ಕರ್ನಾಟಕ

ಬೀಡಿ-ಸಿಗರೇಟ್ ಪ್ಯಾಕ್ ಮೇಲೆ ಶೇ. 85 ಎಚ್ಚರಿಕೆ ಚಿತ್ರ

Pinterest LinkedIn Tumblr

cigarateeಬೆಂಗಳೂರು: ಸಿಗರೇಟ್ ಹಾಗೂ ಬೀಡಿ ಲಕೋಟೆಯ ಎರಡು ಬದಿಯಲ್ಲಿ ಶೇ.85 ಚಿತ್ರಸಹಿತ ಎಚ್ಚರಿಕೆ ಸಂದೇಶ ಪ್ರಕಟಿಸಲು ಹೈಕೋರ್ಟ್ ಹಸಿರುನಿಶಾನೆ ತೋರಿದೆ.

ಚಿತ್ರಸಹಿತ ಎಚ್ಚರಿಕೆ ಸಂದೇಶ ಪ್ರಕಟಣೆಗೆ 2015ರ ಡಿ. 4ರಂದು ನೀಡಿದ್ದ ಮಧ್ಯಂತರ ಆದೇಶ ತೆರವುಗೊಳಿಸಿದ ನ್ಯಾ. ರವಿ ಮಳೀಮಠ, ನಿಯಮ ಅನುಷ್ಠಾನಕ್ಕಿದ್ದ ತೊಡಕು ನಿವಾರಿಸಿದ್ದಾರೆ. ಹೈಕೋರ್ಟ್​ನ ಈ ಆದೇಶದಿಂದಾಗಿ ಏ.1ರಿಂದ ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಸಿಗರೇಟ್-ಬೀಡಿ ಲಕೋಟೆಯ ಎರಡೂ ಬದಿಯಲ್ಲಿ ಕಡ್ಡಾಯವಾಗಿ ಶೇ. 85 ಭಾಗ ಚಿತ್ರಸಹಿತ ಎಚ್ಚರಿಕೆ ಸಂದೇಶ ಪ್ರಕಟಿಸಲೇಬೇಕು.

ಮಧ್ಯಂತರ ಆದೇಶ ತೆರವಿಗೆ ಕೇಂದ್ರವು ಫೆಬ್ರವರಿಯಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಏಕಸದಸ್ಯ ಪೀಠ, ಸಾರ್ವಜನಿಕ ಹಿತದೃಷ್ಟಿಯಿಂದ ಮಧ್ಯಂತರ ತಡೆಯಾಜ್ಞೆ ಮುಂದುವರಿಕೆ ಅಸಾಧ್ಯ ಎಂದಿತ್ತು. ಇದರಿಂದ ಬೀಡಿ-ಸಿಗರೇಟ್ ಉದ್ಯಮಕ್ಕೆ ಪೆಟ್ಟು ಬೀಳಲಿದೆ ಎಂದು ವಿಚಾರಣೆ ಸಂದರ್ಭ ಉತ್ಪಾದಕರ ಪರ ವಕೀಲರೇ ಒಪ್ಪಿದ್ದರು.

ಕ್ಯಾನ್ಸರ್ ಪೀಡಿತರ ಚಿಕಿತ್ಸೆಗೆ ಪ್ರತಿವರ್ಷ 1.04 ಲಕ್ಷ ಕೋಟಿ ರೂ. ಖರ್ಚಾಗುತ್ತಿದೆ. ಆರೋಗ್ಯ ಕ್ಷೇತ್ರಕ್ಕೆ ಅನುದಾನ ನೀಡುವುದೇ ಕೇಂದ್ರಕ್ಕೆ ದೊಡ್ಡ ಸವಾಲು. ವಿಶ್ವದಲ್ಲೇ ಅತಿಹೆಚ್ಚು ತಂಬಾಕು ಸೇವಿಸುವ ದೇಶದಲ್ಲಿ ಭಾರತವೂ ಒಂದು. ಅದರಲ್ಲೂ ಅವಿದ್ಯಾವಂತ ಧೂಮಪಾನಿಗಳಿಗೆ ಚಿತ್ರಸಹಿತ ಎಚ್ಚರಿಕೆ ಸಂದೇಶ ಅತ್ಯಗತ್ಯ. ಇದನ್ನು ಗಮನದಲ್ಲಿಟ್ಟುಕೊಂಡು ಸಂದೇಶದ ಪ್ರಮಾಣವನ್ನು ಶೇ. 85ಕ್ಕೆ ಏರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಮಧ್ಯಂತರ ಅರ್ಜಿಯಲ್ಲಿ ಹೇಳಿತ್ತು. ಸಿಗರೇಟ್-ಬೀಡಿಯಲ್ಲಿ ಕ್ಯಾನ್ಸರ್​ಕಾರಕ 69 ರಾಸಾಯನಿಕಗಳಿವೆ. ಸಿಗರೇಟ್​ಗಿಂತ ಬೀಡಿಯೇ ಹೆಚ್ಚು ದುಷ್ಪರಿಣಾಮ ಬೀರುತ್ತಿದ್ದು, ಬೀಡಿ-ಸಿಗರೇಟ್ ಲಕೋಟೆ ಮೇಲೆ ಚಿತ್ರಿಸಬೇಕಿರುವ ಸಂದೇಶ ಕುರಿತ ತಡೆಯಾಜ್ಞೆ ತೆರವು ಅನಿವಾರ್ಯ ಎಂದು ಕೇಂದ್ರ ವಾದಿಸಿತ್ತು.

