ಕರ್ನಾಟಕ

ಪರಂ ಬೆನ್ನಲ್ಲೇ ಸಿಎಂ ಸಿದ್ದು ಕೂಡ ದಿಲ್ಲಿಗೆ

Pinterest LinkedIn Tumblr

siddaramaiahಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆಯ “ಸಮಾಧಾನಕರ ಬಹುಮಾನದ ಟ್ರೋಫಿ’ ಹೊತ್ತು ಶುಕ್ರವಾರ ದೆಹಲಿಗೆ ತೆರಳಲಿದ್ದು, ಉಪ ಚುನಾವಣೆ ಹಾಗೂ ಜಿಪಂ ಚುನಾವಣೆ ಫ‌ಲಿತಾಂಶ ಕುರಿತ ವರದಿಯನ್ನು ಹೈಕಮಾಂಡ್‌ನ‌ ವರಿಷ್ಠರಿಗೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರು ಹಠಾತ್‌ ದೆಹಲಿಗೆ ನೀಡಿ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಬುಧವಾರ ಭೇಟಿ ಮಾಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲು ಮುಂದಾಗಿರುವುದು ಮತ್ತು ಈ ಇಬ್ಬರು ನಾಯಕರು ಪ್ರತ್ಯೇಕವಾಗಿ ದೆಹಲಿ ಪ್ರವಾಸ ಕೈಗೊಂಡಿರುವುದು ಹಲವು ವ್ಯಾಖ್ಯಾನಗಳಿಗೆ ಅವಕಾಶ ಮಾಡಿಕೊಟ್ಟಿದೆ.
ಪರಮೇಶ್ವರ್‌ ಅವರು ಮಂಗಳವಾರವೇ ದೆಹಲಿಗೆ ತೆರಳಿದ್ದು, ಬುಧವಾರ ಬೆಳಗ್ಗೆ ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಸಂಜೆ ರಾಜ್ಯ ಉಸ್ತುವಾರಿ ದಿಗ್ವಿಜಯಸಿಂಗ್‌ ಅವರೊಂದಿಗೆ ಮಾತುಕತೆ ನಡೆಸಿದರು. ಅಲ್ಲದೆ, ಗುರುವಾರದಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಭೇಟಿಗೆ ಅವಕಾಶ ಕೋರಿದ್ದಾರೆ. ಪರಮೇಶ್ವರ್‌ ಅವರು ಈ ಭೇಟಿಯ ಸಂದರ್ಭದಲ್ಲಿ ಉಪ ಚುನಾವಣೆ ಸೋಲಿಗೆ ಕಾರಣ ಕುರಿತು ಲಿಖೀತ ವರದಿಯನ್ನು ಹೈಕಮಾಂಡ್‌ನ‌ ವರಿಷ್ಠರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇದರ ಜತೆಗೆ, ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್‌ ಅಷ್ಟೇನು ಉತ್ತಮವಲ್ಲದ ಸಾಧನೆ ಕುರಿತು ಮೌಖೀಕ ವರದಿ ನೀಡಿದರು ಎಂದು ಮೂಲಗಳು ಹೇಳುತ್ತವೆ. ಪರಮೇಶ್ವರ್‌ ಅವರ ದೆಹಲಿ ಭೇಟಿ ಪೂರ್ವ ನಿರ್ಧಾರಿತವಾಗಿತ್ತು ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.

ಜಿಲ್ಲಾವಾರು ಸಾಧನೆ ವರದಿ:
ಪರಮೇಶ್ವರ್‌ ದೆಹಲಿ ಭೇಟಿಯ ಬೆನ್ನ ಹಿಂದೆಯೇ ತಾವು ತೆರಳಲಿರುವ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿಯಲ್ಲಿ ಕಾಂಗ್ರೆಸ್‌ನ ಸಾಧನೆ ಹಾಗೂ ಅದಕ್ಕೆ ಕಾರಣಗಳ ಕುರಿತು ವಿಸ್ತೃತ ಲಿಖೀತ ವರದಿಯೊಂದನ್ನು ಸಿಎಂ ಸಿದ್ಧಪಡಿಸಿಕೊಂಡಿದ್ದು, ಅದನ್ನು ಹೈಕಮಾಂಡ್‌ಗೆ ಅವರು ನೀಡಲಿದ್ದಾರೆ ಎಂದು ಆಪ್ತ ಮೂಲಗಳು ಹೇಳುತ್ತವೆ. ಶುಕ್ರವಾರ ಬೆಳಗ್ಗೆ ದೆಹಲಿಗೆ ತೆರಳಲಿರುವ ಸಿಎಂ ಅವರು ಶುಕ್ರವಾರ ರಾತ್ರಿಯೇ ನಗರಕ್ಕೆ ಹಿಂತಿರುಗುವರು ಎಂಬುದು ಅವರ ಆಪ್ತ ವಲಯಗಳ ಅಂಬೋಣ.

ಈ ಭೇಟಿಯ ಸಂದರ್ಭದಲ್ಲಿ ಅತಂತ್ರವಾಗಿರುವ ಜಿ.ಪಂಗಳಲ್ಲಿ ಸ್ಥಳೀಯವಾಗಿ ಮೈತ್ರಿ ಮಾಡಿಕೊಳ್ಳುವ ಕುರಿತು ಅವರು ಹೈಕಮಾಂಡ್‌ನೊಂದಿಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
-ಉದಯವಾಣಿ

Write A Comment