
ರಾಯಚೂರು: ಲೋಕೋಪಯೋಗಿ ಇಲಾಖೆಯ ದಿವ್ಯ ನಿರ್ಲಕ್ಷದಿಂದ ಹದಗೆಟ್ಟ ರಸ್ತೆಯಲ್ಲೇ ಗರ್ಭಿಣಿಯೊಬ್ಬರು ಹೆಣ್ಣುಮಗುವಿಗೆ ಜನ್ಮ ನೀಡಿರುವ ಘಟನೆ ಮಾನ್ವಿ ತಾಲೂಕಿನಲ್ಲಿ ನಡೆದಿದೆ. ಅದೃಷ್ಟವಶಾತ್ ಹೆರಿಗೆ ಸುಗಮವಾಗಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ.
ತಾಲೂಕಿನ ಕೆ.ಗುಡದಿನ್ನಿ ಬಳಿ ಹದಗೆಟ್ಟ ರಸ್ತೆಯಿಂದಾಗಿ ಆಸ್ಪತ್ರೆ ಮಾರ್ಗ ಮಧ್ಯೆಯೆ 7 ತಿಂಗಳ ಗರ್ಭಿಣಿಗೆ ಹೆರಿಗೆಯಾಗಿದೆ. ಮಾನ್ವಿಯ ಚಾಗಭಾವಿ ಗ್ರಾಮದ ಈರಮ್ಮ ತನ್ನ ಪತಿ ಹನುಮಂತ ನಾಯಕ್ ರೊಂದಿಗೆ ತಿಂಗಳ ಪರೀಕ್ಷೆಗೆಂದು ವೈದ್ಯರ ಬಳಿ ಬೈಕ್ನಲ್ಲಿ ಹೋಗುತ್ತಿದ್ದಾಗ ತೀವ್ರ ನೋವು ಕಾಣಿಸಿಕೊಂಡಿವೆ.
ರಸ್ತೆಯಲ್ಲಿ ಮುಂದೆ ಹೋಗಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ನೋವಿನಿಂದ ನರಳುತ್ತಿದ್ದ ಈರಮ್ಮಳನ್ನು ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಮರವೊಂದರ ಕೆಳಗಡೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸಿದ್ದಾರೆ. ರಸ್ತೆ ಕೆಟ್ಟು ಹೋಗಿರುವುದರಿಂದ ಅಂಬುಲೆನ್ಸ್ ಸಹ ಸರಿಯಾದ ಸಮಯಕ್ಕೆ ಬಾರದೇ ಚೊಚ್ಚಲ ಹೆರಿಗೆಯಾದ 32 ವರ್ಷದ ಈರಮ್ಮ ನರಕಯಾತನೆಯನ್ನ ಅನುಭವಿಸಿದ್ದಾರೆ. ಅವಧಿಗೆ ಮುನ್ನವೇ ಜನಿಸಿರುವುದರಿಂದ ಮಗುವನ್ನು ತಾಲೂಕು ಆಸ್ಪತ್ರೆಯ ನಿಗಾ ಘಟಕದಲ್ಲಿಡಲಾಗಿದೆ.
ರಸ್ತೆ ಪೂರ್ಣ ಯಾವಾಗ?: ಮಾನ್ವಿ ಪಟ್ಟಣದಿಂದ 18 ಕಿ.ಮೀ ದೂರವಿರುವ ಚಾಗಭಾವಿ ರಸ್ತೆ ಹದಗೆಟ್ಟು ತುಂಬಾ ವರ್ಷಗಳೇ ಕಳೆದಿವೆ. ಕಳೆದ ಒಂದು ತಿಂಗಳ ಹಿಂದೆ ಚುನಾವಣೆಗಳು ಹತ್ತಿರವಾಗುತ್ತಿದ್ದ ವೇಳೆ ಸ್ಥಳೀಯ ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡು ಅರ್ಧಕ್ಕೆ ನಿಲ್ಲಿಸಿದೆ. ಸುಮಾರು ಮೂರು ಕಿ.ಮೀವರೆಗೆ ಕೇವಲ ಜಲ್ಲಿ ಕಲ್ಲುಗಳನ್ನ ಹಾಕಿ ಇದ್ದ ರಸ್ತೆಯನ್ನು ಹಾಳು ಮಾಡಿ ಹಾಗೆಯೇ ಬಿಟ್ಟಿದ್ದಾರೆ. ಹೀಗಾಗಿ ಪ್ರಯಾಣಿಕರು ನಿತ್ಯ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.