ಬೆಂಗಳೂರು, ಫೆ.25-ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಕಾವು ಏರತೊಡಗಿದೆ. ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಸಾರಥಿಯಾಗಲು ಹಲವರು ನಡೆಸಿರುವ ಪ್ರಯತ್ನ ತೀವ್ರಗೊಂಡಿದೆ. ಸಾಹಿತ್ಯ ಪರಿಷತ್ತಿನ ಚುನಾವಣೆ ನಡೆಯಲು ಕೇವಲ ಮೂರು ದಿನಗಳು ಬಾಕಿ ಇದ್ದು , ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಕಸರತ್ತನ್ನು ತೀವ್ರಗೊಳಿಸಿದ್ದಾರೆ.
ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರುಗಳು. ಡಿ.ಸಿ.ಮಾಯಣ್ಣ, ಪ್ರಕಾಶ್ ಮೂರ್ತಿ, ಪಿನಾಕಪಾಣಿ, ನೆ.ಬ.ರಾಮಲಿಂಗಶೆಟ್ಟಿ ಸೇರಿದಂತೆ ಒಟ್ಟು 14 ಮಂದಿ ಚುನಾವಣಾ ಕಣದಲ್ಲಿದ್ದಾರೆ. ಈ ನಾಲ್ವರಲ್ಲಿ ಪ್ರಬಲ ಪೈಪೋಟಿ ಕಂಡು ಬಂದಿದೆ. ಕಳೆದ ಬಾರಿ ಕೇವಲ 67 ಮತಗಳ ಅಂತರದಿಂದ ಸೋಲನ್ನಪ್ಪಿದ್ದ ಪ್ರಕಾಶ್ ಮೂರ್ತಿ, ಅನಿಕೇತನ ಬಳಗದ ಮೂಲಕ ಕನ್ನಡದ ಕಾಯಕ ಮಾಡುತ್ತಿರುವ ಮಾಯಣ್ಣ, ಕನ್ನಡ ಸ್ನಾತಕೋತ್ತರ ಪದವೀಧರರಾಗಿರುವ ಪಿನಾಕಪಾಣಿ, ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ರಾಮಲಿಂಗಾಶೆಟ್ಟಿ ಭಾರೀ ಪ್ರಚಾರ ನಡೆಸುತ್ತಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ 14 ಸಾವಿರದಷ್ಟಿದ್ದ ಮತಗಳ ಸಂಖ್ಯೆ ಈಗ 27 ಸಾವಿರಕ್ಕೆ ಏರಿದೆ. ಬೆಂಗಳೂರು ನಗರ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಮತ ಪ್ರಚಾರ ನಡೆಯುತ್ತಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ನ ಚುನಾವಣೆಯಲ್ಲೂ ಬೆಂಗಳೂರಿನ ಪ್ರಭಾವವೇ ಹೆಚ್ಚು. ರಾಜ್ಯದಲ್ಲಿರುವ ಮತದಾರರ ಶೇ.20ರಷ್ಟು ಮತದಾರರು ಬೆಂಗಳೂರಿನಲ್ಲಿದ್ದಾರೆ. ಇಲ್ಲಿ ಹೆಚ್ಚು ಮತಗಳಿಸುವವರಿಗೆ ಪರಿಷತ್ನ ಅಧ್ಯಕ್ಷ ಸ್ಥಾನದ ಆಯ್ಕೆಗೆ ಅನುಕೂಲವಾಗುತ್ತದೆ. ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಸಾಹಿತ್ಯ ಪರಿಷತ್ ಅಧ್ಯಕ್ಷರಿದ್ದಾರೆ. ಬಿಬಿಎಂಪಿ ಚುನಾವಣೆ ಮೀರಿಸುವಷ್ಟರ ಮಟ್ಟಿಗೆ ಈ ಚುನಾವಣೆ ನಡೆಯುತ್ತಿದೆ. ಜತೆಗೆ ರಾಜಕೀಯವಾಗಿಯೂ ಕಾವು ಪಡೆದುಕೊಂಡಿದೆ.
