ಕರ್ನಾಟಕ

ಈಗ ದೋಸ್ತಿ ಪಂಚಾಯ್ತಿ! ಅತಂತ್ರ ಜಿಪಂ, ತಾಪಂ ಅಧಿಕಾರಕ್ಕಾಗಿ ಕಸರತ್ತು

Pinterest LinkedIn Tumblr

election-1ರಾಜ್ಯದಲ್ಲಿ 11 ಜಿಲ್ಲಾ ಪಂಚಾಯ್ತಿಗಳು, 30ಕ್ಕೂ ಹೆಚ್ಚು ತಾಲೂಕು ಪಂಚಾಯ್ತಿಗಳು ಅತಂತ್ರವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಕ್ಕಾಗಿ ರಾಜಕೀಯ ಕಸರತ್ತು ನಿಧಾನವಾಗಿ ಗರಿಗೆದರುತ್ತಿದೆ. ಬಹುತೇಕ ಪಂಚಾಯ್ತಿಗಳಲ್ಲಿ ಜೆಡಿಎಸ್‌ ಪಾತ್ರ ನಿರ್ಣಾಯಕವಾಗಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿ ಅದರತ್ತ ಸ್ನೇಹದ ಸಂಜ್ಞೆಗಳನ್ನು ನೀಡತೊಡಗಿವೆ. ಜೆಡಿಎಸ್‌ ಕೂಡ ತಂತ್ರಗಾರಿಕೆ ರೂಪಿಸುತ್ತಿದ್ದು, ತನಗೆ ಯಾವುದು ಹೆಚ್ಚು ಲಾಭದಾಯಕ ಎಂಬ ಲೆಕ್ಕಾಚಾರದಲ್ಲಿ ತೊಡಗಿದೆ. ಒಟ್ಟಿನಲ್ಲಿ ಸದ್ಯಕ್ಕೇನಿದ್ದರೂ “ದೋಸ್ತಿ ಪಂಚಾಯ್ತಿ’ ಕಾಲ.

15 ಜಿಪಂಗಳಲ್ಲಿ ಅಧಿಕಾರ: ಇದು ಕಾಂಗ್ರೆಸ್‌ ಗುರಿ
ಬೆಂಗಳೂರು: ಟಾರ್ಗೆಟ್‌ 15! ಜಿಲ್ಲಾ ಪಂಚಾಯತಿ ಚುನಾವಣೆ ಫ‌ಲಿತಾಂಶದ ನಂತರದ ಕಾಂಗ್ರೆಸ್‌ ನಾಯಕರ ಹೊಸ ಗುರಿಯಿದು.

10 ಜಿ.ಪಂ.ಗಳಲ್ಲಿ ಸ್ವ ಸಾಮರ್ಥಯದ ಗೆಲವು ಕಾಂಗ್ರೆಸ್‌ ನಾಯಕರಿಗೆ ಸಮಾಧಾನ ತಂದಿಲ್ಲ. ಹೀಗಾಗಿ ಅತಂತ್ರವಾಗಿರುವ 11  ಜಿಲ್ಲೆಗಳ ಪೈಕಿ 5 ಜಿಲ್ಲೆಗಳಲ್ಲಿ ಶತಾಯಗತಾಯ ಅಧಿಕಾರ ಹಿಡಿದು ತನ್ನ ಸಂಖ್ಯೆಯನ್ನು 15ಕ್ಕೆ ಹೆಚ್ಚಿಸಿಕೊಳ್ಳುವುದು ಕಾಂಗ್ರೆಸ್‌ ನಾಯಕರ ಮುಂದಿನ ಸದ್ಯದ ಗುರಿ. ಇದಕ್ಕೆ  ಕಾರಣ ರಾಜ್ಯದ 30 ಜಿಲ್ಲೆಗಳ ಪೈಕಿ 15 ಹಾಗೂ ಅದಕ್ಕಿಂತ ಹೆಚ್ಚಿನ ಜಿಲ್ಲಾ ಪಂಚಾಯತಿಗಳಲ್ಲಿ ಅಧಿಕಾರ ಹಿಡಿಯುವ ಮೂಲಕ ಅರ್ಧಕ್ಕಿಂತ ಹೆಚ್ಚಿನ ರಾಜ್ಯದಲ್ಲಿ ಕಾಂಗ್ರೆಸ್‌ ಹಿಡಿತವಿದೆ ಎಂದು ಬಿಂಬಿಸುವ ಮೂಲಕ ತನ್ನ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವುದು.

