ಕರ್ನಾಟಕ

“ಗಡಿ” ಬೆಂಕಿಗೆ ಬೆಳಗಾವಿ ಮೇಯರ್ ತುಪ್ಪ ! ಮಹಾರಾಷ್ಟ್ರ ಸಿಎಂ ಭೇಟಿ ಮಾಡಿ ನೆರವು ಯಾಚನೆ

Pinterest LinkedIn Tumblr

Belgavi-mayor-meets-CM-Fadn

ಬೆಳಗಾವಿ: ನಿನ್ನೆಯಷ್ಟೇ ಬೆಳಗಾವಿ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಎಂಇಎಸ್ ನ ಸರಿತಾ ಪಾಟಿಲ್ ಅವರು ಗಡಿವಿವಾದದ ಬೆಂಕಿಗೆ ತುಪ್ಪ ಸುರಿದಿದ್ದು, ಅಧಿಕಾರ ಸ್ವೀಕಾರ ಬೆನ್ನಲ್ಲೇ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ ಗಡಿ ವಿವಾದ ಕುರಿತು ಚರ್ಚಿಸಿದ್ದಾರೆ.

ಶನಿವಾರ ಪುಣೆಯಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾದ ಸರಿತಾ ಪಾಟೀಲ್ ಅವರು ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರಕ್ಕೆ ಅನ್ಯಾಯವಾಗದಂತೆ ನಿರ್ಧಾರ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಅಲ್ಲದೆ ಬೆಳಗಾವಿ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸುವ ವಿಚಾರದಲ್ಲಿ ತಾವು ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧ. ಹಾಗೆಯೇ ಮಹಾರಾಷ್ಟ್ರ ಸರ್ಕಾರ ಕೂಡ ನ್ಯಾಯಾಲಯದಲ್ಲಿ ತನ್ನ ವಾದವನ್ನು ಸಮರ್ಥವಾಗಿ ಮಂಡಿಸಬೇಕು ಎಂದು ಸರಿತಾ, ಫಡ್ನವಿಸ್ ಅವರನ್ನು ಒತ್ತಾಯಿಸಿದಾರೆಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ವಿವಾದ ಹುಟ್ಟುಹಾಕಿದ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿದ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ಸರಿತಾ ಪಾಟಿಲ್ ಈ ಬಗ್ಗೆಯೂ ಫಡ್ನವಿಸ್ ಅವರ ಬಳಿ ತಮ್ಮ ಅಸಮಾಧನವನ್ನು ವ್ಯಕ್ತಪಡಸಿದ್ದಾರೆ ಎನ್ನಲಾಗಿದೆ. ಮೇಯರ್ ಸರಿತಾ ಪಾಟಿಲ್ ಅವರೊಂದಿಗೆ ಎಂಇಎಸ್ ಮುಖಂಡ ಕಿರಣ ಠಾಕೂರ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

ಮೇಯರ್ ವಿರುದ್ಧ ಕನ್ನಡಿಗರ ಆಕ್ರೋಶ ಸ್ಫೋಟ
ಇನ್ನು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ ಚರ್ಚಿಸಿದ ಬೆಳಗಾವಿ ಮೇಯರ್ ಸರಿತಾ ಪಾಟೀಲ್ ಅವರ ನಡೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಇನ್ನೂ ಮೇಯರ್ ಆಗಿ ದಿನ ಬೆಳಗಾಗುವಷ್ಟರಲ್ಲಿ ಮಹಾರಾಷ್ಟ್ರ ಸಿಎಂ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಕೇಳಿಬಂದಿದೆ. ಮೇಯರ್ ನಗರದ ಪ್ರಥಮ ಪ್ರಜೆಯಾಗಿದ್ದರೂ, ಗಡಿವಿವಾದದ ಕುರಿತು ವಿಶೇಷ ಕಾಳಜಿ ವಹಿಸುತ್ತಿರುವ ಸರಿತಾ ಪಾಟೀಲ ಅವರ ನಾಡ ವಿರೋಧಿ ಚಟುವಟಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಬೆಳಗಾವಿಯನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದೆ. ಇಂತಹ ಸಂದರ್ಭದಲ್ಲಿ ಬೆಳಗಾವಿಯ ಅಭಿವೃದ್ಧಿಗೆ ಹೆಚಿನ ಆದ್ಯತೆ ನೀಡಿ ಕೆಲಸ ಮಾಡುವ ಬದಲು ಗಡಿವಿವಾದ ಕೆಣಕಲು ಯತ್ನಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಕನ್ನಡಿಗರ ಪ್ರಶ್ನೆಯಾಗಿದೆ.

Write A Comment