ಸಾಗರ: ಜಗದ್ವಿಖ್ಯಾತ ಜೋಗ ಜಲಪಾತದಲ್ಲಿ ಫೆಬ್ರವರಿ ತಿಂಗಳಿನಲ್ಲಿಯೇ ನೀರಿನ ಕೊರತೆ ಕಾಡಿತ್ತು. ಕೆಲ ದಿನಗಳಿಂದ ರಾಜ ಹಾಗೂ ರೋರರ್ ಕವಲುಗಳು ಮಾಯವಾಗಿದ್ದವು. ಈಗಲೇ ಹೀಗಾದರೆ ಇನ್ನು ಬೇಸಿಗೆಯಲ್ಲಿ ಜಲಪಾತದ ಸೌಂದರ್ಯ ಏನಾಗಬಹುದು ಎಂಬ ಆತಂಕ ಮೂಡಿತ್ತು. ಆದರೆ, ಕಳೆದ ಗುರುವಾರ ಶರಾವತಿ ವಿದ್ಯುದಾಗಾರದಲ್ಲಿ ಸಂಭವಿಸಿದ ಬೆಂಕಿ ಅನಾಹುತ, ಜಲಪಾತದ ಮೂಲ ಸೌಂದರ್ಯವನ್ನು ಮರುಕಳಿಸಲು ಕಾರಣವಾಗಿದೆ.
ಹೌದು, ಈಗ ಎಬಿ ಸೈಟ್‌ನಲ್ಲಿ ಲಿಂಗನಮಕ್ಕಿ ಆಣೆಕಟ್ಟೆಯ ನೀರಿನಿಂದ ಒಂದು ಯೂನಿಟ್ ವಿದ್ಯುತ್‌ನೂ° ಉತ್ಪಾದನೆ ಮಾಡಲಾಗದ ಸ್ಥಿತಿ ಇರುವುದರಿಂದ ಪರ್ಯಾಯವಾಗಿ ಗೇರುಸೊಪ್ಪ ಟೆಲರೇಸ್ ವಿದ್ಯುತ್ ಕೇಂದ್ರಕ್ಕಾಗಿ ಕಾರ್ಗಲ್ ಅಣೆಕಟ್ಟಿಗೆ ಶನಿವಾರದಿಂದ ನೀರು ಹರಿಸಲಾಗುತ್ತಿದೆ. ಇದು ಜೋಗ ಫಾಲ್ಸ್ ಮಾರ್ಗವಾಗಿಯೇ ಗೇರುಸೊಪ್ಪೆಗೆ ಹರಿಯಬೇಕಾದುದರಿಂದ ಶನಿವಾರ ಸಂಜೆಯಿಂದ ಜಲಪಾತಕ್ಕೆ ತುಸು ಜೀವಂತಿಕೆ ಕಾಣಿಸಿತ್ತು. ಭಾನುವಾರದ ಬೆಳಗ್ಗೆಯಿಂದ ಜಲಪಾತ ತನ್ನ ವೈಭವವನ್ನು ಮರಳಿ ಪಡೆಯಿತು.
ಮಳೆಗಾಲದಲ್ಲಿ ಜೋಗದ ಧಾರೆಗಳು ಹೆಚ್ಚು ರೌದ್ರಾವತಾರ ತಾಳುತ್ತವಾದರೂ, ಜಲಪಾತವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಲು ಮಂಜು, ಮೋಡಗಳು ಅಡ್ಡಬರುತ್ತವೆ. ಆದರೆ, ಇದೀಗ ವಾತಾವರಣ ಶುಭ್ರವಾಗಿದ್ದು, ಅಣೆಕಟ್ಟಿನಿಂದ ನೀರು ಬಿಡುತ್ತಿರುವುದರಿಂದ ಇಂತಹ ಅಡಚಣೆ ಕಾಣದೆ ಜಲಪಾತವನ್ನು ಖುಷಿಯಿಂದ ಕಣ್ತುಂಬಿಕೊಳ್ಳಬಹುದಾಗಿದೆ.