ಈ ಗುರಿ ಮುಟ್ಟಲು ಜೆಡಿಎಸ್‌ ಹಾಗೂ ಪಕ್ಷೇತರರ ಬೆಂಬಲ ಪಡೆಯುವುದು ಮತ್ತು ಎಲ್ಲಿ ಸಾಧ್ಯವೋ ಅಲ್ಲೆಲ್ಲ ಮೀಸಲಾತಿ ಅಸ್ತ್ರ ಪ್ರಯೋಗಿಸಿ ಜಿ.ಪಂ. ಹಾಗೂ ತಾ.ಪಂ. ಅಧಿಕಾರ ಹಿಡಿಯುವ ಪ್ರಯತ್ನ ನಡೆಸುವ ತಂತ್ರಗಾರಿಕೆಗೆ ಕಾಂಗ್ರೆಸ್‌ ಸಜ್ಜಾಗಿದೆ.

ತಂತ್ರಗಾರಿಕೆ ಅಧಿಕಾರ ಸ್ಥಳೀಯ ನಾಯಕರಿಗೆ:
ಮೂಲಗಳ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧ್ಯಕ್ಷ ಹಾಗೂ ಸ್ಥಳೀಯ ನಾಯಕರ ತಂಡಕ್ಕೆ ಜಿ.ಪಂ. ಹಾಗೂ ತಾ.ಪಂ.ಗಳ ಅಧಿಕಾರ ಹಿಡಿಯಲು ಅಗತ್ಯವಾದ ತಂತ್ರಗಾರಿಕೆ ರೂಪಿಸಲು ಸಂಪೂರ್ಣ ಅಧಿಕಾರವನ್ನು ನೀಡಲಾಗಿದೆ. ಜತೆಗೆ, ಎಲ್ಲಿ ಮೀಸಲಾತಿ ಅಸ್ತ್ರಪ್ರಯೋಗಿಸಿ ಅಧಿಕಾರ ಹಿಡಿಯಲು ಸಾಧ್ಯವಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಈ ತಂಡಕ್ಕೆ ಸೂಚನೆಯನ್ನು ನೀಡಲಾಗಿದೆ.

ರೋಟೇಷನ್‌ ಮೂಲಕ ಮೀಸಲಾತಿ ಹಂಚಬೇಕಿದ್ದರೂ, ಕೆಲವು ಜಿ.ಪಂಗಳಲ್ಲಿ ಅಧಿಕಾರ ಹಿಡಿಯುವ ಅವಕಾಶವಿರುವುದರಿಂದ ಸಾಧ್ಯವಿರುವ ಎಲ್ಲಾ ದಾಳ ಪ್ರಯೋಗಿಸುವುದು ಕಾಂಗ್ರೆಸ್‌ನ ಉದ್ದೇಶ.

ಮೂಲಗಳ ಪ್ರಕಾರ ಬೆಳಗಾವಿಯಲ್ಲಿ ಕಾಂಗ್ರೆಸ್‌ಗೆ ನಾಲ್ಕು ಸ್ಥಾನಗಳ ಕೊರತೆಯಿದೆ. ಇಲ್ಲಿ ಎಂಇಎಸ್‌ ಹಾಗೂ ಪಕ್ಷೇತರರು ಸೇರಿ 6 ಮಂದಿ ಇದ್ದಾರೆ. ಅವರ ಬೆಂಬಲ ಪಡೆದು ಅಧಿಕಾರ ಗಿಟ್ಟಿಸುವ ಎಲ್ಲಾ ಪ್ರಯತ್ನ ಕಾಂಗ್ರೆಸ್‌ ನಡೆಸಲಿದೆ. ಅದೇ ರೀತಿ ಕೋಲಾರ ಹಾಗೂ ಯಾದಗಿರಿಯಲ್ಲಿ ತಲಾ ಒಂದು ಸ್ಥಾನ ಬೇಕಿದ್ದು ಪಕ್ಷೇತರರ ಮೂಲಕ ಅಲ್ಲಿ ಅಧಿಕಾರವನ್ನು ಪಕ್ಷ ಪಡೆಯಬಹುದು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ.