ಚಿತ್ರಸಹಿತ ಎಚ್ಚರಿಕೆ ಪ್ರಕಟಿಸುವ ಕುರಿತಂತೆ ಮೊದಲಿನಿಂದಲೂ ಕಾನೂನು ಹೋರಾಟ ನಡೆಸುತ್ತಿರುವ ಹೆಲ್ತ್ ಫಾರ್ ಮಿಲಿಯನ್ಸ್ ಹಾಗೂ ಕ್ಯಾನ್ಸರ್ ರೋಗಿಗಳ ಸಂಘವನ್ನು ಪ್ರತಿವಾದಿಗಳನ್ನಾಗಿ ಸೇರ್ಪಡೆ ಮಾಡಿಕೊಳ್ಳಲು ಹೈಕೋರ್ಟ್ ಸಮ್ಮತಿಸಿದೆ. ಪ್ರಕರಣದ ವಿಚಾರಣೆಗೆ ಕೇಂದ್ರ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಕ್ಯಾನ್ಸರ್ ರೋಗಿಗಳ ಪರ ಹೋರಾಟ ನಡೆಸುತ್ತಿರುವ ಇವೆರಡು ಎನ್​ಜಿಒಗಳನ್ನು ಪ್ರತಿವಾದಿಯನ್ನಾಗಿ ಸೇರಿಸಿಕೊಳ್ಳುವಂತೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಗೆ ಬೀಡಿ ಹಾಗೂ ಸಿಗರೇಟ್ ಉತ್ಪಾದಕರ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದರು.

ಪ್ರಕರಣದ ಹಿನ್ನೆಲೆಯೇನು?

2014ರ ಅ. 15ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿ ಬೀಡಿ-ಸಿಗರೇಟ್ ಲಕೋಟೆಯ ಎರಡೂ ಬದಿ ಶೇ. 85 ಚಿತ್ರಸಹಿತ ಎಚ್ಚರಿಕೆ ಸಂದೇಶ ಪ್ರಕಟಿಸಲು ಆದೇಶಿಸಿತ್ತು. ಕೇಂದ್ರ ಸರ್ಕಾರದ ಆದೇಶಕ್ಕೆ ಡಿ.4ರಂದು ಮಧ್ಯಂತರ ತಡೆಯಾಜ್ಞೆ ನೀಡಲಾಗಿತ್ತು. ಇಷ್ಟೊಂದು ಪ್ರಮಾಣದಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸುವುದರಿಂದ ಉದ್ಯಮದ ಮೇಲೆ ದುಷ್ಪರಿಣಾಮ ಬೀರುತ್ತದೆ ಹಾಗೂ ಲಕೋಟೆ ಮೇಲೆ ಇನ್ಯಾವುದೇ ವಿಚಾರಗಳನ್ನು ಪ್ರಕಟಿಸಲು ಜಾಗವಿರುವುದಿಲ್ಲ ಎನ್ನುವುದು ಉತ್ಪಾದಕರ ವಾದವಾಗಿತ್ತು.

ಸುಪ್ರೀಂಗೆ ಮೇಲ್ಮನವಿ ಸಾಧ್ಯತೆ

ತಡೆಯಾಜ್ಞೆ ತೆರವಿಗೆ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ. ಕಂಪನಿಗಳ ಪರ ಕೇಂದ್ರ ಲಾಬಿ ಮಾಡುತ್ತಿದೆ ಎಂಬ ಆರೋಪ ಕೇಳಿಬಂತು. ಹೈಕೋರ್ಟ್​ನಲ್ಲಿ ಸಲ್ಲಿಸಿದ ಮಧ್ಯಂತರ ಅರ್ಜಿ ಹಾಗೂ ಕಾನೂನು ಹೋರಾಟದಿಂದ ಮಧ್ಯಂತರ ಆದೇಶ ತೆರವಿಗೆ ಕೇಂದ್ರ ಸಫಲವಾಗಿದೆ. ಆದರೆ, ಪ್ರಕರಣವು ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದ್ದು, ಬೀಡಿ ಹಾಗೂ ಸಿಗರೇಟ್ ಕಂಪನಿ ಮಾಲೀಕರು ಮೇಲ್ಮನವಿ ಹೋಗುವುದಾಗಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

Write A Comment