ಕೆಜಿಎಫ್, ಫೆ.26- ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ದಿನದಲ್ಲಿ 2 ಗಂಟೆ ಸಮರ್ಪಕ ವಿದ್ಯುತ್ ಪೂರೈಸದೆ ಬೆಸ್ಕಾಂ ಅಧಿಕಾರಿಗಳು ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಕ್ಯಾಸಂಬಳ್ಳಿಯಲ್ಲಿ ಧರಣಿ ನಡೆಸಿದರು. ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ ಮಾತನಾಡಿ, ಮಳೆಯಿಲ್ಲದೆ ತಾಲೂಕಿನಲ್ಲಿ ಮತ್ತೆ ಬರಗಾಲ ಆವರಿಸಿದೆ. ಸಿಗುತ್ತಿರುವ ಅಲ್ಪ ಸ್ವಲ್ಪ ನೀರಿನಿಂದ ರೈತರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬೆಸ್ಕಾಂ ಇಲಾಖೆ ಮಾತ್ರ ಬೆಳೆಗಳನ್ನು ಹಾಳು ಮಾಡಲು ಸಮರ್ಪಕ ವಿದ್ಯುತ್ ನೀಡದೆ ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ರೈತರ ಜೀವನದ ಜೊತೆ ಚೆಲ್ಲಾಟವಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಅಂತರ್ಜಲ ಮಟ್ಟ ಕುಸಿಯುತ್ತಿರುವ ಕಾರಣ ಲಕ್ಷಾಂತರ ಜನ-ಜಾನುವಾರುಗಳಿಗೆ ಹಳ್ಳ-ಕೊಳ್ಳಗಳಲ್ಲಿ ನೀರಿಲ್ಲದೆ ಕೊಳವೆ ಬಾವಿಗಳನ್ನೇ ಜಾನುವಾರುಗಳು ಆಶ್ರಯಿಸಿ ನೀರಿಗಾಗಿ ಪರದಾಡುವಂತಾಗಿದೆ. ಸರ್ಕಾರ ನಿಗಪಡಿಸಿರುವ ವೇಳಾಪಟ್ಟಿಯಂತೆ 3 ಫೇಸ್ 8ಗಂಟೆ ಸಿಂಗಲ್ ಫೇಸ್ 6ಗಂಟೆ ವಿದ್ಯುತ್ ನೀಡದೆ ತಮಗೆ ಇಷ್ಟ ಬಂದ ಹಾಗೆ ಪೂರೈಸಲು ಮುಂದಾಗಿರುವುದು ಬೆಸ್ಕಾಂ ಇಲಾಖೆಯ ರೈತ ವಿರೋ ಧೋರಣೆಯಾಗಿದೆ ಎಂದು ಕಿಡಿಕಾರಿದರು. ಗಂಟೆಗೆ 16 ಬಾರಿ ವಿದ್ಯುತ್ ತೆಗೆದು ಕೇವಲ ದಿನದಲ್ಲಿ ಎರಡು ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಕುಡಿಯುವ ನೀರಿಗೂ ಪರದಾಡುವಂತಹ ಸ್ಥಿತಿ ನಿರ್ಮಿಸಿದೆ.
ಬೆಸ್ಕಾಂಗೆ ಸಂಬಂಧಿಸಿದ ಸಹಾಯವಾಣಿಯನ್ನು ಸಂಪರ್ಕಿಸಿದರೆ ಪೋನ್ ತೆಗೆಯುವವರೇ ಇರುವುದಿಲ್ಲ ಎಂದು ದೂರಿದರು. ವಿದ್ಯಾರ್ಥಿಗಳ ಪರೀಕ್ಷೆಗೆ ಓದುವುದಕ್ಕೂ ತೊಂದರೆಯಾಗಿದೆ. ಕೂಡಲೇ ಬೆಸ್ಕಾಂ ಇಲಾಖೆ ಸಮರ್ಪಕವಾದ ವಿದ್ಯುತ್ ನೀಡಬೇಕು. ಇಲ್ಲವಾದಲ್ಲಿ ಬೆಸ್ಕಾಂ ಇಲಾಖೆಗೆ ಶಾಶ್ವತವಾಗಿ ಬೀಗ ಮುದ್ರೆ ಜಡಿಯಬೇಕಾಗುತ್ತದೆ ಎಂದು ಕಚೇರಿ ಮುಂದೆ ಹೋರಾಟ ಮಾಡುವುದರ ಮೂಲಕ ಎಚ್ಚರಿಕೆ ನೀಡಿದರು. ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಕ್ಯಾಸಂಬಹಳ್ಳಿ ಪ್ರತಾಪ್, ಶಟ್ಟುಕುಂಟೆ ರಮೇಶ್, ಬೇತಮಂಗಲ ಮಂಜುನಾಥ್, ಮರಗಲ್ ಶ್ರೀನಿವಾಸ್, ಸಿದ್ದುಗೌಡ ಮುಂತಾದವರು ಭಾಗವಹಿಸಿದ್ದರು. ನಂತರ ಬೆಸ್ಕಾಂ ಇಇ ಲೋಕೇಶ್‌ರವರಿಗೆ ಮನವಿ ಸಲ್ಲಿಸಲಾಯಿತು.