ಇದಲ್ಲದೆ, ಜೆಡಿಎಸ್‌ ಶಾಸಕರ ಬೆಂಬಲ ಹಾಗೂ ರೊಟೇಷನ್‌ ಲೆಕ್ಕಾಚಾರದ ಮೂಲಕ ಕನಿಷ್ಠ ಎರಡರಿಂದ ಮೂರು ಸ್ಥಾನಗಳನ್ನು ಗಿಟ್ಟಿಸಿದರೂ ತನ್ನ ಗುರಿಯಾದ ಸಂಖ್ಯೆ 15 ದಾಟುವುದು ಖಚಿತ ಎಂಬ ಭರವಸೆಯನ್ನು ಕಾಂಗ್ರೆಸ್‌ ಹೊಂದಿದೆ. ಪಕ್ಷ  ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾರಣಕ್ಕೆ ಅಭಿವೃದ್ಧಿಯ ದೃಷ್ಟಿಯಿಂದ ಪಕ್ಷೇತರರು ಹಾಗೂ ಜೆಡಿಎಸ್‌ ಸದಸ್ಯರು ಕಾಂಗ್ರೆಸ್‌ನತ್ತ ವಾಲುವ ಸಾಧ್ಯತೆ ಹೆಚ್ಚು ಎಂಬುದು ಕಾಂಗ್ರೆಸ್‌ನ ನಂಬಿಕೆ.

ಹೀಗಾಗಿ ಕಾಂಗ್ರೆಸ್‌ ತರಾತುರಿಯಲ್ಲಿ ಮೈತ್ರಿಗೆ ಮುಂದಾಗುತ್ತಿಲ್ಲ. ಫ‌ಲಿತಾಂಶದ ಅಧಿಸೂಚನೆ ಹೊರಬಿದ್ದ ನಂತರ ರೋಟೇಷನ್‌ ಆಧರಿತ ಮೀಸಲಾತಿಯಲ್ಲಿ ಯಾವ್ಯಾವ ರೀತಿಯ ತಂತ್ರಗಾರಿಕೆ ನಡೆಸಬಹುದು ಎಂಬ ಲೆಕ್ಕಾಚಾರದೊಂದಿಗೆ ಸಜ್ಜುಗೊಂಡು ಅನಂತರ ಜೆಡಿಎಸ್‌ ಹಾಗೂ ಪಕ್ಷೇತರರ ನೆರವು ಪಡೆಯುವ ಪ್ರಯತ್ನಕ್ಕೆ ಕೈ ಹಾಕಲಿದೆ.

ಅತಂತ್ರ ಸ್ಥಿತಿಯಲ್ಲಿರುವ ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದರ ಬಗ್ಗೆ ಸ್ಥಳೀಯ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಈ ವಿಷಯವನ್ನು ಹೈಕಮಾಂಡ್‌ನ‌ ಗಮನಕ್ಕೆ ತಂದು, ಆ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
– ಡಾ|ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

ಇನ್ನೂ 7 ಜಿಪಂ ಅಧಿಕಾರಕ್ಕಾಗಿ ಬಿಜೆಪಿ ಲೆಕ್ಕಾಚಾರ
ಬೆಂಗಳೂರು: ಏಳು ಜಿಲ್ಲಾ ಪಂಚಾಯ್ತಿ ಮತ್ತು 54 ತಾಲೂಕು ಪಂಚಾಯ್ತಿಗಳಲ್ಲಿ ಬಹುಮತ ಗಳಿಸಿರುವ ಬಿಜೆಪಿ ಇನ್ನಷ್ಟು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಲ್ಲಿ ಅಧಿಕಾರದ ಗದ್ದುಗೆ ಏರಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದೆ. ಆದರೆ ಇದು ಇನ್ನೂ ವೇಗ ಪಡೆದುಕೊಂಡಿಲ್ಲ.

