ಕರ್ನಾಟಕ

ಶಾಶ್ವತ ನೀರಾವರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ, ರೊಚ್ಚಿಗೆದ್ದ ರೈತರು

Pinterest LinkedIn Tumblr

33

ಬೆಂಗಳೂರು: ಕಬ್ಬು ಬೆಳೆಗಾರರಿಗೆ ಬಾಕಿ ಹಣ ಬಿಡುಗಡೆ ಮಾಡಬೇಕು ಹಾಗೂ ಚಿಕ್ಕಬಳ್ಳಾಪುರ, ಕೋಲಾರ ಭಾಗಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ನೂರಾರು ರೈತರು ಇಂದು ನಗರ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಮೆರವಣಿಗೆ ನಡೆಸಿದರು.

ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ರೈತರನ್ನು ಶೇಷಾದ್ರಿ ರಸ್ತೆಯಲ್ಲಿ ತಡೆದ ಪೊಲೀಸರು ಅಧಿವೇಶನ ನಡೆಯುತ್ತಿರುವ ಹಿನ್ನಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುವಂತೆ ಮನವೊಲಿಸಿದರು.

ಸಕ್ಕರೆ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳಕ್ಕೆ ಆಗಮಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ರಸ್ತೆಯಲ್ಲೇ ಕುಳಿತು ಧರಣಿ ಮುಂದುವರೆಸಿದರು.

ಮಧ್ಯಾಹ್ನ 1.30ರವರೆಗೂ ಮುಖ್ಯಮಂತ್ರಿ ಹಾಗೂ ಸಚಿವರು ಸ್ಥಳಕ್ಕೆ ಆಗಮಿಸಿರಲಿಲ್ಲ.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಮಾತನಾಡಿ, ಕಬ್ಬು ಬೆಳೆಗಾರರಿಗೆ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಿಲ್ಲ. ಇದರಿಂದ ಲಕ್ಷಾಂತರ ರೂ. ಖರ್ಚು ಮಾಡಿ ಕಬ್ಬು ಬೆಳೆದ ರೈತರಿಗೆ ತೊಂದರೆಯಾಗಿದೆ. ಆದ್ದರಿಂದ ತಕ್ಷಣ 5 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

2013-14ನೇ ಸಾಲಿನಲ್ಲಿ ರೈತರಿಗೆ 500 ಕೋಟಿ ರೂ. ಬಾಕಿ ಇದೆ. 2014-15ನೇ ಸಾಲಿನಲ್ಲಿ 350 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಕಬ್ಬು ಕಟಾವು ಸಾಗಾಣಿಕೆ ದರ ನಿಗದಿ ಮಾಡಿ ಶಾಸನಬದ್ಧಗೊಳಿಸಬೇಕು. ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆಗಳ ನಡುವೆ ಕಾನೂನುಬದ್ಧ ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿಗೆ ತರಬೇಕು. ಪ್ರೋತ್ಸಾಹ ಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ರೈತರ ಎಲ್ಲಾ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರೀನ್ ಬರ್ಡ್ಸ್ ಸಂಸ್ಥೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು. ಸಂಸ್ಥೆಯಿಂದ ಮುಟ್ಟುಗೋಲು ಹಾಕಿರುವ ಆಸ್ತಿಯನ್ನು ತಕ್ಷಣ ಹರಾಜು ಹಾಕಬೇಕೆಂದು ಒತ್ತಾಯಿಸಿದರು.

5 ಸಾವಿರ ಟ್ರ್ಯಾಕ್ಟರ್‌ಗಳಿಗೆ ತಡೆ

ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ ಸೇರಿದಂತೆ, 5 ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಯೋಜನೆ ಜಾರಿಗೊಳಿಸಬೇಕು. ಎತ್ತಿನಹೊಳೆ ಹಾಗೂ ಭದ್ರ ಮೇಲ್ದಂಡೆ ಯೋಜನೆಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲು ಟ್ರ್ಯಾಕ್ಟರ್ ಮೂಲಕ ಬರುತ್ತಿದ್ದ ರೈತರನ್ನು ಪೊಲೀಸರು ನಗರದ ಹೊರಭಾಗದಲ್ಲಿ ತಡೆದರು.

ಇದರಿಂದ ರೈತರು ಕಾಲ್ನಡಿಗೆ ಮೂಲಕ ಫ್ರೀಡಂ ಪಾರ್ಕಿಗೆ ಆಗಮಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಜನಪ್ರತಿನಿಧಿಗಳಿಗೆ ರೈತರ ಕಷ್ಟ ಅರ್ಥವಾಗುತ್ತಿಲ್ಲ. ಅವರು ವಾಚ್‌ನ ಚರ್ಚೆಯಲ್ಲಿ ಮುಳುಗಿದ್ದಾರೆ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, ಸಮಸ್ಯೆ ಬಗೆಹರಿಸಬೇಕಾದ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಜನಪ್ರತಿನಿಧಿಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.

ಶಾಶ್ವತ ನೀರಾವರಿ ಜಂಟಿ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ ಮುಂತಾದ ಪ್ರದೇಶಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಒದಗಿಸುವ ಯೋಜನೆಗಳನ್ನು ತಕ್ಷಣ ಜಾರಿಗೊಳಿಸಬೇಕು. ಈ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಆಗ್ರಹಿಸಿದರು.

ಶಿವಮೊಗ್ಗ ಜಿಲ್ಲಾಧ್ಯಕ್ಷ ಚಂದ್ರಪ್ಪ ಮಾತನಾಡಿ, ಕಳಸಾ ಬಂಡೂರಿ ಯೋಜನೆಯ ವಿವಾದವನ್ನು ಬಗೆಹರಿಸಲು ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಆಗ್ರಹಿಸಿದರು.

Write A Comment