ಚುನಾವಣೆ ಸಮೀಪಿಸುತ್ತಿರುವಂತೆ ಮತದಾರರನ್ನು ಸೆಳೆಯಲು ವಿವಿಧ ಸಭೆ, ಸಮಾರಂಭಗಳು, ಚರ್ಚೆಗಳು, ಪಾನಗೋಷ್ಠಿಗಳು ನಡೆಯುತ್ತಿವೆ. ಎಸ್ಎಂಎಸ್, ದೂರವಾಣಿ ಕರೆಗಳು, ವಾಯ್ಸ್ ಮೆಸೇಜ್, ವಾಟ್ಸ್ಅಪ್ ಮೂಲಕ ಮತ ಯಾಚಿಸಲಾಗುತ್ತಿದೆ. ಸಾಹಿತ್ಯ, ಭಾಷೆಗಿಂತ ಜಾತಿ, ರಾಜಕೀಯ ಹಾಗೂ ಹಣದ ಪ್ರಭಾವವೂ ಇಲ್ಲಿ ಕೆಲಸ ಮಾಡುತ್ತಿದೆ. ಬಹುತೇಕ ಕಣದಲ್ಲಿರುವ ಪ್ರಬಲ ಆಕಾಂಕ್ಷಿಗಳು ವಿವಿಧ ಕನ್ನಡದ ಕಾಯಕಗಳ ಮೂಲಕ ಜನರಿಗೆ ಚಿರಪರಿಚಿತರಾಗಿದ್ದಾರೆ. ಆದರೆ, ಇದನ್ನು ಮತವಾಗಿ ಪರಿವರ್ತಿಸಿಕೊಳ್ಳುವಲ್ಲಿ ಯಾವ ರೀತಿ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕು.
ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್, ಗಣೇಶ್ ಮೊಕಾಶಿ, ಸಚಿವ ಶ್ರೀಧರ್ ಸೇರಿದಂತೆ 14 ಮಂದಿ ಚುನಾವಣಾ ಕಣದಲ್ಲಿದ್ದಾರೆ. ಆದರೆ, ಪ್ರಬಲ ಪೈಪೋಟಿ ಇರುವುದು ನಾಲ್ಕು ಮಂದಿ ನಡುವೆ ಮಾತ್ರ. ತ್ರಿಕೋನ ಸ್ಪರ್ಧೆ ಏರ್ಪಟ್ಟರೂ ಆಶ್ಚರ್ಯವಿಲ್ಲ. ಬೆಂಗಳೂರು ಮಹಾನಗರದಲ್ಲಿ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಅಗಣಿತ ಸಮಸ್ಯೆಗಳಿವೆ. ಕನ್ನಡದ ಉಳಿವಿಗಾಗಿ ಪ್ರತಿ ದಿನ, ಪ್ರತಿ ಕ್ಷಣ ಹೋರಾಟ ಮಾಡಬೇಕಾದ ದುಸ್ಥಿತಿ ಇದೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ, ಸರೋಜಿನಿ ಮಹಿಷಿ ವರದಿ ಜಾರಿ, ಕೇಂದ್ರ ಸರ್ಕಾರದ ಇಲಾಖೆಗಳ ಕಚೇರಿಗಳಲ್ಲಿ ಹಿಂದಿ ಹೇರಿಕೆ. ರೈಲ್ವೆ ಇಲಾಖೆಯ ನೇಮಕಾತಿಯಲ್ಲಿ ಕನ್ನಡಿಗರ ನಿರ್ಲಕ್ಷ್ಯ, ಕನ್ನಡದ ನಾಮಫಲಕಗಳ ಅಳವಡಿಕೆ, ಐಟಿಬಿಟಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗವಿಲ್ಲದಿರುವುದು -ಹೀಗೆ ಒಂದಲ್ಲ ಒಂದು ಕಾರಣಕ್ಕೆ ಪ್ರತಿ ದಿನ ಪ್ರತಿಭಟನೆಗಳು ನಡೆಯುತ್ತಿರುತ್ತವೆ.