ಪ್ರವಾಸಿಗರಿಗೆ ಮಾಹಿತಿ ನೀಡಿ:
ಈ ನಡುವೆ ಶರಾವತಿ ವಿದ್ಯುದಾಗಾರದ ದುರಸ್ತಿ ಕಾರ್ಯ ವಿಳಂಬವಾದಷ್ಟೂ ಕರ್ನಾಟಕ ವಿದ್ಯುತ್ ನಿಗಮ ಉಳಿದ ಜಲ ವಿದ್ಯುತ್ ಕೇಂದ್ರಗಳಾದ ಮಹಾತ್ಮಾಗಾಂಧಿಧಿ, ಗೇರುಸೊಪ್ಪ ವಿದ್ಯುದಾಗಾರವನ್ನೇ ಬಳಸಿಕೊಳ್ಳಬೇಕಾಗಿದೆ. ಹಾಗಾಗಿ ಲಿಂಗನಮಕ್ಕಿಯಿಂದ ನಿರಂತರವಾಗಿ ನೀರು ಹರಿಯಲಿದೆ. ಇದು ಜಲಪಾತದ ವೈಭವವನ್ನು ಕೂಡ ಉಳಿಸಿಕೊಡಲಿದೆ.
ಸದ್ಯ ಜಲಪಾತ ತನ್ನ ವೈಭವವನ್ನು ಮತ್ತೆ ಕಾಣುತ್ತಿರುವ ಮಾಹಿತಿ ಪ್ರವಾಸಿಗರಿಗಿಲ್ಲ. ಹಾಗಾಗಿ ರಜಾ ದಿನವಾದ ಶನಿವಾರ, ಭಾನುವಾರವೂ ಆ ಮಟ್ಟಿಗಿನ ಪ್ರವಾಸಿಗರು ಜೋಗದಲ್ಲಿ ಕಾಣಿಸಲಿಲ್ಲ. ಆದಕಾರಣ ಕರ್ನಾಟಕ ವಿದ್ಯುತ್ ನಿಗಮ ಈ ಕುರಿತು ಅಧಿಧಿಕೃತ ಹೇಳಿಕೆ ಕೊಡಬೇಕಾಗಿದೆ. ಈ ಮೂಲಕ ಪ್ರವಾಸಿಗರ ಗಮನ ಸೆಳೆಯಲು ಸಾಧ್ಯವಾಗಲಿದೆ.
ಹನಿ ನೀರಿಲ್ಲವಾದರೂ ಹಲ ಅವಕಾಶ
ಜೋಗ ಅಭಿವೃದ್ಧಿ ಪ್ರಾಧಿಧಿಕಾರ ಕೇವಲ ಒಂದು ನಿಟ್ಟಿನಲ್ಲಿ ಮಾತ್ರ ಚಿಂತನೆ ನಡೆಸಿದೆ. ಜಲಪಾತ ಮೇಲ್ಭಾಗದಲ್ಲಿ ಅಣೆಕಟ್ಟು ನಿರ್ಮಿಸಿ, ವರ್ಷಪೂರ್ತಿ ನೀರು ಹರಿಸುವ ಯೋಚಿಸುತ್ತಿದೆ. ಇದರ ಬದಲು ಇಲ್ಲಿ ರಾಕ್ ಕ್ಲೈಬಿಂಗ್ ತರಬೇತಿಯಂತ ಸಾಹಸ ಕ್ರೀಡೆಗಳಿಗೆ ಒತ್ತು ಕೊಡಬಹುದು. ಅತ್ಯಾಧುನಿಕವಾಗಿ ವ್ಯವಸ್ಥೆ ರೂಪಿಸಿದರೆ ಸಾಹಸಿಗರಿಗೆ ಆಕರ್ಷಣೀಯ ತಾಣವಾಗುತ್ತದೆ. ಇದರಿಂದ ಜಲಪಾತದ ಸುತ್ತ ಈಗ ಏರ್ಪಡಿಸಿರುವ ಕಾವಲು ವ್ಯವಸ್ಥೆಯ ಒತ್ತಡವೂ ರಕ್ಷಣಾ ಇಲಾಖೆಗೆ ಕಡಿಮೆಯಾಗುತ್ತದೆ. ಜಲಪಾತದ ಅಕ್ಕಪಕ್ಕದ ಹಲವು ಸ್ಥಳಗಳಲ್ಲಿ ವರ್ಷವಿಡೀ ಕಲ್ಲಿನ ಚಾರಣ ಮಾಡುವುದನ್ನು