ಕರ್ನಾಟಕ

ಬಿಜೆಪಿ, ಜೆಡಿಎಸ್‌ ಪಂಚಾಯ್ತಿ ಮೈತ್ರಿ?10ವರ್ಷದ ನಂತರ ದೋಸ್ತಿ ಸಿದ್ಧತೆ

Pinterest LinkedIn Tumblr

BJP-JDSಬೆಂಗಳೂರು: ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ಗಳಲ್ಲಿ ಅಧಿಕಾರ ಹಿಡಿಯುವ ಸಂಬಂಧ ಬಿಜೆಪಿ ಜತೆ ಕೈ ಜೋಡಿಸಲು ಜೆಡಿಎಸ್‌ ಹೆಚ್ಚಿನ ಒಲವು ಹೊಂದಿದ್ದು, ರಾಜ್ಯ ಮಟ್ಟದಲ್ಲೇ ಈ ಬಗ್ಗೆ ಅಧಿಕೃತ ನಿರ್ಣಯ ಕೈಗೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಒಂದೊಮ್ಮೆ ಜೆಡಿಎಸ್‌-ಬಿಜೆಪಿ ಮೈತ್ರಿ ಕುದುರಿದರೆ ಹತ್ತು ವರ್ಷಗಳ ನಂತರ ಅಧಿಕೃತವಾಗಿ ಎರಡೂ ಪಕ್ಷಗಳು ಮತ್ತೆ ಮೈತ್ರಿ ರಾಜಕಾರಣಕ್ಕೆ ಹೆಜ್ಜೆ ಇಟ್ಟಂತಾಗುತ್ತದೆ.

ಪ್ರಸಕ್ತ ರಾಜಕೀಯ ಸ್ಥಿತಿಯಲ್ಲಿ ಕಾಂಗ್ರೆಸ್‌ ಜತೆ ಹೋಗಲು ಬಯಸದ ಜೆಡಿಎಸ್‌ನ ಬಹುತೇಕ ಶಾಸಕರು, ಬಿಜೆಪಿ ಜತೆ ಸೇರಿ ಅಧಿಕಾರ ಹಂಚಿಕೆ ಮಾಡಿಕೊಳ್ಳೋಣ ಎಂಬ ಅಭಿಪ್ರಾಯ ಹೊಂದಿರುವುದು ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರೇ ಖುದ್ದಾಗಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿ ಮೈತ್ರಿ ಪ್ರಸ್ತಾಪ ಇಟ್ಟಿರುವುದರಿಂದ ಬಿಜೆಪಿ ಜತೆ ಮೈತ್ರಿ ಅಂತಿಮವಾಗಬಹುದು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಈ ಕುರಿತು ಶುಕ್ರವಾರ ರಾತ್ರಿ ಸುದೀರ್ಘ‌ ಸಮಾಲೋಚನೆ ನಡೆಸಿದ್ದು, ಬಿಜೆಪಿ ಜತೆ ಹೋದರೆ ರಾಜಕೀಯವಾಗಿ ಪಕ್ಷಕ್ಕೂ ಲಾಭವಾಗಬಹುದು ಎಂಬ ಅಭಿಪ್ರಾಯ ಈ ವೇಳೆ ವ್ಯಕ್ತವಾಗಿದೆ. ಆದರೆ, ಶಾಸಕರು ಹಾಗೂ ಜಿಲ್ಲಾ ಅಧ್ಯಕ್ಷರ ಜತೆ ಚರ್ಚಿಸಿ, ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಹಾಗೂ ಸೋಲು ಕಂಡಿರುವ ಅಭ್ಯರ್ಥಿಗಳ ಸಭೆ ನಡೆಸಿ ಅಪಸ್ವರ ಇದ್ದರೆ ಸರಿಪಡಿಸಿ ಅಲ್ಲೇ ನಿರ್ಣಯ ಪ್ರಕಟಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.

ಜೆಡಿಎಸ್‌ ಮತ್ತು ಬಿಜೆಪಿ ಜತೆಗೂಡಿದರೆ ತುಮಕೂರು, ಮೈಸೂರು, ಬೆಂಗಳೂರು ನಗರ, ಶಿವಮೊಗ್ಗ, ರಾಯಚೂರು ಸೇರಿದಂತೆ 7 ಜಿಲ್ಲಾ ಪಂಚಾಯಿತಿ ಹಾಗೂ 20 ತಾಲೂಕು ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಯಿದೆ. ಮೊದಲ ಹಂತದಲ್ಲಿ ಪಂಚಾಯತ್‌ಗೆ ಸೀಮಿತವಾಗಿ ಮೈತ್ರಿ ಮಾಡಿಕೊಂಡು ಯಶಸ್ವಿಯಾದರೆ ಆ ನಂತರ ಪ್ರತಿಕ್ರಿಯೆ, ಸ್ಪಂದನೆ, ಸಹಕಾರ ನೋಡಿಕೊಂಡು ಬಿಬಿಎಂಪಿ ಸೇರಿ ಮುಂದಿನ ಚುನಾವಣೆಗಳಲ್ಲಿ ಮೈತ್ರಿ ಮುಂದುವರಿಸುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.

