೆ ಭಾವನೆ, ಅರ್ಥ ಸಂಬಂಧಗಳ ಬಗ್ಗೆ ಎನ್ ಜಿಒದಲ್ಲಿ ತರಬೇತಿಯನ್ನು ಯುವಕನಿಗೆ ನೀಡಲಾಯಿತು.

ಪ್ರಣವ್ ಖಾಸಗಿ ಜೀವನದಲ್ಲಿ ಬಹಳ ತಳಮಳಗೊಂಡಿದ್ದ. ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡ ಪ್ರಣವ್, ತಾಯಿಯ ಸಾವಿಗೆ ಎಲ್ಲರೂ ಅವನನ್ನು ದೂಷಿಸುತ್ತಿದ್ದರಂತೆ. ಅವನನ್ನು ಎಲ್ಲರೂ ಕೆಟ್ಟ ಶಕುನ ಎಂದು ಹೀಗಳೆಯುತ್ತಿದ್ದರಂತೆ. ಅದುವೇ ಅವನನ್ನು 16 ಬಾರಿ ಆತ್ಮಹತ್ಯೆ ಪ್ರಯತ್ನಕ್ಕೆ ನೂಕಿತ್ತು.

ಅವನ ತಂದೆ ಮರುಮದುವೆಯಾಗಿದ್ದಾರೆ. ಅವರು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆದರೆ ಪ್ರಣವ್ ಅವರನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾನೆ. ಇದರಿಂದ ಓದಿನಲ್ಲಿ ಅವನು ಹಿಂದೆ ಉಳಿದಿದ್ದ.

ಪ್ರಣವ್ ಎನ್ ಜಿಒದ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾ ಹೋದಂತೆ ಅವನಲ್ಲಿನ ಆಲೋಚನಾ ವಿಧಾನ ಬದಲಾಗುತ್ತಾ ಹೋಯಿತು. ” ಜೀವನ ತುಂಬಾ ಅಮೂಲ್ಯ. ಇಲ್ಲಿ ನಮಗಿಂತ ಹೆಚ್ಚು ಕಷ್ಟದಲ್ಲಿರುವವರು ಇರುತ್ತಾರೆ” ಎಂದು ಪ್ರಣವ್ ಗೆ ಅರಿವಾಗತೊಡಗಿತು. ಪೋಷಕರ ಜೊತೆಗಿನ ಸಂಬಂಧ ಸುಧಾರಿಸತೊಡಗಿತು ಎನ್ನುತ್ತಾರೆ ಭಾರತಿ ಸಿಂಗ್.

ಪ್ರಣವ್ ಇದೀಗ ಈವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡು ಓದುತ್ತಿದ್ದಾನೆ. ಜೀವನದಲ್ಲಿ ಸ್ವಾವಲಂಬಿಯಾಗುತ್ತಿದ್ದಾನೆ.

ಪ್ರಣವ್ ಗೆ ಜೀವನದಲ್ಲಿ ಬದಲಾವಣೆ ಕಾಣಲು ಸ್ವಲ್ಪ ಸಮಯ ಹಿಡಿಯಿತು. ಆದರೆ ಅವನು ತನ್ನ ತಾಯಿಯ ಸಾವಿಗೆ ತಾನು ಕಾರಣನಲ್ಲ ಎಂದು ಅರಿತುಕೊಂಡದ್ದು ಅವನ ಜೀವನದಲ್ಲಾದ ಮಹತ್ವದ ಬದಲಾವಣೆ ಎನ್ನುತ್ತಾರೆ ಭಾರತಿ ಸಿಂಗ್.

Write A Comment