ಇನ್ನೊಂದು ಆಕರ್ಷಣೆಯಾಗಿ ರೂಪಿಸಲು ಸಾಧ್ಯವಿದೆ ಎಂದು ಅಧಿಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಇನ್ನೂ ಮೂರು ತಿಂಗಳು ಮಳೆಯಾಗುವುದು ಅನುಮಾನ. ಇದರಿಂದ ಜಲಪಾತದ ಇನ್ನುಳಿದ ಎರಡು ಧಾರೆಗಳೂ ಕಣ್ಮರೆಯಾಗುವುದು ಬಹುಪಾಲು ಖಚಿತ. ವಿದ್ಯುತ್‌ನ ಅಭಾವದ ಪರಿಸ್ಥಿತಿಯ ಕಾರಣ ಜಲಪಾತಕ್ಕೆ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಹರಿಸುವ ಸಂಭಾವ್ಯತೆಯೂ ಕ್ಷೀಣ. ಸದ್ಯ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದೆ. ಆದರೆ ಮಾರ್ಚ್ ದ್ವಿತೀಯಾರ್ಧದಿಂದ ಮತ್ತೂಮ್ಮೆ ಪ್ರವಾಸಿ ಋತು ಆರಂಭವಾಗಲಿದ್ದು, ಆ ವೇಳೆಗೆ ಶರಾವತಿ ವಿದ್ಯುದಾಗಾರ ಮತ್ತೆ ವಿದ್ಯುತ್ ಉತ್ಪಾದನೆ ಆರಂಭಿಸಿದರೆ ಜಲಪಾತ ತನ್ನ ಮೋಹಕತೆಯನ್ನು ಕಳೆದುಕೊಳ್ಳಲಿದೆ.
ನಿತೇಶ್ ಹಿಂದೆಯೇ ಹೋದ ಸರ್ವಋತು ಜಲಪಾತ!
ಜೋಗವನ್ನು ಸರ್ವಋತು ಪ್ರವಾಸಿ ತಾಣವನ್ನಾಗಿ ಮಾಡುವ ಯೋಜನೆಗೆ ಹಲವು ಬಾರಿ ಭರವಸೆಗಳನ್ನು ಕೊಡಲಾಗಿದೆ. ಸಾಗರಕ್ಕೆ ಸಹಾಯಕ ಆಯುಕ್ತರಾಗಿ ನಿತೇಶ್ ಪಾಟೀಲ್ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ಸಂಬಂಧ ಕೆಲ ಕೆಲಸಗಳಾಗಿತ್ತು. ಜಲಪಾತದ ಎದುರು ರೋಪ್ ವೇ ನಿರ್ಮಾಣ, ವಿಶೇಷ ಪಾರ್ಕ್ ಯೋಜನೆ, ಉನ್ನತ ಪ್ರವಾಸಿ ಸೌಲಭ್ಯಗಳು ಕುರಿತಾಗಿ ಡಿಪಿಆರ್ ತಯಾರಿಸಲು ಸರ್ಕಾರ ಒಪ್ಪಿತ್ತು ಎನ್ನಲಾಗಿತ್ತು. ಆದರೆ ನಿತೇಶ್ ಪಾಟೀಲ್‌ರ ವರ್ಗಾವಣೆಯ ಹಿಂದೆಯೇ ಆ ಯೋಜನೆಯೂ ಹಿಂದೆ ಸರಿದಿದೆ ಎನ್ನುವಂತಾಗಿದೆ.
-ಉದಯವಾಣಿ