ಅಂತರಾಷ್ಟ್ರೀಯ

ಭಾರತದ 7 ಕೆಟ್ಟ ವಿಮಾನ ನಿಲ್ದಾಣಗಳಿವು..!

Pinterest LinkedIn Tumblr

Worst-Airportsವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು. ಭಾರತದೊಂದಿಗೆ ವಿಶ್ವದ ಬಹುತೇಕ ರಾಷ್ಟ್ರಗಳು ವಾಣಿಜ್ಯ ಸಂಬಂಧ ಹೊಂದಿವೆ.  ಹೀಗಾಗಿ ಪ್ರತಿನಿತ್ಯ ಭಾರತದ ವಿವಿಧ ಮೂಲಗಳಿಗೆ  ವಿಶ್ವದ ನಾನಾ ಮೂಲೆಗಳಿಂದ ವಿದೇಶಿಗರು ಬಂದು ಹೋಗುವುದು ಸಾಮಾನ್ಯ. ಅಂತೆಯೇ ನಮ್ಮವರು ಕೂಡ ವಿದೇಶಗಳಿಗೆ ಪ್ರವಾಸ ಮಾಡುವುದು ಸಾಮಾನ್ಯ. ಯಾವುದೇ ದೇಶವಾಗಲಿ ಆ  ದೇಶದ ಪ್ರವಾಸೋಧ್ಯಮ ಉತ್ತಮವಾಗಿದ್ದರೆ ಅದರ ಆರ್ಥಿಕ ಹಿನ್ನಲೆ ಕೂಡ ಉತ್ತಮವಾಗಿರುತ್ತದೆ.

ಪ್ರವಾಸೋಧ್ಯಮ ದೇಶಕ್ಕೆ ನಾನಾ ನಮೂನೆಗಳಿಂದ ಬಂಡವಾಳವನ್ನು ತರುವ ಏಕೈಕ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಭಾರತ ಎಷ್ಟರ ಮಟ್ಟಿಗೆ ಸಜ್ಜಾಗಿದೆ. ಪ್ರಮುಖವಾಗಿ ಪ್ರವಾಸಿಗರು  ಭಾರತಕ್ಕೆ ವಿಮಾನಗಳಲ್ಲಿ ಆಗಮಿಸುತ್ತಾರೆ. ಇಂತಹ ಪ್ರವಾಸಿಗರನ್ನು ಬರ ಮಾಡಿಕೊಳ್ಳುವ ನಮ್ಮ ವಿಮಾನ ನಿಲ್ದಾಣಗಳು ಉತ್ಕೃಷ್ಟ ಮತ್ತು ಆತ್ಯಾಧುನಿಕವಾಗಿರಬೇಕು. ಆದರೆ ಭಾರತದಲ್ಲಿರುವ  ಕೆಲ ವಿಮಾನ ನಿಲ್ದಾಣಗಳು ಇನ್ನೂ ಹಳೆಯ ಪರಿಸ್ಥಿತಿಯಲ್ಲಿಯೇ ಇವೆ. ಇಂತಹ 7 ಕೆಟ್ಟ ವಿಮಾನ ನಿಲ್ದಾಣಗಳ ಪರಿಚಯ ಇಲ್ಲಿದೆ.

1.ಚೆನ್ನೈ ವಿಮಾನ ನಿಲ್ದಾಣ
ದೇಶದ ಅತ್ಯಂತ ಜನನಿಭಿಡ ವಿಮಾನ ನಿಲ್ದಾಣದಲ್ಲಿ ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣ ಕೂಡ ಒಂದು. ಅಂತೆಯೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ  ಅನುವು ಮಾಡಿಕೊಟ್ಟ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಖ್ಯಾತಿ ಕೂಡ ಚೆನ್ನೈ ವಿಮಾನ ನಿಲ್ದಾಣಕ್ಕಿದೆ. ಆದರೆ ಇಂತಹ ಪ್ರಮುಖ ವಿಮಾನ ನಿಲ್ದಾಣದಲ್ಲಿ ಹಲವು ಸಮಸ್ಯೆಗಳಿದ್ದು, ಸ್ವಚ್ಛತೆ  ಪ್ರಮುಖ ಸಮಸ್ಯೆಯಾಗಿದೆ. ಇನ್ನು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಕ್ಯೂ ನಿಲ್ಲುವ ಪರಿಸ್ಥಿತಿ ಇನ್ನೂ ನಿಂತಿಲ್ಲ. ಅಲ್ಲದೆ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಕುರ್ಚಿಗಳ ಸಂಖ್ಯೆ ಕೂಡ ಕಡಿಮೆ  ಇದ್ದು, ಪ್ರಯಾಣಿಕರು ನಿಂತುಕೊಂಡೇ ತಮ್ಮ ಸರದಿಗೆ ಕಾಯುವ ಪರಿಸ್ಥಿತಿ ಇದೆ.

