ಒಂಬತ್ತು ಬಜೆಟ್ಗಳನ್ನು ಮಂಡಿಸಿ, 10ನೇ ಬಜೆಟ್ ಮಂಡಿಸುವ ದಾಖಲೆಯತ್ತ ಹೆಜ್ಜೆ ಇಟ್ಟಿರುವ ಆರ್ಥಿಕ ಸಚಿವರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿನಿಂದ ಆಯವ್ಯಯ ಪೂರ್ವಭಾವಿ ಪ್ರಕ್ರಿಯೆ ಆರಂಭಿಸಿದರು. 2016-17ನೇ ಸಾಲಿನ ಬಜೆಟ್ ಮಾ.18ರಂದು ಮಂಡಿಸುವ ನಿರೀಕ್ಷೆ ಇದ್ದು, ತಮ್ಮ 10ನೇ ಬಜೆಟ್ನಲ್ಲಿ ಜನಪ್ರಿಯ ಯೋಜನೆಗಳನ್ನು ಅಳವಡಿಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಹೀಗಾಗಿ ಸಮಾಜದ ಎಲ್ಲಾ ವರ್ಗಗಗಳ ಜತೆಯಲ್ಲೂ ಸಮಗ್ರ ಸಮಾಲೋಚನೆ ನಡೆಸಿ ಉತ್ತಮ ಬಜೆಟ್ ಮಂಡಿಸುವ ಮೂಲಕ ಕಳೆದ ಎರಡುಮುಕ್ಕಾಲು ವರ್ಷದಲ್ಲಿ ತಮ್ಮ ಸರ್ಕಾರದ ಮೇಲಿರುವ ಅಪವಾದಗಳಿಗೆ ಉತ್ತರ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ.
ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಉಪ ಚುನಾವಣೆಗಳು ಪೂರ್ಣಗೊಂಡಿವೆ. ಸದ್ಯಕ್ಕೆ 2018ರವರೆಗೂ ಮಹತ್ವದ ಯಾವ ಚುನಾವಣೆಗಳು ಎದುರಾಗದೇ ಇರುವುದರಿಂದ ಅಗ್ಗದ ಯೋಜನೆಗಳಿಗೆ ಜೋತು ಬೀಳದೆ ಸಮಗ್ರ ಕರ್ನಾಟಕದ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಘೋಷಿಸಲಾಗುತ್ತದೆ.
2018ರ ವೇಳೆಗೆ ಮತ್ತೊಂದು ಬಾರಿ ಬಜೆಟ್ ಮಂಡಿಸುವ ಅವಕಾಶ ಇದ್ದು, ಚುನಾವಣಾ ವರ್ಷವಾಗಿರುವುದರಿಂದ ಒತ್ತಡಕ್ಕೆ ಒಳಗಾಗಿ ಮತ್ತೊಮ್ಮೆ ಜನಪ್ರಿಯ ಯೋಜನೆಗಳ ಬೆನ್ನು ಹತ್ತಬೇಕಾಗುತ್ತದೆ. ಈ ವರ್ಷ 2016-2017ನೆ ಬಜೆಟ್ಗೆ ಯಾವುದೇ ಚುನಾವಣೆ ಕಾಟ ಇಲ್ಲದೇ ಇರುವುದರಿಂದ ಅಭಿವೃದ್ಧಿಯೇ ಮುಖ್ಯಮಂತ್ರಿ ಯವರ ಮೂಲಮಂತ್ರವಾಗಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ವಿವಿಧ ಕಾರಣಗಳಿಗಾಗಿ ನಾಯಕತ್ವ ಬದಲಾವಣೆಗೆ ಕಾಂಗ್ರೆಸ್ನ ಒಳಗೊಳಗೆ ಮಸಲತ್ತು ನಡೆಯುತ್ತಿದ್ದು, ತಮ್ಮ ಬಜೆಟ್ನ ಮೂಲಕ ವಿರೋಗಳಿಗೂ ತಕ್ಕ ಉತ್ತರ ನೀಡಲು ಮುಖ್ಯಮಂತ್ರಿ ತಯಾರಿ ನಡೆಸಿದ್ದಾರೆ.
ಈವರೆಗೂ ಚುನಾವಣೆ ಪ್ರಚಾರಗಳಿಂದ ಬಸವಳಿದಿದ್ದ ಸಿದ್ದರಾಮಯ್ಯ, ಅದರ ಬೆನ್ನ ಹಿಂದೆಯೇ ವಿಶ್ರಾಂತಿ ಪಡೆಯದೇ ಬಜೆಟ್ ತಯಾರಿಕೆಗೆ ಮುಂದಾಗಿದ್ದಾರೆ. ಇಪ್ಪತ್ತೆರೆಡು ದಿನಗಳಿಗೂ ಮೊದಲೇ ಬಜೆಟ್ ತಯಾರಿಯನ್ನು ಆರಂಭಿಸಿರುವ ಸಿದ್ದರಾಮಯ್ಯ, ಈ ಬಾರಿ ಹೆಚ್ಚು ಸಂಘ-ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಪರಿಣಿತರ ಜತೆ ಚರ್ಚಿಸಿ ಆಯವ್ಯಯ ಸಿದ್ಧಪಡಿಸುವ ಇಂಗಿತ ಹೊಂದಿದ್ದಾರೆ ಎನ್ನಲಾಗಿದೆ.