ಬಿಜೆಪಿ ಪರ ಎಚ್‌ಡಿಕೆ ಬ್ಯಾಟಿಂಗ್‌:
ದೇವೇಗೌಡರ ಜತೆ ಚರ್ಚಿಸುವ ಸಂದರ್ಭದಲ್ಲಿ ಕುಮಾರಸ್ವಾಮಿಯವರು, ರಾಜ್ಯದಲ್ಲಿ ಸರ್ಕಾರದ ನಾಯಕತ್ವ ಬದಲಾವಣೆಯಾದರೆ ಕಾಂಗ್ರೆಸ್‌ ಜತೆ ಮೈತ್ರಿಗೆ ಹೋಗಬಹುದು. ಈಗಿನ ಸ್ಥಿತಿಯಲ್ಲಿ ಕಾಂಗ್ರೆಸ್‌ ಜತೆ ಹೋಗುವ ಚಿಂತನೆ ಬೇಡ. ಬಿಜೆಪಿ ಜತೆ ಹೋಗೋಣ. ತಮಿಳುನಾಡಿನಲ್ಲಿ ಡಿಎಂಕೆ, ಎಐಎಡಿಎಂಕೆ, ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌, ಬಿಹಾರದಲ್ಲಿ ಸಂಯುಕ್ತ ಜನತಾದಳ, ಲೋಕಜನಶಕ್ತಿ ಪಕ್ಷ, ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷಗಳು ಯುಪಿಎ ಹಾಗೂ ಎನ್‌ಡಿಎ ಜತೆ ಕಾಲಕ್ಕೆ ತಕ್ಕಂತೆ ರಾಜ್ಯದ ಹಿತಾಸಕ್ತಿಯಿಂದ ಮೈತ್ರಿ ಮಾಡಿಕೊಂಡ ಉದಾಹರಣೆಗಳಿವೆ. ಮೈತಿ ಮಾಡಿಕೊಂಡರೆ ಯಾವುದೇ ಅಪವಾದ ಬರುವುದೂ ಇಲ್ಲ. ನೀವು ಸಮ್ಮತಿ ನೀಡಿ ಎಂದು ಹೇಳಿದರು.

ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಜಿಲ್ಲಾ ಘಟಕಗಳಿಗೆ ಅಧಿಕಾರ ಕೊಡುವುದು ಬೇಡ. ಆಗ, ಕೆಲವೆಡೆ ಬಿಜೆಪಿ, ಕೆಲವೆಡೆ ಕಾಂಗ್ರೆಸ್‌ ಜತೆ ಹೋಗಿ ಗೊಂದಲ ಏರ್ಪಡುತ್ತದೆ. ಸರ್ಕಾರದ ವಿರುದ್ಧ ಹೋರಾಟ ಸಾಧ್ಯವಾಗದು. ಹೀಗಾಗಿ, ರಾಜ್ಯ ಮಟ್ಟದಲ್ಲೇ ಒಂದು ನಿರ್ಣಯ ಕೈಗೊಂಡು ಅದರ ಪ್ರಕಾರ ನಡೆಯಲು ಸೂಚನೆ ನೀಡೋಣ ಎಂದು ಪ್ರಸ್ತಾಪಿಸಿದರು. ಅದಕ್ಕೆ ಸಮ್ಮತಿ ಸೂಚಿಸಿರುವ ದೇವೇಗೌಡರು ಶಾಸಕರು, ಜಿಲ್ಲಾ ಅಧ್ಯಕ್ಷರ ಜತೆ ಚರ್ಚಿಸಿ ನಿರ್ಣಯ ಕೈಗೊಳ್ಳೋಣ ಎಂದು ಹೇಳಿದರು ಎಂದು ತಿಳಿದು ಬಂದಿದೆ.

ಫೆಬ್ರವರಿ 29 ರಿಂದ ಮಾರ್ಚ್‌ 5 ರವರೆಗೆ ನಡೆಯಲಿರುವ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ಕರೆದು ಮೈತ್ರಿ ಕುರಿತು ಚರ್ಚಿಸುವುದು. ಅಧಿವೇಶನ ಮುಗಿದ ನಂತರ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಸಮಾವೇಶ ನಡೆಸಿ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಒಟ್ಟಾರೆ, 30 ಜಿಲ್ಲೆಗಳ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾದ ನಂತರವಷ್ಟೇ ಸ್ಪಷ್ಟ ಚಿತ್ರಣ ದೊರೆಯಲಿದೆ.
-ಉದಯವಾಣಿ

Write A Comment