ಕರ್ನಾಟಕ

ಆರ್‌ಟಿಇ ಸೀಟು ನೀಡಿ ಔದಾರ್ಯ ತೋರಿ: ಹೈಕೋರ್ಟ್‌

Pinterest LinkedIn Tumblr

Karnataka-High-Courtಬೆಂಗಳೂರು: ಸಂವಿಧಾನ, ಕಾನೂನು ಮತ್ತು ಸುಪ್ರೀಂ ಕೋರ್ಟ್‌ ಆದೇಶ ಪಕ್ಕಕ್ಕಿಟ್ಟು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಅಡಿ ಶೇ.25ರಷ್ಟು ಮಕ್ಕಳಿಗೆ ಪ್ರವೇಶ ಕಲ್ಪಿಸುವ ಔದಾರ್ಯ ತೋರಿಸಿ ಎಂದು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಹೈಕೋರ್ಟ್‌ ಬುಧವಾರ ಮೌಖೀಕವಾಗಿ ಸಲಹೆ ನೀಡಿದೆ.

ಆರ್‌ಟಿಇ ಅಡಿ ಶೇ. 25ರಷ್ಟು ಸೀಟುಗಳನ್ನು ಪ್ರವೇಶ ಕಲ್ಪಿಸಬೇಕು ಎಂದು ಸೂಚಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಸಿಂಧಿ ಪ್ರೌಢಶಾಲೆ ಸೇರಿ ಕರ್ನಾಟಕ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟ ಸಲ್ಲಿಸಿದ್ದ ಪ್ರತ್ಯೇಕ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ ಈ ಸಲಹೆ ನೀಡಿತು.

ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳು ಆರ್‌ಟಿಇ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿರಬಹುದು. ಕಾನೂನುಗಳೂ ಇದನ್ನೇ ಸ್ಪಷ್ಟಪಡಿಸಬಹುದು. ಆದರೆ, ಸಂವಿಧಾನ, ಕಾನೂನು ಅವಕಾಶಗಳು ಮತ್ತು ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಪಕ್ಕಕ್ಕಿಟ್ಟು ಆತ್ಮಸಾಕ್ಷಿ ಅನುಗುಣವಾಗಿಯಾದರೂ ಆರ್‌ಟಿಇ ಅಡಿ ಶೇ.25ರಷ್ಟು ಸೀಟುಗಳನ್ನು ದಾಖಲಿಸಿಕೊಳ್ಳುವ ಔದಾರ್ಯ ತೋರಬೇಕು. ಹೇಗಿದ್ದರೂ ಶಾಲೆಗಳು ಸೀಟು ಮರಾಟ ಮಾಡುವುದಲ್ಲವೇ ಎಂದು ನ್ಯಾಯಮೂರ್ತಿಗಳು ಅಲ್ಪಸಂಖ್ಯಾತ ಶಾಲೆಗಳಿಗೆ ತಿಳಿಸಿದರು.

ಈ ಮಧ್ಯೆ ಶಾಲೆಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡುವ ರಾಜ್ಯ ಸರ್ಕಾರವೋ ಅಥವಾ ಕೇಂದ್ರ ಸರ್ಕಾರವೋ? ಎಂಬ ಬಗ್ಗೆ ಪ್ರಶ್ನೆ ಉದ್ಭವಿಸಿತು. ಈ ಬಗ್ಗೆ ನ್ಯಾಯಮೂರ್ತಿಗಳು ಸ್ಪಷ್ಟನೆ ಕೇಳಿದಾಗ, ರಾಜ್ಯ ಸರ್ಕಾರವೇ ಇದಕ್ಕೆ ಸೂಕ್ತ ಪ್ರಾಧಿಕಾರ ಎಂದು ಅರ್ಜಿದಾರರು ವಾದಿಸಿದರೆ, ಅಲ್ಪಸಂಖ್ಯಾತ ಮಾನ್ಯತೆ ನೀಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ರಾಜ್ಯ ಸರ್ಕಾರ ಹೇಳಿತು.

ತದನಂತರ ರಾಜ್ಯ ಸರ್ಕಾರಿ ವಕೀಲರು ವಾದಿಸಿ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಕಾಯ್ದೆ-1992ರ ಪ್ರಕಾರ ಕೇಂದ್ರ ಸರ್ಕಾರವೇ ಶಿಕ್ಷಣ ಸಂಸ್ಥೆಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ 2005ರಲ್ಲಿ ತೀರ್ಪು ನೀಡಿದೆ. ಹೀಗಾಗಿ, ರಾಜ್ಯ ಸರ್ಕಾರವು ಶಾಲೆಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡುವ ಸೂಕ್ತ ಪ್ರಾಧಿಕಾರವಲ್ಲ ಎಂದು ತಿಳಿಸಿದರು.

ಅರ್ಜಿದಾರರ ಪರ ವಕೀಲರು ವಾದಿಸಿ, ಅಲ್ಪಸಂಖ್ಯಾತ ಶಾಲೆಗಳು ಆರ್‌ಟಿಇ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಆರ್‌ಟಿಇ ಅಡಿ ಶೇ.25 ಸೀಟುಗಳಿಗೆ ಪ್ರವೇಶ ಕಲ್ಪಿಸಲಾಗುವುದಿಲ್ಲ. ಆದರೂ ಆರ್‌ಟಿಇ ಆಡಿ ಶೇ.25ರಷ್ಟು ಸೀಟುಗಳಿಗೆ ಮಕ್ಕಳನ್ನು ದಾಖಲಿಸಿಕೊಳ್ಳುವಂತೆ ಸರ್ಕಾರ ಅಲ್ಪಸಂಖ್ಯಾತ ಶಾಲೆಗಳಿಗೆ ನಿರ್ದೇಶಿಸುತ್ತಿದೆ. ಇದು ಕಾನೂನು ಬಾಹಿರವಾಗಿದ್ದು, ಈ ರೀತಿ ನಿರ್ದೇಶನ ನೀಡದಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದರು ಕೋರಿದರು. ರಾಜ್ಯ ಸರ್ಕಾರದ ಹೇಳಿಕೆಗೆ ಆಕ್ಷೇಪಣೆ ಸಲ್ಲಿಸುವಂತೆ ಅರ್ಜಿ ಸಲ್ಲಿಸಿದ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿ ವಿಚಾರಣೆ ಮುಂದೂಡಿತು.
-ಉದಯವಾಣಿ

Write A Comment