2.ಶ್ರೀನಗರ ವಿಮಾನ ನಿಲ್ದಾಣ
ಉಗ್ರ ದಾಳಿ ಭೀತಿಯಲ್ಲಿರುವ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸದಾಕಾಲ ನಮ್ಮ ಭಾರತೀಯ ಸೇನೆ ಯೋಧರು ಕಣ್ಗಾವಲು ಇಟ್ಟಿರುತ್ತಾರೆ. ಶ್ರೀನಗರ ಸಿಟಿಯಿಂದ ಸುಮಾರು 12 ಕಿ.ಮೀ  ದೂರದಲ್ಲಿರುವ ಈ ನಿಲ್ದಾಣವನ್ನು ಸುಮಾರು  67 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿಯೂ ಸಹ ಸಾಕಷ್ಟು ಜಾಗವಿದ್ದು, ನಿಲ್ದಾಣದ ಆಡಳಿತ ಮಂಡಳಿ ಇದನ್ನು ಸಮಪರ್ಕವಾಗಿ  ಬಳಸಿಕೊಂಡಿಲ್ಲ. ಹೀಗಾಗಿ ಪ್ರಯಾಣಿಕರು ಕ್ಯೂ ನಿಂತೇ ತಮ್ಮ ಕಾರ್ಯಗಳನ್ನು ಮಾಡಿಕೊಳ್ಳಬೇಕು. ಶ್ರೀನಗರದ ರಸ್ತೆ ಸಾರಿಗೆ ಅಷ್ಟು ಚೆನ್ನಾಗಿರದೇ ಇರುವುದರಿಂದ ಬಹುತೇಕ ಪ್ರಯಾಣಿಕರು  ವಿಮಾನಗಳಲ್ಲಿ ಪ್ರಯಾಣಿಸಲು ಇಚ್ಛಿಸುತ್ತಾರೆ. ಪ್ರಮುಖವಾಗಿ ಚಳಿಗಾಲದಲ್ಲಿ. ಇದಲ್ಲದೆ ರಸ್ತೆ ಮಾರ್ಗವಾಗಿ ಹೋದರೆ ಸಾಕಷ್ಚು ಭದ್ರತಾ ಪರಿಶೀಲನೆಗಳು ಇರುತ್ತವೆ. ಹೀಗಾಗಿ ಇಲ್ಲಿನ  ಪ್ರಯಾಣಿಕರು ಹೆಚ್ಚಾಗಿ ವಿಮಾನ ಪ್ರಯಾಣವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ.

3.ಬಗ್ಡೋಗ್ರಾ ವಿಮಾನ ನಿಲ್ದಾಣ
ಪಶ್ಚಿಮ ಬಂಗಾಳದ ಸಿಲ್ಗುರಿಯಿಂದ 16 ಕಿ.ಮೀ ದೂರದಲ್ಲಿರುವ ಈ ವಿಮಾನ ನಿಲ್ದಾಣ ನಿಜಕ್ಕೂ ಓಬಿರಾಯನ ಕಾಲದ್ದು ಎಂದು ಹೇಳಬಹುದು. ಏಕೆಂದರೆ ಈ ವಿಮಾನ ನಿಲ್ದಾಣದಲ್ಲಿರುವ ವ್ಯವಸ್ಥೆ  ಬಹುತೇಕ 90ರದಶಕದ್ದು. ನಿಲ್ದಾಣಕ್ಕೆ ಕಾಲಿಟ್ಟರೆ ನಿಮಗೆ ನಿಜಕ್ಕೂ 90 ದಶಕದ ಪ್ರಯಾಣದ ಅನುಭವವಾಗುತ್ತದೆ.