ಜೆಡಿಎಸ್‌ ಮತ್ತು ಇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶಗಳು ಬಿಜೆಪಿಗಿದೆ. ಅತಂತ್ರಗೊಂಡಿರುವ ಜಿಲ್ಲಾ ಪಂಚಾಯ್ತಿಗಳ ಪೈಕಿ ಸುಮಾರು ಏಳರಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಯಿದೆ ಎಂಬುದು ಬಿಜೆಪಿಯ ಲೆಕ್ಕಾಚಾರ. ಹೀಗಾಗಿ ಈ ದಿಕ್ಕಿನಲ್ಲಿ ಸ್ಥಳೀಯ ಮಟ್ಟದಲ್ಲಿ ಮಾತುಕತೆ ಆರಂಭವಾಗಿದೆ. ಸದ್ಯಕ್ಕೆ ಪಕ್ಷೇತರರು ಅಥವಾ ಇತರರ ಬೆಂಬಲದೊಂದಿಗೆ ಮೈತ್ರಿಗೆ ಮೊದಲ ಆದ್ಯತೆ ನೀಡುವ ಮೂಲಕ ಅನಿವಾರ್ಯ ಇರುವೆಡೆ ಜೆಡಿಎಸ್‌ ಜತೆ ಹೊಂದಾಣಿಕೆಗೆ ಮುಂದಾಗಬೇಕು ಎಂಬ ನಿಲುವನ್ನು ಬಿಜೆಪಿ ಹೊಂದಿದೆ.

ಸಂಸತ್‌ ಅಧಿವೇಶನ ನಡೆಯುತ್ತಿರುವುದರಿಂದ ರಾಜ್ಯ ಬಿಜೆಪಿಯ ಹಿರಿಯ ನಾಯಕರ ಪೈಕಿ ಹಲವರು ದೆಹಲಿಯಲ್ಲಿ ಇದ್ದಾರೆ. ಹೀಗಾಗಿ ಈವರೆಗೆ ಗಂಭೀರ ಪ್ರಕ್ರಿಯೆ ಆರಂಭಗೊಂಡಿಲ್ಲ. ಶುಕ್ರವಾರದ ನಂತರ ಈ ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಗಬಹುದು. ಮೇಲಾಗಿ ಮೀಸಲಾತಿ ಅಸ್ತ್ರ ಬಳಸಿಕೊಂಡು ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ತಾವು ಅಧಿಕಾರಕ್ಕೆ ಬರುವುದನ್ನು ತಡೆಯಲು ಪ್ರಯತ್ನಿಸಬಹುದು ಎಂಬ ಅನುಮಾನವೂ ಬಿಜೆಪಿ ನಾಯಕರಲ್ಲಿದೆ.

ಶಿವಮೊಗ್ಗ, ಧಾರವಾಡ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಬೆಂಗಳೂರು ನಗರ, ಮೈಸೂರು, ತುಮಕೂರು, ರಾಯಚೂರು ಜಿಲ್ಲಾ ಪಂಚಾಯ್ತಿಗಳಲ್ಲಿ ಜೆಡಿಎಸ್‌ ಅಥವಾ ಪಕ್ಷೇತರರೊಂದಿಗೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ಬಿಜೆಪಿಗಿದೆ. ಹಾಗಂತ ಎಲ್ಲದರಲ್ಲೂ ತಾವೇ ಅಧ್ಯಕ್ಷ ಹುದ್ದೆಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಕೆಲವೆಡೆ ಕೊಡು-ಕೊಳ್ಳುವ ನೀತಿ ಅನುಸರಿಸಬೇಕಾಗುತ್ತದೆ. ಎಲ್ಲೆಲ್ಲಿ ಈ ನೀತಿ ಅನುಸರಿಸಬಹುದು? ಹಾಗೆ ಮಾಡಿದರೆ ಯಾರಿಗೆ ಲಾಭವಾಗಬಹುದು? ಮುಂದಿನ ವಿಧಾನಸಭಾ ಚುನಾವಣೆ ಗುರಿಯಾಗಿಸಿಕೊಂಡು ಯಾವ ತಂತ್ರ ಅನುಸರಿಸಬಹುದು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿ ನಡೆಯುತ್ತಿದೆ.

