ಕರ್ನಾಟಕ

ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅವಮಾನಿಸಿದ ಪ್ರಧಾನಿ ಮೋದಿ : ಉಗ್ರಪ್ಪ ಕಿಡಿ

Pinterest LinkedIn Tumblr

ugrappaಬೆಂಗಳೂರು, ಫೆ.28- ಕೇಂದ್ರ ಸರ್ಕಾರ ರೈತರಿಗೆ ಜಾರಿ ಮಾಡಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರನ್ನು ಆಹ್ವಾನಿಸದೆ ಪ್ರಧಾನಮಂತ್ರಿ ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಅನುಷ್ಠಾನ ಮಾಡುತ್ತಿರುವ ಕಾರ್ಯಕ್ರಮವಾಗಿದೆ. ಈ ಯೋಜನೆಗೆ ರಾಜ್ಯ ಸರ್ಕಾರವೂ ಸಹ ಅನುದಾನವನ್ನು ನೀಡುತ್ತದೆ. ಆದರೆ, ಪ್ರಧಾನಿಯವರು ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸದಿರುವುದು ರಾಜ್ಯದ ಜನತೆಗೆ ಮಾಡಿದ ಅಪಮಾನ ಎಂದು ಟೀಕಿಸಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆ ಜತೆಯಾಗಿ ಸಾಗಬೇಕು. ಆದರೆ, ಈ ಯೋಜನೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಜಾರಿಗೆ ತಂದಿದೆ ಎಂಬ ರೀತಿಯಲ್ಲಿ ಪ್ರಚಾರ ಪಡೆದುಕೊಂಡಿದೆ. ಇಂತಹ ಬೆಳವಣಿಗೆಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಂಬಂಧಕ್ಕೆ ಧಕ್ಕೆಯಾಗುತ್ತದೆ ಎಂದು ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ಕೇಂದ್ರ ಸರ್ಕಾರ ಯಾವುದೇ ಯೋಜನೆ ಜಾರಿಮಾಡುವಾಗ ಆಯಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಶಿಷ್ಟಾಚಾರ. ಆದರೆ, ಬಿಜೆಪಿಯವರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆಂದು ಕಿಡಿಕಾರಿದರು.

ಕೊಡುಗೆ ಏನು ..? ಇನ್ನು ರಾಜ್ಯಕ್ಕೆ ಪ್ರಧಾನಿ ಬಂದಿದ್ದರೂ ಕರ್ನಾಟಕಕ್ಕೆ, ವಿಶೇಷವಾಗಿ ರೈತರಿಗೆ ಏನೂ ಕೊಡುಗೆ ನೀಡಿಲ್ಲ. ಈ ಹಿಂದೆ ಪ್ರಧಾನಿ ಡಾ.ಮನಮೋಹನ್‌ಸಿಂಗ್ ಅವರು ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಿದ್ದರು. ರಾಜ್ಯದಲ್ಲಿ ತೀವ್ರ ಬರಗಾಲ, ಕುಡಿಯುವ ನೀರಿನ ಸಂಕಷ್ಟವಿದ್ದರೂ ಪ್ರಧಾನಿ ರೈತರ ಮೂಗಿಗೆ ತುಪ್ಪ ಸವರಿ ಹೋಗಿದ್ದಾರೆ. ರೈತರ ಸಾಲ ಮನ್ನಾ ಮಾಡದೆ ಕೇವಲ ಭಾಷಣ ಮಾಡಿರುವುದರಿಂದ ರೈತರ ಹೊಟ್ಟೆ ತುಂಬುತ್ತದೆಯೇ ಎಂದು ಪ್ರಶ್ನಿಸಿದರು. ಉತ್ತರ ಕರ್ನಾಟಕದಲ್ಲಿ ಪ್ರಮುಖವಾಗಿ ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಕಳೆದ ಆರು ತಿಂಗಳಿನಿಂದ ರೈತರು ನಿರಂತರವಾಗಿ ಧರಣಿ ನಡೆಸುತ್ತಿದ್ದಾರೆ. ಈ ಯೋಜನೆಗೆ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ರಾಜ್ಯದಿಂದ ಗೆದ್ದಿರುವ 17 ಸಂಸದರು ಪ್ರಧಾನಮಂತ್ರಿ ಮುಂದೆ ಬಾಯಿ ಬಿಡದೆ ಭತ್ತ ತೂರಿ ರೈತರಿಗೆ ಮಂಕುಬೂದಿ ಎರಚಿದ್ದಾರೆ ಎಂದು ಉಗ್ರಪ್ಪ ಟೀಕಾಪ್ರಹಾರ ನಡೆಸಿದರು.

Write A Comment