ಬೆಂಗಳೂರು ಮಹಾನಗರದ ಗಲ್ಲಿ ಗಲ್ಲಿಗಳಲ್ಲಿ ಸಾವಿರಾರು ಕನ್ನಡದ ಸಂಘಟನೆಗಳಿವೆ. ಆದರೂ ನಗರದಲ್ಲಿ ಕನ್ನಡದ ಭಾಷೆ ಉಳಿವಿಗಾಗಿ ನೆಲ, ಜಲದ ಸಂಸ್ಕೃತಿಯ ಜಾಗೃತಿಗಾಗಿ ರಾಜಧಾನಿಯಲ್ಲಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು ನಗರದಲ್ಲಿ ಕನ್ನಡವನ್ನು ವಿಜೃಂಭಿಸಲು ಮಾಡಿದ, ಮಾಡುತ್ತಿರುವ ಕೆಲಸಗಳು ಅಷ್ಟಕಷ್ಟೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಾಡಿದ ಸಾಹಿತ್ಯ ಸಮ್ಮೇಳನ ಹೊರತುಪಡಿಸಿದರೆ, ಇನ್ಯಾವುದೇ ಕೆಲಸಗಳು ಕಸಾಪದಿಂದ ಆಗಿಲ್ಲ.
ಕನ್ನಡದ ಹೋರಾಟದಲ್ಲಿ ಸಾಹಿತ್ಯ ಪರಿಷತ್ತು ಮುಂಚೂಣಿಗೆ ಬರುವುದಿಲ್ಲ ಎಂಬ ಕೊರಗು ಹೋರಾಟಗಾರರಲ್ಲಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಮೈ ಕೊಡವಿ ಎದ್ದು ನಿಲ್ಲುವ ಸಾಹಿತ್ಯ ಪರಿಷತ್ತು. ಚುನಾವಣೆ ನಂತರ ಮತ್ತೆ ತನ್ನ ಪಾಡಿಗೆ ತಾನಿರುತ್ತದೆ ಎಂದು ಕನ್ನಡಾಭಿಮಾನಿಗಳ ಆಕ್ರೋಶ. ಸಾಹಿತ್ಯ ಪರಿಷತ್ತು ಕನ್ನಡದ ಶಾಲೆಗಳು, ಕನ್ನಡ ಮಾಧ್ಯಮ, ಶಾಸ್ತ್ರೀಯ ಸ್ಥಾನ ಮಾನದ ಬಗ್ಗೆ , ಬೆಂಗಳೂರು ಮಹಾನಗರದಲ್ಲಿ ನಿರಂತರವಾಗಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಯಾವೊಂದು ಕೆಲಸವನ್ನೂ ಮಾಡಿಲ್ಲ ಎಂಬುದು ನಾಗರಿಕರ ಬೇಸರ. ಈ ಸಂದರ್ಭದಲ್ಲಿ ಮತ್ತೊಂದು ಚುನಾವಣೆ ಎದುರಾಗಿದೆ. ಫೆ.28ರಂದು ಚುನಾವಣೆ ನಡೆಯಲಿದ್ದು, ಹೊಸದಾಗಿ ಆಯ್ಕೆಯಾಗುವ ಪದಾಧಿಕಾರಿಗಳಾದರೂ ಕನ್ನಡದ ಕಾಯಕವನ್ನು ಮಾಡಲಿ. ಸಾಹಿತ್ಯ, ಸಂಸ್ಕೃತಿಯನ್ನು ದಿಗಂತದಲ್ಲಿ ಮೊಳಗಿಸಲಿ ಎಂಬ ಆಶಯ ನಮ್ಮದು.