ಜೆಡಿಎಸ್‌ ಜತೆ ಮೈತ್ರಿ ಸಮಸ್ಯೆ:
ಜೆಡಿಎಸ್‌ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಸಿದ್ದರೂ ಆ ಪಕ್ಷದ ನಡೆ ಏನಿರಬಹುದು ಎಂಬುದನ್ನು ಕಾದು ನೋಡಬೇಕಿದೆ. ಜೆಡಿಎಸ್‌ನಲ್ಲಿ ಪಕ್ಷಗ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ನಡುವಿನ ಸಮನ್ವಯದ ಕೊರತೆ ಇರುವುದರಿಂದ ತರಾತುರಿಯಲ್ಲಿ ಮೈತ್ರಿಗೆ ಮುಂದಾದರೆ ಮುಂದೆ ಮುಜುಗರ ಅನುಭವಿಸುವ ಪ್ರಸಂಗ ಎದುರಾಗಬಹುದು ಎಂಬ ಆತಂಕದ ಮಾತೂ ಬಿಜೆಪಿ ಪಾಳೆಯದಲ್ಲಿದೆ.

ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಲ್ಲಿ ಸಾಧ್ಯವಾದಷ್ಟು ಆಡಳಿತಾರೂಢ ಕಾಂಗ್ರೆಸ್‌ ಪಕ್ಷವನ್ನು ದೂರವಿಡಲು ಬೇಕಾದ ಎಲ್ಲ ಪ್ರಯತ್ನ ಮಾಡಬೇಕು ಎಂಬ ಬಗ್ಗೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದರೂ ಅದನ್ನು ಸಾಕಾರಗೊಳಿಸುವುದರಲ್ಲಿ ಜೆಡಿಎಸ್‌ ಪಕ್ಷಕ್ಕೆ ಶರಣಾಗಬೇಕೆ ಎಂಬ ಅಭಿಪ್ರಾಯವೂ ಪಕ್ಷದಲ್ಲಿದೆ. ಈಗ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಲ್ಲಿನ ಅಧಿಕಾರಕ್ಕಾಗಿ ಜೆಡಿಎಸ್‌ ಜತೆ ಸಾರಾಸಗಟಾಗಿ ಮೈತ್ರಿ ಮಾಡಿಕೊಂಡರೆ ಮುಂದೆ ರಾಜ್ಯ ಮಟ್ಟದಲ್ಲಿ ಆ ಪಕ್ಷದೊಂದಿಗೆ ತಿಕ್ಕಾಟ ಆರಂಭವಾಗಬಹುದು. ಇದೊಂದು ಸೂಕ್ಷ್ಮ ವಿಷಯವಾಗಿದ್ದರಿಂದ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂಬ ಸಲಹೆಯನ್ನು ಕೆಲವು ನಾಯಕರು ಸಲಹೆ ನೀಡಿದ್ದಾರೆ.

ಹಿತಕ್ಕೆ ಧಕ್ಕೆ ಆಗದಂತೆ ಕ್ರಮ- ಶಾ ಸೂಚನೆ:
ಮಂಗಳವಾರ ಫ‌ಲಿತಾಂಶದ ಹೊರಬಿದ್ದ ದಿನವೇ ರಾತ್ರಿ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನಿವಾಸದಲ್ಲಿ ನಡೆದ ರಾಜ್ಯ ನಾಯಕರ ಕೋರ್‌ ಕಮಿಟಿ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆದಿಲ್ಲ. ಆದರೆ, ಈ ಬಗ್ಗೆ ರಾಜ್ಯ ನಾಯಕರು ಸಮಾಲೋಚನೆ ನಡೆಸಿ ಭವಿಷ್ಯದಲ್ಲಿ ಪಕ್ಷದ ಹಿತಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಿ ಎಂಬ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.

ಮೀಸಲು ನಿಗದಿವರೆಗೆ ಹೊಂದಾಣಿಕೆ ಪ್ರಯತ್ನ ನಿಧಾನ
ಬೆಂಗಳೂರು: ಅತಂತ್ರಗೊಂಡಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ನಡುವಿನ ಹೊಂದಾಣಿಕೆ ಬಗ್ಗೆ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ನಿಗದಿಯಾಗುವವರೆಗೂ ಗಂಭೀರ ಪ್ರಯತ್ನ ನಡೆಯುವುದು ಅನುಮಾನೇ ಸರಿ.

