ರಾಷ್ಟ್ರೀಯ

ಜಾಟ್ ಸಮುದಾಯದ ಪ್ರತಿಭಟನೆ ವೇಳೆ ಅತ್ಯಾಚಾರ ವರದಿ: ಕೇಸು ಹಾಕಿದ ಪಂಜಾಬ್-ಹರ್ಯಾಣ ಹೈಕೋರ್ಟ್

Pinterest LinkedIn Tumblr

jat-protest-sonepat2ಚಂಡೀಗಢ: ಹರ್ಯಾಣದ ಸೋನೆಪತ್ ನಲ್ಲಿ ಮೊನ್ನೆ ಸೋಮವಾರ ಜಾಟ್ ಸಮುದಾಯದವರು ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ 10 ಮಹಿಳೆಯರ ಮೇಲೆ ಅತ್ಯಾಚಾರವೆಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ ದೇಶದ ಪ್ರಮುಖ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವ ಅಗತ್ಯವಿದೆ ಎಂದು ಹರ್ಯಾಣ ಮತ್ತು ಪಂಜಾಬ್ ಹೈಕೋರ್ಟ್ ಹೇಳಿದೆ.

ಮಹಿಳೆಯರ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಟ್ರಿಬ್ಯೂನ್ ಎಂಬ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು. ಆದರೆ ಕಟ್ಟರ್ ಸರ್ಕಾರ ಇಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಆರೋಪವನ್ನು ನಿರಾಕರಿಸಿತ್ತು. ಆದರೆ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಗಳು ಸ್ವ ಇಚ್ಛೆಯಿಂದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.

ಪತ್ರಿಕೆಯಲ್ಲಿ ಬಂದ ವರದಿಯನ್ನು ಉಲ್ಲೇಖಿಸಿದ ನ್ಯಾಯಾಧೀಶ ನ್ಯಾಯಮೂರ್ತಿ ಎನ್.ಕೆ.ಸಂಘಿ, ಸೋನೆಪತ್ ಜಿಲ್ಲೆಯ ಮುರ್ತಾಲ್ ಎಂಬ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊನ್ನೆ ಸೋಮವಾರ ಮುಂಜಾನೆ ಪ್ರತಿಭಟನಾಕಾರರು ಮಹಿಳಾ ಪ್ರಯಾಣಿಕರನ್ನು ತಡೆದು ಅವರನ್ನು ಹತ್ತಿರದ ಮೈದಾನವೊಂದಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದರು ಎಂದು ವರದಿಯಾಗಿದೆ. ಸುದ್ದಿ ಓದಿ ನಿಜಕ್ಕೂ ಆಘಾತವಾಗುತ್ತದೆ. ತಮ್ಮ ಪ್ರತಿಷ್ಠೆಗೋಸ್ಕರ ಈ ವಿಷಯವನ್ನು ಯಾರಿಗೂ ತಿಳಿಸಬಾರದು ಎಂದು ಜಿಲ್ಲಾಡಳಿತ ಅತ್ಯಾಚಾರಕ್ಕೊಳಗಾದ ಮಹಿಳೆಯರ ಕುಟುಂಬದವರಿಗೆ ಸಲಹೆ ನೀಡಿದ್ದರು ಎಂದು ಕೂಡ ವರದಿಯಾಗಿದೆ. ಇಂತವುಗಳನ್ನು ಮೂಕಪ್ರೇಕ್ಷಕನಂತೆ ನೋಡಿಕೊಂಡು ರಾಜ್ಯಸರ್ಕಾರ ಸುಮ್ಮನೆ ಕೂರಬಾರದು ಎಂದು ಹೇಳಿದರು.

ಹೈಕೋರ್ಟ್ ನಲ್ಲಿ ಹೂಡಲಾದ ಕೇಸನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೆಂದು ಪರಿಗಣಿಸಿ ಸರಿಯಾದ ಆದೇಶ ಹೊರಡಿಸಬೇಕೆಂದು ನ್ಯಾಯಾಧೀಶರು ಕೇಸನ್ನು ಹೈಕೋರ್ಟ್ ನ ತಾತ್ಕಾಲಿಕ ಮುಖ್ಯ ಕಾರ್ಯದರ್ಶಿ ಎಸ್.ಜೆ.ವಾಝಿಫ್ದಾರ್ ಅವರಿಗೆ ಉಲ್ಲೇಖಿಸಿದ್ದಾರೆ.

ಆದರೆ ಹಿಂಸಾಚಾರ ತಾರಕಕ್ಕೇರಿದ್ದ ಸಂದರ್ಭದಲ್ಲಿ ಸೋನೆಪತ್ ನಿಯಂತ್ರಣ ಪಡೆದಿದ್ದ ಹಿರಿಯ ಸೇನಾಧಿಕಾರಿಗಳು, ಯಾವುದೇ ಅತ್ಯಾಚಾರ ಪ್ರಕರಣಗಳು ನಡೆದಿಲ್ಲ. ಒಂದೇ ಒಂದು ಚೈನು ಕಳ್ಳತನ ಪ್ರಕರಣ ನಡೆದಿದೆಯಷ್ಟೆ ಎಂದು ಹೇಳಿದ್ದಾರೆ.

ಫೆಬ್ರವರಿ 21ರಂದು ಮಹಿಳೆಯರು ಮತ್ತು ಮಕ್ಕಳು ಇದ್ದ ಗುಂಪನ್ನು ಸೋನೆಪತ್ ಜಿಲ್ಲೆಯ ಹತ್ತಿರ ಹಲ್ದಿರಾಮ್ ಮಳಿಗೆ ಪಕ್ಕ ರೌಡಿಗಳ ಗುಂಪೊಂದು ತಡೆಹಿಡಿದು ತೊಂದರೆ ನೀಡಲು ಮುಂದಾಗಿತ್ತು. ಆಗ ಸೇನಾಪಡೆ ಅವರನ್ನು ರಕ್ಷಿಸಿತ್ತು. ಹರ್ಯಾಣ ಸರ್ಕಾರ ಕೂಡ ಯಾವುದೇ ಅತ್ಯಾಚಾರ ಪ್ರಕರಣಗಳು ವರದಿಯಾಗಿಲ್ಲ ಎಂದು ಹೇಳಿದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ ದೇವೆಂದರ್ ಸಿಂಗ್ ಮತ್ತು ಪೊಲೀಸ್ ಮಹಾ ನಿರ್ದೇಶಕ ಪರಂಜಿತ್ ಅಹ್ಲಾವತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪತ್ರಿಕೆಯಲ್ಲಿ ಪ್ರಕಟಗೊಂಡ ಹೆಸರಿನ ಮಹಿಳೆಯರ ಜೊತೆ ಮಾತುಕತೆ ನಡೆಸಿದ್ದಾರೆ. ಆಗ ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ಕುರಾದ್ ಜಿಲ್ಲೆಯ ಸರ್ಪಂಚ್ ಬಿಜೇಂದರ್ ಸಿಂಗ್ ಕೂಡ ಹೇಳುವ ಪ್ರಕಾರ ಮಹಿಳೆಯರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಹಲ್ಲೆ ನಡೆಸಿದ್ದರಿಂದ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವೇ ಹೊರತು ಲೈಂಗಿಕ ದೌರ್ಜನ್ಯ ನಡೆದಿಲ್ಲ ಎನ್ನುತ್ತಾರೆ.

Write A Comment