ಬೆಂಗಳೂರು: ಕೃಷಿ ಮತ್ತು ತೋಟಗಾರಿಕೆ ಉಪಕರಣಗಳ ಪೂರೈಕೆಯಲ್ಲಿ ರಾಷ್ಟ್ರದಲ್ಲೇ ಅಗ್ರ ಸ್ಥಾನದಲ್ಲಿರುವ ರತ್ನಗಿರಿ ಇಂಪೆಕ್ಸ್ನ ಭಾಗವಾಗಿರುವ ಅಗ್ರಿಮಾರ್ಟ್ ಮೈಸೂರು ರಸ್ತೆಯ ಗುಡ್ಡದಹಳ್ಳಿಯಲ್ಲಿ ಅಗ್ರಿಮಾರ್ಟ್ ಮೆಗಾ ರಿಟೇಲ್ ನೂತನ ಮಳಿಗೆ ಆರಂಭಿಸಿದೆ.
ರತ್ನಗಿರಿ ಇಂಪೆಕ್ಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್.ಎ. ವಾಸುದೇವಮೂರ್ತಿ ಶುಕ್ರವಾರ ರಿಟೇಲ್ ಮಳಿಗೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕೃಷಿ ಚಟುವಟಿಕೆಯಲ್ಲಿ ಯಂತ್ರಗಳ ಬಳಕೆ ಮೂಲಕ ಹೆಚ್ಚು ಉತ್ಪಾದನೆ ಹಾಗೂ ಕಡಿಮೆ ವೆಚ್ಚದ ತತ್ವದ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವಲ್ಲಿ ಅಗ್ರಿಮಾರ್ಟ್ ಯಶಸ್ಸು ಕಂಡಿದೆ ಎಂದು ಹೇಳಿದರು. 2009ರಲ್ಲಿ ಅಗ್ರಿಮಾರ್ಟ್ ಯೋಜನೆ ಆರಂಭಗೊಂಡು ದೇಶಾದ್ಯಂತ 125 ಮಳಿಗೆಗಳ ಸ್ಥಾಪನೆಯಲ್ಲಿ ಯಶಸ್ಸು ಕಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಣಿಜ್ಯೋದ್ಯಮದ ಪ್ರೋತ್ಸಾಹಕ್ಕೆ ಕಾರಣವಾಗಿರುವುದರ ಜತೆಗೆ ಸಾಕಷ್ಟು ಉದ್ಯೋಗವಕಾಶ ಸೃಷ್ಟಿಸಿದೆ ಎಂದರು.
ಕೃಷಿ ಕ್ಷೇತ್ರದಲ್ಲಿ ಯಂತ್ರೋಪಕರಣಗಳ ಬಳಕೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಬೃಹತ್ ಮಳಿಗೆ ಆರಂಭಿಸಲಾಗಿದೆ ಎಂದರು. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ, ಛತ್ತೀಸಗಢ, ಪಶ್ಚಿಮ ಬಂಗಾಳ, ಅಸ್ಸಾಂ, ಜಾರ್ಖಂಡ್, ಗುಜರಾತ್, ಮಹಾರಾಷ್ಟ್ರ ಮತ್ತು ಮೇಘಾಲಯಗಳಲ್ಲಿ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ವಾಸುದೇವಮೂರ್ತಿ ತಿಳಿಸಿದರು.
ರತ್ನಗಿರಿ ಇಂಪೆಕ್ಸ್ ಮಾರುಕಟ್ಟೆ ನಿರ್ದೇಶಕ ಎಸ್.ಎ. ಚಂದ್ರಮೋಹನ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಗೋಪಾಲಕೃಷ್ಣ ಮತ್ತಿತರರಿದ್ದರು.
ವೈವಿಧ್ಯಮಯ ಯಂತ್ರಗಳಿವೆ
ಕೃಷಿ ತೋಟಗಾರಿಕೆಯ 400ಕ್ಕೂ ಹೆಚ್ಚು ಉಪಕರಣಗಳನ್ನು 3 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿರುವ ಅಗ್ರಿಮಾರ್ಟ್ ಮೆಗಾ ಮಳಿಗೆಯಲ್ಲಿ ಅನಾವರಣಗೊಳಿಸಲಾಗಿದೆ. ರೈತರಿಗೆ ಹೊಸ ತಲೆಮಾರಿನ ಕೃಷಿಯಂತ್ರಗಳು ಸುಲಭ ದರದಲ್ಲಿ ಕೈಗೆಟುಕಲಿವೆ. ಏಕವ್ಯಕ್ತಿ ಚಾಲಿತ ಯಂತ್ರಗಳಾದ ಕಳೆ ಕತ್ತರಿಸುವ ಯಂತ್ರ, ಉಳುಮೆ ಯಂತ್ರ, ಗುಂಡಿ ತೊಡುವ ಯಂತ್ರ, ಕಟಾವು ಯಂತ್ರ, ಔಷಧ ಸಿಂಪಡಣೆ ಯಂತ್ರ ಸೇರಿ ವಿವಿಧ ಶ್ರೇಣಿಗಳ ಯಂತ್ರಗಳು ಮಳಿಗೆಯಲ್ಲಿವೆ.