ಇನ್ನೆರಡು ದಿನಗಳಲ್ಲಿ ಚುನಾವಣಾ ಫ‌ಲಿತಾಂಶದ ಬಗ್ಗೆ ಅಧಿಸೂಚನೆ ಹೊರಬೀಳಲಿದ್ದು, ನಂತರ ಮೀಸಲಾತಿ ನಿಗದಿ ಮಾಡಲಾಗುತ್ತದೆ. ಈಗ ಯಾರು ಏನೇ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾದರೂ ಮೀಸಲಾತಿ ಅಸ್ತ್ರ ಹೇಗೆ ಪ್ರಯೋಗವಾಗುತ್ತದೋ ಎಂಬ ಆತಂಕವಂತೂ ಇದ್ದೇ ಇರುತ್ತದೆ. ಹೀಗಾಗಿ ಈಗ ತೆರೆಮರೆಯಲ್ಲಿ ಹೊಂದಾಣಿಕೆ ಪ್ರಕ್ರಿಯೆಗಳೂ ನಡೆದರೂ ಅದಕ್ಕೆ ಸ್ಪಷ್ಟ ಸ್ವರೂಪ ಸಿಗುವುದು ಮೀಸಲಾತಿ ನಿಗದಿಯಾದ ನಂತರ ಎನ್ನಲಾಗಿದೆ.

ಅತಂತ್ರಗೊಂಡಿರುವ ಜಿಲ್ಲಾ ಪಂಚಾಯ್ತಿಗಳ ಪೈಕಿ ಏಳರಲ್ಲಿ ಬಿಜೆಪಿಗೆ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಜೆಡಿಎಸ್‌ ಮತ್ತು ಇತರ ಪಕ್ಷೇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಉದ್ದೇಶವಿದೆ. ಇದು ಸ್ಥಳೀಯ ಮಟ್ಟದಲ್ಲಿ ನಡೆಯಲಿದೆ. ಪಕ್ಷದ ರಾಜ್ಯ ಘಟಕದಿಂದ ಈ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. ರಾಜ್ಯ ಮಟ್ಟದಲ್ಲಿ ಜೆಡಿಎಸ್‌ ಜತೆಗೂ ಮಾತುಕತೆ ನಡೆಸಿಲ್ಲ
– ಜಗದೀಶ್‌ ಶೆಟ್ಟರ್‌, ಪ್ರತಿಪಕ್ಷದ ನಾಯಕ

ಕಿಂಗ್‌ಮೇಕರ್‌ ಜೆಡಿಎಸ್‌ನಿಂದಎಚ್ಚರಿಕೆ ಹೆಜ್ಜೆ
ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಲ್ಲಿ ಅತಂತ್ರ ಸ್ಥಿತಿ ಉಂಟಾಗಿರುವ ಕಡೆ ಯಾವ ಪಕ್ಷದೊಂದಿಗೆ ಕೈ ಜೋಡಿಸಬೇಕು ಎಂಬ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಜೆಡಿಎಸ್‌ ತೀರ್ಮಾನಿಸಿದೆ.

ಅತಂತ್ರ ಉಂಟಾಗಿರುವ ಕಡೆ ಜೆಡಿಎಸ್‌ ಜತೆ ಮೈತ್ರಿಗೆ ಸಿದ್ಧ ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ ಇಂಗಿತ ವ್ಯಕ್ತಪಡಿಸಿದೆಯಾದರೂ ಆ ಬಗ್ಗೆ ಅವಸರ ಮಾಡದೆ ತಕ್ಷಣದ ಅಧಿಕಾರ ಲಾಭಕ್ಕಿಂತ ಭವಿಷ್ಯದಲ್ಲಿ ರಾಜಕೀಯ ಲಾಭ ಗಮನದಲ್ಲಿಟ್ಟುಕೊಂಡು ನಿರ್ಣಯ ಕೈಗೊಳ್ಳಲು ನಿರ್ಧರಿಸಿದೆ.