4.ಪಾಟ್ನಾದ ಜೈಪ್ರಕಾಶ್ ನಾರಾಯಣ ವಿಮಾನ ನಿಲ್ದಾಣ
ಪಾಟ್ನಾದಿಂದ 5 ಕಿ.ಮೀ ದೂರದಲ್ಲಿರುವ ಪಾಟ್ನಾ ವಿಮಾನ ನಿಲ್ದಾಣವನ್ನು ಸುಮಾರು 254 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಮುಂಬೈ, ಚೆನ್ನೈನಂತೆಯೇ ಪಾಟ್ನಾ ವಿಮಾನ ನಿಲ್ದಾಣ ಕೂಡ  ಅತ್ಯಂತ ಜನನಿಭಿಡ ನಿಲ್ದಾಣವಾಗಿದ್ದು, ಇಲ್ಲಿಯೂ ಸಾಕಷ್ಟು ಸಮಸ್ಯೆಗಳಿವೆ. ಪ್ರಮುಖವಾಗಿ ಇಲ್ಲಿ ಪ್ರಯಾಣಿಕರ ಟ್ಯಾಕ್ಸಿ ವ್ಯವಸ್ಥೆ ತೀರ ಕೆಟ್ಟದಾಗಿದ್ದು, ಅದೂ ಕೂಡ ನಿಲ್ದಾಣದ ಹೊರಗೆ ಹೋಗುವ  ಮಾರ್ಗದ ಅಂತ್ಯದಲ್ಲಿ. ಹೀಗಾಗಿ ಪ್ರಯಾಣಿಕರು ತಮ್ಮ ಲಗೇಜ್ ಅನ್ನು ಅಲ್ಲಿಯವರೆಗೂ ಹೊತ್ತುಕೊಂಡೇ ಸಾಗಬೇಕು. ಇನ್ನು ನಿಲ್ದಾಣದಲ್ಲಿ ಆಹಾರದ ವ್ಯವಸ್ಥೆ ಕೂಡ ಅಷ್ಟಕಷ್ಟೇ. ವಿಮಾನ  ನಿಲ್ದಾಣದಲ್ಲಿ ಉಂಟಾದ ವಿವಿಧ ಅಪಘಾತಗಳಲ್ಲಿ ಈ ವರೆಗೂ ಸುಮಾರು 60 ಮಂದಿ ಸಾವನ್ನಪ್ಪಿದ್ದಾರೆ.

5.ಗೋವಾ ವಿಮಾನ ನಿಲ್ದಾಣ
ಪ್ರವಾಸಿಗರ ಪ್ರಮುಖ ಆಕರ್ಷಣೀಯ ತಾಣ ಗೋವಾ. ಸುಮಾರು 688 ಹೆಕ್ಟೇರ್ ಪ್ರದೇಶದಲ್ಲಿ ಗೋವಾ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಗೋವಾದ ಏಕೈಕ ವಿಮಾನ ನಿಲ್ದಾಣವಿದು.  ಹೀಗಾಗಿ ಇಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚು. ಆದರೆ ಇಲ್ಲಿಯೂ ಪ್ರಯಾಣಿಕರಿಗೆ ಬೇಕಾದ ಸೂಕ್ತ ವ್ಯವಸ್ಥೆಗಳಿಲ್ಲ. ನಿಲ್ದಾಣದಲ್ಲಿರುವ ರೆಸ್ಚ್ ರೂಂ ಗಳ ಪರಿಸ್ಥಿತಿ ಕೆಟ್ಟದಾಗಿದ್ದು, ವಿದೇಶಿ ಪ್ರಯಾಣಿಕರು  ಅಲ್ಲಿ ತಂಗಲು ನಿರಾಕರಿಸುತ್ತಾರೆ. ಇನ್ನು ನಿಲ್ದಾಣದಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಕೊಠಡಿ ಇರದೇ ಇರುವುದು ನಿಲ್ದಾಣದ ಮತ್ತೊಂದು ನ್ಯೂನ್ಯತೆ. ಹೀಗಾಗಿ ಮಕ್ಕಳೊಂದಿಗೆ ಪ್ರಯಾಣ ಮಾಡುವಾಗ  ಇಲ್ಲಿ ಪೋಷಕರು ಹೆಚ್ಚು ಜಾಗರೂಕರಾಗಿರಬೇಕು. ನಿಲ್ದಾಣದ ಕೆಟ್ಟ ಕಾಮಗಾರಿ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ 2012 ಅಕ್ಟೋಬರ್ ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗುವ ವೇಳೆ  ದುರಂತಕ್ಕೀಡಾಗಿ ಇಬ್ಬರು ಪೈಲಟ್ ಗಳು ಮತ್ತು ಓರ್ವ ತಂತ್ರಜ್ಞ ಇಲ್ಲಿ ಸಾವನ್ನಪ್ಪಿದ್ದರು.

