
ಬೆಂಗಳೂರು: ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಸ್ಥಾನ ಆಯ್ಕೆಗೆ ಸರಿಯಾಗಿ ಒಂದು ತಿಂಗಳು ಉಳಿದಿರುವಂತೆಯೆ ಚಟುವಟಿಕೆಗಳು ಗರಿಗೆದರಿದ್ದು, ರಾಜ್ಯಾಧ್ಯಕ್ಷರಾಗಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ಸಿಟಿ ರವಿ ಮೂವರು ನಾಯಕರು ಹರಸಾಹಸ ಪಡುತ್ತಿದ್ದಾರೆ.
ಈ ಸಮಯದಲ್ಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಾಳೆ ಕರೆದಿರುವ ರಾಜ್ಯ ನಾಯಕರ ಸಭೆ ಕುತೂಹಲ ಹೆಚ್ಚಿಸಿದೆ. ಮೂವರಿಗೂ ಸ್ಥಾನ ಕೊಡದೆ ನಾಲ್ಕನೆಯವರಿಗೆ ಪಟ್ಟ ಕಟ್ಟಿ, ಬಿಎಸ್ವೈ ಅವರನ್ನು 2018ರ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗಿ ಬಿಂಬಿಸಿದರೆ ಹೇಗೆ ಎಂಬ ಲೆಕ್ಕಾಚಾರ ವರಿಷ್ಠರಲ್ಲಿ ಮೂಡಿದೆ.
ಮಾ.20ಕ್ಕೆ ಹಾಲಿ ರಾಜ್ಯಾಧ್ಯಕ್ಷ ಪ್ರಲ್ಹಾದ್ ಜೋಶಿ ಅವಧಿ ಮುಕ್ತಾಯವಾಗಲಿದೆ. ಮಾ.21ರೊಳಗೆ ಅಧ್ಯಕ್ಷರನ್ನು ನೇಮಕ ಮಾಡಬೇಕು. ಎರಡನೇ ಅವಧಿಗೆ ಅಧ್ಯಕ್ಷರಾಗಿ ಜೋಶಿ ಮುಂದುವರಿಯಲು ಪಕ್ಷದ ಬೈಲಾದಲ್ಲಿ ಅವಕಾಶವಿದೆ. ವೈಯಕ್ತಿಕ ಪ್ರಚಾರ ಹಾಗೂ ಸ್ಟಾರ್ಗಿರಿಗೆ ಹಾತೊರೆಯದೆ ಎಲ್ಲರ ನಿರ್ಧಾರಕ್ಕೆ ತಮ್ಮ ಮುದ್ರೆ ಒತ್ತುವ ಗುಣ ಹೊಂದಿರುವ ಅವರನ್ನೇ ಮುಂದುವರಿಸಲು ಒಂದು ಹಂತದಲ್ಲಿ ಬಿಜೆಪಿ ರಾಷ್ಟ್ರೀಯ ಮುಖಂಡರಲ್ಲಿ ಚರ್ಚೆ ನಡೆದಿತ್ತು.
ಆದರೆ ಮತ್ತೊಮ್ಮೆ ಮುಂದುವರಿಯಲು ಸ್ವತಃ ಜೋಷಿಯೇ ಆಸಕ್ತಿ ಹೊಂದಿಲ್ಲ. ಹೀಗಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಆರ್. ಅಶೋಕ್ ಹಾಗೂ ಸಿ.ಟಿ. ರವಿ ಕಣದಲ್ಲಿದ್ದು, ಈ ಮೂವರನ್ನು ಬಿಟ್ಟು ನಾಲ್ಕನೇಯವರಿಗೆ ಪಟ್ಟಕಟ್ಟುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.