ಜಿಲ್ಲಾ  ಮಟ್ಟದಲ್ಲಿ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನ ಕೈಗೊಳ್ಳುವ ಅಧಿಕಾರ ಜಿಲ್ಲಾ ನಾಯಕರಿಗೆ ಕೊಡುವುದು ಸೂಕ್ತ ಎಂಬ ಅಭಿಪ್ರಾಯ ಇದೆಯಾದರೂ ಒಂದೊಂದು ಕಡೆ ಒಂದೊಂದು ರೀತಿಯಾದರೆ ಪಕ್ಷದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವೂ ಇದೆ.

ಜತೆಗೆ ಸ್ಥಳೀಯ ಮುಖಂಡರನ್ನು ಕಡೆಗಣಿಸಿ ನಿರ್ಧಾರ ಕೈಗೊಳ್ಳುವುದೂ ಕಷ್ಟದ ಮಾತೇ ಸರಿ. ರಾಜ್ಯ ಮಟ್ಟದಲ್ಲಿ ದಿಢೀರನೆ ನಿರ್ಧಾರ ಕೈಗೊಂಡರೂ ಸ್ಥಳೀಯ ಮುಖಂಡರು ಅದನ್ನು ಲೆಕ್ಕಿಸದೆ ತಮಗೆ ಅನುಕೂಲವಾಗುವ ತೀರ್ಮಾನ ಕೈಗೊಂಡಲ್ಲಿ ಅದರಿಂದ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೆ ಬಲವಾದ ಹೊಡೆದ ಬೀಳುವ ಅಪಾಯವೂ ಜೆಡಿಎಸ್‌ಗಿದೆ.

ಇದೆಲ್ಲದರ ನಡುವೆ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲು ಆಡಳಿತಾರೂಢ ಕಾಂಗ್ರೆಸ್‌ ಮೀಸಲಾತಿ ಅಸ್ತ್ರ ಉಪಯೋಗಿಸುವ ಸಾಧ್ಯತೆ ಇರುವುದರಿಂದ ಕಾದು ನೋಡಿ ನಿರ್ಧಾರ ಕೈಗೊಳ್ಳಬೇಕು. ಹೀಗಾಗಿ, ಶಾಸಕಾಂಗ ಪಕ್ಷದ ಸಭೆ ಕರೆದು ಸಮಗ್ರವಾಗಿ ಚರ್ಚಿಸಿ ಅತಂತ್ರ ಇರುವ ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರ ಜತೆಯೂ ಮಾತನಾಡಿ ಅಂತಿಮ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

ಜಿಲ್ಲಾ ಪಂಚಾಯಿತಿಯಷ್ಟೇ ಅಲ್ಲದೆ ತಾಲೂಕು ಪಂಚಾಯಿತಿಗಳನ್ನೂ ಗಮನದಲ್ಲಿಟ್ಟುಕೊಂಡು ಕೊಟ್ಟು- ಪಡೆಯುವ ಮಾತುಕತೆ ನಡೆಯಬೇಕು. ಹೀಗಾಗಿ, ಚರ್ಚಿಸಿ ನಿರ್ಧರಿಸುವುದೇ ಒಳ್ಳೆಯದು ಎಂದು ಶಾಸಕರು, ಮುಖಂಡರು ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇಂದು ಗೌಡರು ಬೆಂಗಳೂರಿಗೆ:
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ದೆಹಲಿಯಿಂದ ಗುರುವಾರ ಆಗಮಿಸಲಿದ್ದು, ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆ ಪಂಚಾಯತ್‌ ಫ‌ಲಿತಾಂಶ ಕುರಿತು ಚರ್ಚಿಸಲಿದ್ದಾರೆ. ಆ ನಂತರ ಮುಂದಿನದು ತೀರ್ಮಾನವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದೇ ಸಂದರ್ಭದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಚುನಾವಣೆಯಲ್ಲಿ ಹಿನ್ನೆಡೆ ಅನುಭವಿಸಿರುವ ಬಗ್ಗೆ ಆತ್ಮಾವಲೋಕನಕ್ಕೂ ಜೆಡಿಎಸ್‌ ಮುಂದಾಗಿದ್ದು, ಪಕ್ಷದ ಶಾಸಕರು, ವಿಧಾನಪರಿಷತ್‌ ಸದಸ್ಯರು, ಸಂಸದರು, ಜಿಲ್ಲಾ ಘಟಕಗಳ ಅಧ್ಯಕ್ಷರ ಸಭೆ ಕರೆಯಲು ನಿರ್ಧರಿಸಲಾಗಿದೆ.

