ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಮಿಂಟೋ ಕಣ್ಣಿನ ಆಸ್ಪತ್ರೆಗೆ ವಿದ್ಯುತ್ ಸಮಸ್ಯೆ ಉಂಟಾಗಿದ್ದು, ನೀರಿಗೂ ಪರದಾಡುವಂತಾಗಿದೆ.
ಟ್ರಾನ್ಸ್ಫಾರ್ಮರ್ಗೆ ಸಂಪರ್ಕ ಕಲ್ಪಿಸುವ ಪ್ರಮುಖ ವಿದ್ಯುತ್ ಲೈನ್ನಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದವರು ಪರದಾಡುವಂತಾಗಿದೆ.
ಟ್ರಾನ್ಸ್ಫಾರ್ಮರ್ ಸಮಸ್ಯೆ ಬಗ್ಗೆ ದೂರು ದಾಖಲಾಗಿದ್ದರೂ, ಅದನ್ನು ಬದಲಿಸಿ ಬೇರೊಂದು ಟ್ರಾನ್ಸ್ಫಾರ್ಮರ್ ಅಳವಡಿಕೆಗೆ ಕ್ರಮ ಕೈಗೊಂಡಿಲ್ಲ ಎಂದು ರೋಗಿಗಳ ಸಂಬಂಧಿಗಳು ದೂರಿದ್ದಾರೆ. ರಾತ್ರಿ ಹೊತ್ತು ಮೇಣದ ಬತ್ತಿ ಹಿಡಿದು ಆಸ್ಪತ್ರೆಯಲ್ಲಿ ಇರಬೇಕಾದ ಸ್ಥಿತಿ ಎದುರಾಗಿದೆ. ಭಾನುವಾರದಿಂದ ವಿದ್ಯುತ್ ಸಮಸ್ಯೆ ಉಂಟಾಗಿದ್ದು, ಶಸ್ತ್ರಚಿಕಿತ್ಸೆ ಕೂಡ ನಡೆದಿಲ್ಲ. ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆಯೂ ಇಲ್ಲದಿರುವ ಕಾರಣ ಕತ್ತಲೆಯಲ್ಲಿಯೇ 100ಕ್ಕೂ ಹೆಚ್ಚು ರೋಗಿಗಳು ಕಾಲ ದೂಡುವಂತಾಗಿದೆ. ಶೌಚಾಲಯಕ್ಕೆ ಹೋಗುವುದಕ್ಕೂ ಸಮಸ್ಯೆಯಾಗುತ್ತಿದೆ ಎಂದು ರೋಗಿಗಳು ದೂರಿದ್ದಾರೆ.
ಶನಿವಾರ ಈ ಬಗ್ಗೆ ಬೆಸ್ಕಾಂನಲ್ಲಿ ದೂರು ದಾಖಲಾಗಿದ್ದು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದರೂ, ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ಆಸ್ಪತ್ರೆಗೆ ಎಚ್ಟಿ ವಿದ್ಯುತ್ ಸಂಪರ್ಕವಿರುವ ಕಾರಣ ನಿರ್ವಹಣೆ ಕೂಡ ಅವರ ಜವಾಬ್ದಾರಿಯಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ವಿವರಣೆ ನೀಡಿದ್ದಾರೆ. ಆಸ್ಪತ್ರೆಯೊಳಗೆ ಇರುವ ಟ್ರಾನ್ಸ್ಫಾರ್ಮರ್ ಮತ್ತು ವಿದ್ಯುತ್ ಸಂಪರ್ಕದಲ್ಲಿ ಸಮಸ್ಯೆ ಇರಬಹುದು ಎನ್ನಲಾಗುತ್ತಿದೆ. ಮಂಗಳವಾರ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಮೇಶ್ ತಿಳಿಸಿದ್ದಾರೆ.