ಕರ್ನಾಟಕ

ಬೇಸಿಗೆಗೂ ಮುನ್ನವೇ ಏರುತ್ತಿದೆ ಬಿಸಿಲ ಧಗೆ

Pinterest LinkedIn Tumblr

hotಬೆಂಗಳೂರು, ಫೆ.25-ಬೇಸಿಗೆಗೂ ಮುನ್ನವೇ ತಾಪಮಾನದ ಏರಿಕೆಯ ಬಿಸಿ ರಾಜ್ಯದೆಲ್ಲೆಡೆ ತಟ್ಟತೊಡಗಿದೆ. ಬರದಿಂದ ತತ್ತರಿಸಿರುವ ರಾಜ್ಯದಲ್ಲಿ ಅವಧಿಗೂ ಮುನ್ನವೇ ಬೇಸಿಗೆ ಆವರಿಸಿದಂತಾಗಿದೆ. ಅದರಲ್ಲೂ ಉತ್ತರ ಕರ್ನಾಟಕ ಬಿಸಿಲ ಧಗೆಯಿಂದ ಕಾದ ಉಂಡೆಯಂತಾಗುತ್ತಿದೆ.

ಏಪ್ರಿಲ್-ಮೇ ತಿಂಗಳಲ್ಲಿ ದಾಖಲಾಗುತ್ತಿದ್ದ ಗರಿಷ್ಠ ಉಷ್ಣಾಂಶ ಚಳಿಗಾಲವಿರುವ ಫೆಬ್ರವರಿ ತಿಂಗಳಲ್ಲೇ ಕಂಡುಬರುತ್ತಿದ್ದು, ಹವಾಮಾನ ವೈಪರೀತ್ಯದ ಆತಂಕ ಎದುರಾಗತೊಡಗಿದೆ. ಈಗಾಗಲೇ ಗ್ರಾಮೀಣ ಭಾಗದ ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವ ಕಾಡತೊಡಗಿದೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆ ಮತ್ತಷ್ಟು ಹೆಚ್ಚಾಗಲಿದೆ. ಬರದ ನಾಡಾದ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮುಂತಾದ ಕಡೆ ತಾಪಮಾನ ಹೆಚ್ಚಳಕ್ಕೆ ಜನತೆ ತತ್ತರಿಸಿ ಹೋಗಿದ್ದಾರೆ.

ಉತ್ತರ ಕರ್ನಾಟಕದ ರಾಯಚೂರು, ಕೊಪ್ಪಳ, ಹಾವೇರಿ,  ಬಳ್ಳಾರಿ, ಬೀದರ್ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಮಲೆನಾಡು ಭಾಗದ ಜಿಲ್ಲೆಗಳಲ್ಲೂ ತಾಪಮಾನದ ತೀವ್ರತೆ ಹೆಚ್ಚಾಗತೊಡಗಿದೆ. ಕರಾವಳಿ ಭಾಗದಲ್ಲಂತೂ ಬಿಸಿಲಿನ ತೀವ್ರತೆ ಹೇಳತೀರದು. ಬೆಂಗಳೂರು ನಗರದ ಜನತೆ ಈಗಾಗಲೇ ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದ್ದಾರೆ.ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಕೊಡಗು ಜಿಲ್ಲೆ ಹೊರತು ಪಡಿಸಿದರೆ, ಉಳಿದ ಬಹುತೇಕ ಜಿಲ್ಲೆಗಳ ಗರಿಷ್ಠ ತಾಪಮಾನ 37 ಡಿ.ಸೆ.ಗಿಂತ ಹೆಚ್ಚಾಗಿರುವುದು ಕಂಡುಬಂದಿದೆ.

ಚಳಿಗಾಲ ಮುಗಿಯುವ ಮುನ್ನವೇ ಇಷ್ಟು ಪ್ರಮಾಣದ ತಾಪಮಾನವಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಬೇಸಿಗೆಯ ದಿನಗಳಲ್ಲಿ ಒಂದೆಡೆ ನೀರಿನ ಅಭಾವ, ಮತ್ತೊಂದೆಡೆ ವಿದ್ಯುತ್ ಕೊರತೆ ನಡುವೆ ಬಿಸಿಲ ಬೇಗೆಯೂ ಏರಿಕೆಯಾದರೆ ಬದುಕು ನಡೆಸುವುದು ಹೇಗೆಂಬ ಚಿಂತೆ ಜನರನ್ನು ಕಾಡುತ್ತಿದೆ.ಬೆಂಗಳೂರು ನಗರದಲ್ಲಿ 37.10 ಡಿ.ಸೆ.ನಷ್ಟಿದೆ. ಸಕ್ಕರೆ ನಾಡು ಮಂಡ್ಯದಲ್ಲಿ 44.40 ಡಿ.ಸೆ.ನಷ್ಟು ರಾಜ್ಯದಲ್ಲೇ ಅತ್ಯಧಿಕ ಗರಿಷ್ಠ ತಾಪಮಾನ ದಾಖಲಾಗಿದೆ.

ಕಲಬುರ್ಗಿ, ರಾಯಚೂರುಗಳಲ್ಲಿ 42, ಕೊಪ್ಪಳದಲ್ಲಿ 39.10, ಬಳ್ಳಾರಿ 40.20, ಮೈಸೂರು 39.60, ಚಾಮರಾಜನಗರ 37, ಚಿತ್ರದುರ್ಗ 38.50, ದಾವಣಗೆರೆ 39.30, ಚಿಕ್ಕಬಳ್ಳಾಪುರ 38, ತುಮಕೂರು 38.30, ಕೋಲಾರ 36.40, ರಾಮನಗರ 38.40, ಬೆಂಗಳೂರು ಗ್ರಾಮಾಂತರ 37, ಬೀದರ್ 39.80, ಬೆಳಗಾವಿ 36.80, ಬಾಗಲಕೋಟೆ 38.60, ವಿಜಯಪುರ 39.80, ಗದಗ್ 37.20, ಹಾವೇರಿ, ಧಾರವಾಡ 36.20, ಶಿವಮೊಗ್ಗ 36.40, ಹಾಸನ 38.10, ಚಿಕ್ಕಮಗಳೂರು 34.60, ಕೊಡಗು 32.10, ದ.ಕನ್ನಡ 37, ಉಡುಪಿ 34, ಉತ್ತರ ಕನ್ನಡ 36.70, ಯಾದಗಿರಿ 39.10 ಡಿ.ಸೆ.ಉಷ್ಣತೆ ದಾಖಲಾಗಿದೆ.

Write A Comment