ಪಕ್ಷದ ಸೋಲಿನ ಬಗ್ಗೆ ಪರಾಮರ್ಶೆ ನಡೆಸಿ ಮಾರ್ಚ್‌ ಮೊದಲ ವಾರ ಅಥವಾ ಬಜೆಟ್‌ ಅಧಿವೇಶನ ಮುಗಿದ ನಂತರ ರಾಜ್ಯ ಪ್ರವಾಸ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಎಚ್‌ಡಿಕೆಗೆ ಕಾಂಗ್ರೆಸ್‌ ಜತೆ ಮೈತ್ರಿ ಇಷ್ಟವಿಲ್ಲ
ಬೆಂಗಳೂರು ನಗರ, ಮೈಸೂರು, ತುಮಕೂರಿನಲ್ಲಿ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ಸಂಬಂಧ ಬಿಜೆಪಿಯ ಎರಡನೇ ಹಂತದ ನಾಯಕರು ಜಿಲ್ಲಾ ಜೆಡಿಎಸ್‌ ಮುಖಂಡರನ್ನು ಸಂಪರ್ಕಿಸಿದ್ದಾರೆ. ಆದರೆ, ಈ ಬಗ್ಗೆ ಕುಮಾರಸ್ವಾಮಿ ಮತ್ತು ದೇವೇಗೌಡರ ಜತೆಯೇ ನೇರವಾಗಿ ಮಾತನಾಡಿ ಎಂದು ಜಿಲ್ಲಾ ನಾಯಕರು ತಿಳಿಸಿದ್ದಾರೆ.

ಕುಮಾರಸ್ವಾಮಿಯವರಿಗೆ ಕಾಂಗ್ರೆಸ್‌ ಜತೆ ಮೈತ್ರಿ ಇಷ್ಟವಿಲ್ಲ. ಜತೆಗೆ ಮುಂದೆ ರಾಜ್ಯದಲ್ಲಿ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂಬುದು ಅವರ ನಿಲುವು. ದೇವೇಗೌಡರ ಮನಸ್ಸಿನಲ್ಲಿ ಏನಿದೆ ಎಂಬುದು ತಿಳಿದುಕೊಂಡು ನಂತರ ಮೈತ್ರಿ ಕಾರ್ಯಾಚರಣೆಗಿಳಿಯುವ ಸಾಧ್ಯತೆಯಿದೆ. ಮೈಸೂರು ಮತ್ತು ತುಮಕೂರು ಜಿಲ್ಲಾ ಪಂಚಾಯತ್‌ನಲ್ಲಿ ಅಧಿಕಾರ ಹಿಡಿಯುವ ಬಗ್ಗೆ ಕುಮಾರಸ್ವಾಮಿ ಆಸಕ್ತರಾಗಿದ್ದಾರೆ ಎಂದು ಹೇಳಲಾಗಿದೆ.

ಯಾವ ಪಕ್ಷಕ್ಕೂ ಬಹುಮತ ಇಲ್ಲದೆ ಅತಂತ್ರ ಸ್ಥಿತಿ ಇರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಲ್ಲಿ ಕಡೆ ಏನು ಮಾಡಬೇಕು, ಯಾವ ನಿರ್ಧಾರ ತೆಗೆದುಕೊಳ್ಳಬೇಕು? ಎಂಬ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು. ಶಾಸಕರು ಹಾಗೂ ಸ್ಥಳೀಯ ಮುಖಂಡರ ಜತೆ ಮಾತನಾಡಿಯೇ ತೀರ್ಮಾನಿಸಲಾಗುವುದು.
– ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

-ಉದಯವಾಣಿ

Write A Comment