ಬೆಂಗಳೂರು: ನಮ್ಮ ಮೆಟ್ರೋ ಮೊದಲನೇ ಹಂತ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳದ ಕಾರಣ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಇದರಿಂದ ಬಿಎಂಆರ್ಸಿಎಲ್ಗೆ 5 ವರ್ಷದಲ್ಲಿ 400 ಕೋಟಿ ರೂ.ಗಳಿಗೂ ಅಧಿಕ ನಷ್ಟವಾಗುತ್ತಿದೆ.
ನಮ್ಮ ಮೆಟ್ರೋ 1ನೇ ಹಂತ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ 3 ಮಾರ್ಗಗಳಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗಿದೆ. ಆದರೂ, ಪೂರ್ವ -ಪಶ್ಚಿಮ ಕಾರಿಡಾರ್ನ ಸುರಂಗ ಮಾರ್ಗದ ಕೆಲಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಹಾತ್ಮಾ ಗಾಂಧಿ ರಸ್ತೆ- ಬೈಯಪ್ಪನ ಹಳ್ಳಿ, ನಾಯಂಡಹಳ್ಳಿ -ಮಾಗಡಿ ರಸ್ತೆ ಮಾರ್ಗ ದಲ್ಲಿ ರೈಲು ಸಂಚಾರ ವ್ಯತ್ಯಯವಾಗುತ್ತಿದೆ. ಈ ಕಾರಣಕ್ಕಾಗಿ ಪ್ರಯಾಣಿಕರು ನಿರೀಕ್ಷಿತ ಮಟ್ಟದಲ್ಲಿ ಮೆಟ್ರೋ ರೈಲಿನಲ್ಲಿ ಸಂಚರಿಸುತ್ತಿಲ್ಲ. ಅದರಲ್ಲೂ ಮಹಾತ್ಮಾ ಗಾಂಧಿ ರಸ್ತೆ- ಬೈಯಪ್ಪನಹಳ್ಳಿ ಮಾರ್ಗದಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದೆ 30ರಿಂದ 35 ಸಾವಿರ ಮಂದಿ ಪ್ರಯಾಣಿಸುತ್ತಿದ್ದ ಜಾಗದಲ್ಲಿ ಪ್ರಸ್ತುತ 20ರಿಂದ 22 ಸಾವಿರ ಮಂದಿ ಸಂಚರಿಸುತ್ತಿದ್ದಾರೆ.
ಕಾಮಗಾರಿ ವಿಳಂಬ
ಮೆಟ್ರೋ ಕಾಮಗಾರಿ ಆರಂಭವಾದಾಗಿನಿಂದ ಈವರೆಗೆ ಬಿಎಂಆರ್ಸಿಎಲ್ 400 ಕೋಟಿ ರೂ.ಗಳಿಗೂ ಹೆಚ್ಚಿನ ನಷ್ಟ ಅನುಭವಿಸಿದೆ. ಅಲ್ಲದೆ, ಮೆಟ್ರೋ ರೈಲು ಮಾರ್ಗ ಪೂರ್ಣಗೊಳ್ಳ ದಿದ್ದರೂ, ಕೆಲ ಮಾರ್ಗಗಳಲ್ಲಿ ರೈಲು ಸಂಚಾರ ಆರಂಭಿಸಿರುವುದು ನಷ್ಟಕ್ಕೆ ಕಾರಣವಾಗಿದೆ. ಏಕೆಂದರೆ ಪೂರ್ತಿ ಮಾರ್ಗದಲ್ಲಿ ರೈಲು ಸಂಚರಿಸದ ಕಾರಣ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸಲು ಮನಸು ಮಾಡುತ್ತಿಲ್ಲ.