ಕರ್ನಾಟಕ

ಕೇಂದ್ರ ಬರ ಅಧ್ಯಯನ ಪರಿಶೀಲನೆ ಮುಕ್ತಾಯ

Pinterest LinkedIn Tumblr

160225kpn50ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಬಗ್ಗೆ ಇನ್ನೊಂದು ವಾರದೊಳಗೆ ಸಮಗ್ರ ಮಾಹಿತಿ ಸಹಿತ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ ಕೆ.ಕೆ.ಮಿಶ್ರಾ ತಿಳಿಸಿದ್ದಾರೆ.

ಕೇಂದ್ರದ 3 ತಂಡಗಳು ಕಳೆದ ಎರಡು ದಿನಗಳಿಂದ ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿವೆ. ಕೇಂದ್ರ ಇಂಧನ ಇಲಾಖೆ ಉಪಕಾರ್ಯದರ್ಶಿ ಕೆ.ಕೆ.ಮಿಶ್ರಾ ಅವರ ನೇತೃತ್ವದ ತಂಡ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಗುರುವಾರ ಸಂಚರಿಸಿ ಬರ ಅಧ್ಯಯನ ನಡೆಸಿತು. ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಉಂಟಾದ ಬರ ಪರಿಸ್ಥಿತಿ ನೋಡಿ ಬೇಸರ ವ್ಯಕ್ತಪಡಿಸಿತು.

ಆಲಮಟ್ಟಿ ಜಲಾಶಯ ಭೇಟಿ:
ಇದೇ ವೇಳೆ, ಮಳೆ ಇಲ್ಲದೇ ಬರಿದಾಗಿರುವ ಆಲಮಟ್ಟಿಯ ಶಾಸ್ತ್ರೀಜಿ ಜಲಾಶಯಕ್ಕೂ ಭೇಟಿ ನೀಡಿ ನೀರಿನ ಸಂಗ್ರಹ ಪರಿಶೀಲಿಸಿತು. ಈ ವೇಳೆ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಕೆ.ಮಿಶ್ರಾ ಹಾಗೂ ರಾಮಕೃಷ್ಣ, ಬರ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳು ತೃಪ್ತಿ ತಂದಿವೆ. ಕೇಂದ್ರದ ಮೂರು ತಂಡಗಳು ಶುಕ್ರವಾರ ಸಭೆ ನಡೆಸಿ, ಸಂಜೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸುತ್ತೇವೆ. ಇನ್ನು ಒಂದು ವಾರದೊಳಗೆ ಇಲ್ಲಿನ ಬರ ಪರಿಸ್ಥಿತಿ ಕುರಿತು ಸಮಗ್ರವಾಗಿ ವರದಿ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ನಂತರ ಇದೇ ತಂಡ ಕೊಪ್ಪಳ ಜಿಲ್ಲೆಗೂ ಭೇಟಿ ನೀಡಿತು. ಈ ವೇಳೆ ರೈತರು ಬರ ಎದುರಾಗಿ ಇಷ್ಟು ದಿನವಾದ ಮೇಲೆ ಬಂದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಈಗಲಾದರೂ ಬಂದಿದ್ದೇವಲ್ಲ ಅದಕ್ಕೆ ಸಂತಸ ಪಡಿ ಎಂದು ಸುದ್ದಿಗಾರರ ಪ್ರಶ್ನೆಗೆ ಮಿಶ್ರಾ ಹೇಳಿದರು. ಬರಗಾಲ ಬಂದಿದೆ ಎಂದಾಕ್ಷಣವೇ ಅಧ್ಯಯನ ನಡೆಸುವುದಕ್ಕೆ ಬರಲು ಸಾಧ್ಯವಿಲ್ಲ. ಇದಕ್ಕೆ ಸರಕಾರದ ನಿರ್ದೇಶನ ಪಡೆದೇ ಬರಬೇಕಾಗುತ್ತದೆ. ನಿರ್ದೇಶನ ಪಡೆದೇ ಬಂದಿದ್ದೇವೆ ಎಂದು ಹೇಳಿದರು. ನಂತರ ಕುಷ್ಟಗಿ ತಾಲೂಕಿನ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದರು.

ಇದೇ ವೇಳೆ, ಕೇಂದ್ರದ ಕೃಷಿ ಮತ್ತು ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ದಿನೇಶ್‌ ಕುಮಾರ್‌ ನೇತೃತ್ವದ ಕೇಂದ್ರ ತಂಡವು ರಾಯಚೂರು ಜಿಲ್ಲೆಯ ಯರಡೋಣಿ, ಹೊನ್ನಳ್ಳಿ ಮತ್ತಿತರರೆಡೆಗಳಲ್ಲಿ ಅಧ್ಯಯನ ನಡೆಸಿತು. ಹಲವೆಡೆ ರೈತರು ತಮ್ಮ ಗೋಳಿನ ಪರಿಸ್ಥಿತಿಯನ್ನು ಬಿಚ್ಚಿಟ್ಟರು.

ಬರ ಅಧ್ಯಯನದ ಹೆಸರಲ್ಲಿ ನಾಟಕ: ಬಾಬಾಗೌಡ
ಹಾವೇರಿ: ಜನವರಿ ಮೊದಲ ವಾರದಲ್ಲಿ ಅಧ್ಯಯನಕ್ಕೆ ಬರಬೇಕಿದ್ದ ಬರ ಅಧ್ಯಯನ ತಂಡ ಈಗ ಬಂದು ಏನು ಅಧ್ಯಯನ ಮಾಡುತ್ತದೆ? ಈಗ ರೈತರ ಭೂಮಿ ಒಣಗಿ ಬರಡಾಗಿದೆ. ಇಂತಹ ಸಂದರ್ಭದಲ್ಲಿ ಬರ ಅಧ್ಯಯನ ಆಯೋಜಿಸಿದವರು ಯಾರು? ಎಂದು ರೈತ ಸಂಘದ ಅಧ್ಯಕ್ಷ, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂಗಾರು ಹಂಗಾಮು ಸಹ ವಿಫಲಗೊಂಡು ಜನವರಿ ಮೊದಲ ವಾರದಲ್ಲಿಯೇ ರೈತರ ಬೆಳೆ ಒಣಗಿ ಹೋಗಿದೆ. ಒಣಗಿದ ಬೆಳೆಯನ್ನು ರೈತರು ತಮ್ಮ ದನಕರುಗಳನ್ನು ಹೊಲಗಳಲ್ಲಿ ಕೂಡಿ ಆಗಲೇ ಮೇಯಿಸಿದ್ದಾರೆ. ಒಂದಿಷ್ಟೂ ಇಳುವರಿ ಬಂದಿಲ್ಲ. ಈಗ ಕೇಂದ್ರ ತಂಡ ಏನು ಅಧ್ಯಯನ ಮಾಡಲಿದೆ ಎಂದು ಪ್ರಶ್ನಿಸಿದರು.
-ಉದಯವಾಣಿ

Write A Comment