ಕರ್ನಾಟಕ

ಮಹಿಳಾ ಪೊಲೀಸ್ ಠಾಣೆಗಳು!

Pinterest LinkedIn Tumblr

Lady-Police
-ಕೀರ್ತಿನಾರಾಯಣ ಸಿ.

ಬೆಂಗಳೂರು: ಹೊಸದಾಗಿ 10 ಮಹಿಳಾ ಪೊಲೀಸ್ ಠಾಣೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಹಸಿರುನಿಶಾನೆ ತೋರಿಸಿದೆ. ಆದರೆ, ಅಸ್ತಿತ್ವದಲ್ಲಿರುವ ಮಹಿಳಾ ಪೊಲೀಸ್ ಠಾಣೆಗಳು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಿವೆ. ಅನ್ಯಾಯಕ್ಕೆ ಒಳಗಾದ ಮಹಿಳೆ ಕಣ್ಣೊರೆಸಿ ನ್ಯಾಯ ಕೊಡಿಸುವ ಸಾಮರ್ಥ್ಯವೂ ಇಲ್ಲ, ಸೌಲಭ್ಯವೂ ಇಲ್ಲ!

ಮಹಿಳಾ ಪೊಲೀಸ್ ಠಾಣೆಗಳ ಅಧಿಕಾರ ವ್ಯಾಪ್ತಿ ಕೌಟುಂಬಿಕ ದೌರ್ಜನ್ಯ (ಐಪಿಸಿ ಸೆಕ್ಷನ್ 498) ಪ್ರಕರಣಗಳಿಗಷ್ಟೆ ಸೀಮಿತ. ಅತ್ಯಾಚಾರ, ಲೈಂಗಿಕ ದೌರ್ಜನ್ಯ ಹಾಗೂ ಅಸಭ್ಯ ವರ್ತನೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುವ ಅಧಿಕಾರ ಇಲ್ಲ. ಒಂದು ವೇಳೆ ಇಂಥ ಕೇಸ್​ಗಳು ಠಾಣೆ ಮೆಟ್ಟಿಲೇರಿದರೂ ಸರಹದ್ದಿನ ಕಾನೂನು ಸುವ್ಯವಸ್ಥೆ ವಿಭಾಗದ ಠಾಣೆಗೆ ಕಳುಹಿಸಲಾಗುತ್ತದೆ.

ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಹಿತಾಸಕ್ತಿ ಕಾಪಾಡುವ ಹಾಗೂ ಸಂತ್ರಸ್ತೆ ಮುಕ್ತವಾಗಿ ದೂರು ದಾಖಲಿಸಬೇಕೆಂಬ ಉದ್ದೇಶದಿಂದ ಮಹಿಳಾ ಠಾಣೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಆದರೆ, ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರವೆ ಇಲ್ಲವಾದರೆ ಅದರಿಂದಾಗುವ ಪ್ರಯೋಜನವಾದರು ಏನು ಎಂಬುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಬೆಂಗಳೂರಿನಲ್ಲಿ ಹಲಸೂರು ಗೇಟ್ ಮತ್ತು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗಳು ಅಸ್ತಿತ್ವದಲ್ಲಿವೆ. ಆದರೆ, ಈ ಠಾಣೆಗಳು ಸಿಬ್ಬಂದಿ ಮತ್ತು ಮೂಲಸೌಕರ್ಯವಿಲ್ಲದೆ ಸೊರಗುತ್ತಿವೆ.ಈ ಸತ್ಯ ಸಂಗತಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ಸೋಮವಾರ ದಿಢೀರ್ ಭೇಟಿ ಕೊಟ್ಟ ಗೃಹಸಚಿವ ಡಾ. ಜಿ. ಪರಮೇಶ್ವರ್ ಗಮನಕ್ಕೆ ಬಂದಿದೆ.

ಬಸವನಗುಡಿ ಮಹಿಳಾ ಠಾಣೆ 2003ರಲ್ಲಿ ಆರಂಭವಾಗಿದೆ. ಇನ್ಸ್​ಪೆಕ್ಟರ್, ಸಬ್ ಇನ್ಸ್​ಪೆಕ್ಟರ್, ಪೇದೆ ಮತ್ತು ಮುಖ್ಯಪೇದೆ ಸೇರಿ 24 ಹುದ್ದೆಗಳು ಮಂಜೂರಾಗಿವೆ. ಆದರೆ, 14 ಹುದ್ದೆಗಳು ಈವರೆಗೂ ಭರ್ತಿಯಾಗಿಲ್ಲ. ಇದ್ದ ಒಬ್ಬ ಸಬ್ ಇನ್ಸ್​ಪೆಕ್ಟರ್ ಹೆರಿಗೆ ರಜೆ ಪಡೆದಿದ್ದಾರೆ. ಹಲಸೂರು ಗೇಟ್ ಮಹಿಳಾ ಠಾಣೆ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವೇನಿಲ್ಲ. ನಿಯಮದ ಪ್ರಕಾರ ಠಾಣೆಯಲ್ಲಿ ಒಬ್ಬ ಇನ್ಸ್​ಪೆಕ್ಟರ್, 6 ಎಸ್ಸೈ, 2 ಎಎಸ್ಸೈ, 6 ಮುಖ್ಯಪೇದೆ, 24 ಪೇದೆಗಳಿರಬೇಕು. ಆದರೆ, ಇದರಲ್ಲಿ ಅರ್ಧದಷ್ಟು ಸಿಬ್ಬಂದಿಯೂ ಲಭ್ಯವಿಲ್ಲ.