6.ಗುವಾಹತಿ ವಿಮಾನ ನಿಲ್ದಾಣ
ಗುವಾಹತಿ ವಿಮಾನ ನಿಲ್ದಾಣ ಕೂಡ ಅತ್ಯಂತ ಜನನಿಭಿಡ ನಿಲ್ದಾಣವಾಗಿದ್ದು, ಪ್ರಮುಖವಾಗಿ ಈ ನಿಲ್ದಾಣವನ್ನು ವಾಣಿಜ್ಯಾತ್ಮಕ ಉದ್ದೇಶಗಳಿಗಾಗಿ ಪ್ರಯಾಣಿಸುವ ಪ್ರಯಾಣಿಕರು ಇಲ್ಲಿ ಹೆಚ್ಚಾಗಿ  ಪ್ರಯಾಣಿಸುತ್ತಾರೆ. ಇಲ್ಲಿನ ಭದ್ರತಾ ಪರಿಶೀಲನೆ ತುಸು ಹೆಚ್ಚೇ ಎಂದು ಹೇಳಬಹುದು. ಸುಮಾರು ಕಡೆಗಳಲ್ಲಿ ಭದ್ರತಾ ಸಿಬ್ಬಂದಿಯಿಂದ ಪರಿಶೀಲನೆಗೊಳಪಡಬೇಕಾಗುತ್ತದೆ. ಇದು  ಪ್ರಯಾಣಿಕರಲ್ಲಿ ಮುಜುಗರವನ್ನುಂಟು ಮಾಡುತ್ತದೆ. ಗುವಾಹತಿಯಲ್ಲಿ ಹವಾಮಾನ ಆಗಾಗ ಕೈಕೊಡುವ ಸಾಧ್ಯತೆ ಇದೆ. ಹೀಗಾಗಿ ವಿಮಾನಗಳ ಪ್ರಯಾಣವನ್ನು ಮುಂದೂಡುವ ಪರಿಸ್ಥಿತಿ  ಹೆಚ್ಚಾಗಿರುತ್ತದೆ.

7.ಶಿಮ್ಲಾ ವಿಮಾನ ನಿಲ್ದಾಣ
ಪ್ರವಾಸೋಧ್ಯಮ ದೃಷ್ಟಿಯಿಂದ ಶಿಮ್ಲಾ ವಿಮಾನ ನಿಲ್ದಾಣ ಭಾರತಕ್ಕೆ ಪ್ರಮುಖವಾಗಿದ್ದು, ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ ಇಲ್ಲಿ ವಿದೇಶಿ ಪ್ರಯಾಣಿಕರ ಸಂಖ್ಯೆ  ಹೆಚ್ಚು. ಹಿಮಾಚಲ ಪ್ರದೇಶದ ಶಿಮ್ಲಾದಿಂದ 22 ಕಿ.ಮೀ ದೂರದಲ್ಲಿರುವ ಈ ನಿಲ್ದಾಣದಲ್ಲಿ ರನ್ ವೇಗಳದ್ದೇ ಸಮಸ್ಯೆ. ಏಕೆಂದರೆ ಇಲ್ಲಿನ ಟರ್ಮಿನಲ್ ಗಳು ತೀರಾ ಚಿಕ್ಕದಾಗಿದ್ದು, ಲ್ಯಾಂಡಿಂಗ್  ಆಗುವ ವಿಮಾನಗಳನ್ನು 50 ಮಂದಿ ಮತ್ತು ಟೇಕ್ ಆಫ್ ಆಗುವ ವಿಮಾನಗಳನ್ನು 40 ಮಂದಿ ನಿಯಂತ್ರಿಸಬಹುದು. ದೆಹಲಿಯಿಂದ ಇಲ್ಲಿಗೆ ಪ್ರತಿನಿತ್ಯ ಕಿಂಗ್ ಫಿಶರ್ ಏರ್ ಲೈನ್ ವಿಮಾನಗಳು  ಹಾರಾಡುತ್ತಿವೆ. ಇಲ್ಲಿಯೂ ಹವಾಮಾನದ್ದೇ ಪ್ರಮುಖ ಸಮಸ್ಯೆಯಾಗಿದ್ದು, ಚಳಿಗಾಲದ ಸಮಯದಲ್ಲಿ ಮಂಜು ಬೀಳುವುದರಿಂದ ಸಾಕಷ್ಟು ವಿಮಾನಗಳ ಹಾರಾಟದಲ್ಲಿ ವ್ಯತ್ಯಯಗಳಾಗುತ್ತವೆ.

ಮಾಹಿತಿ: ಹಲೋ ಟ್ರಾವೆಲ್

Write A Comment