ಠಾಣೆಗಳು ಮಹಿಳೆಯರ ಹಿತಾಸಕ್ತಿ ದೃಷ್ಟಿಯಿಂದ ಕೆಲಸ ನಿರ್ವಹಿಸಬೇಕಾದರೆ ಶೀಘ್ರ ಅಗತ್ಯ ಸಿಬ್ಬಂದಿ ಹಾಗೂ ಮೂಲಸೌಕರ್ಯ ಒದಗಿಸುವ ಜತೆಗೆ ಅತ್ಯಾಚಾರ ಸೇರಿ ಎಲ್ಲ ರೀತಿಯ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುವ ಅಧಿಕಾರ ನೀಡಬೇಕು ಎಂದು ಪೊಲೀಸ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಲ್ಲೆಲ್ಲಿವೆ ಮಹಿಳಾ ಠಾಣೆಗಳು

ಬೆಂಗಳೂರಲ್ಲಿ 2, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕುಂದಾಪುರ, ಕಲಬುರಗಿ, ದಾವಣಗೆರೆ ಹಾಗೂ ಶಿವಮೊಗ್ಗದಲ್ಲಿ ಅಸ್ತಿತ್ವದಲ್ಲಿವೆ. ರಾಮನಗರ, ಚಿಕ್ಕಬಳ್ಳಾಪುರ, ಮೈಸೂರು, ಕೊಡಗು, ಮಂಡ್ಯ, ಕಾರವಾರ, ಚಿಕ್ಕಮಗಳೂರು, ಬೆಳಗಾವಿ, ಕೊಪ್ಪಳ, ಬಳ್ಳಾರಿಯಲ್ಲಿ ಹೊಸದಾಗಿ ಮಹಿಳಾ ಠಾಣೆಗಳ ಆರಂಭಿಸಲು ಸರ್ಕಾರ ಅನುಮತಿ ನೀಡಿದೆ.

ಆರು ಬಾರಿ ಪತ್ರ ಬರೆದಿದ್ದರೂ ಏನೂ ಪ್ರಯೋಜನವಾಗಿಲ್ಲ

ಠಾಣೆಗೆ ಮಂಜೂರಾಗಿರುವ ಹುದ್ದೆಗಳಲ್ಲಿ ಅರ್ಧದಷ್ಟು ಸಿಬ್ಬಂದಿ ಕೊರತೆ ಇರುವುದರಿಂದ ಪ್ರಕರಣಗಳ ನಿರ್ವಹಣೆ ಕಷ್ಟವಾಗಿದೆ. ಆದಷ್ಟು ಬೇಗ ಅಗತ್ಯ ಸಿಬ್ಬಂದಿ ನಿಯೋಜಿಸುವಂತೆ ಹಲಸೂರು ಗೇಟ್, ಬಸವನಗಡಿ ಮಹಿಳಾ ಠಾಣಾ ವಿಭಾಗದ ಮುಖ್ಯಸ್ಥರು 6 ಪತ್ರ ಬರೆದಿದ್ದರೂ ಸಂಬಂಧಿತ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಆದಷ್ಟು ಬೇಗ ಸಿಬ್ಬಂದಿ ನೀಡುವುದಾಗಿ ಹೇಳುತ್ತ ಕಾಲ ದೂಡುತ್ತಿದ್ದಾರೆ ಎಂದು ಠಾಣಾ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ. ಇನ್ನು ವಾಹನ ಸೌಲಭ್ಯವೂ ಇಲ್ಲ. ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾದಾಗ ಆರೋಪಿಯ ಬಂಧನಕ್ಕೆ ಕಾನೂನು ಸುವ್ಯವಸ್ಥೆ ಠಾಣೆಯ ಪುರುಷ ಸಿಬ್ಬಂದಿ ಜತೆ ಆ ಠಾಣೆಗೆ ನೀಡುವ ವಾಹನದಲ್ಲಿ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

Write A Comment