ಕರ್ನಾಟಕ

ಹೊಸಬಾಳಿಗೆ ಅಡಿಯಿಟ್ಟ 27 ಜೋಡಿಗಳು

Pinterest LinkedIn Tumblr

maduve-fiಬೆಂಗಳೂರು, ಫೆ. ೧೭- “ಒಂದೆಡೆ ಹೊಸ ಬಾಳಿಗೆ ಕಾಲಿಡುವ ಉತ್ಸಾಹ, ಮತ್ತೊಂದೆಡೆ ಗುರು-ಹಿರಿಯರು-ಬಂಧುಗಳು ನೂರು ಕಾಲು ಬಾಳಿ ಎನ್ನುವ ಶುಭ ಹಾರೈಕೆ ಇವೆಲ್ಲದರ ಜತೆಗೆ ತಾಯಿ ಬನಶಂಕರಿಯ ಕೃಪೆ”

ಕಣ್ಣಿಲ್ಲದ ಜೋಡಿ ಕ್ರಿಶ್ಚಿಯನ್‌ನಿಂದ ಹಿಂದೂ ಸಂಪ್ರದಾಯಕ್ಕೆ ಬಂದ ಹುಡುಗಿ ಸೇರಿದಂತೆ 27 ನವ ಜೋಡಿಗಳು ಇಂದು ಗೃಹಸ್ಥಾಶ್ರಮಕ್ಕೆ ಕಾಲಿರಿಸಿದರು.

ತಮ್ಮ ಬಾಳಿನ ಹೊಸ ಪಯಣ ಆರಂಭಿಸಿದ ಜೋಡಿಗಳನ್ನು ಮನದುಂಬಿ ಅರಸಿ, ಹಾರೈಸಲು ಹರಗುರು ಚರಮೂರ್ತಿಗಳು, ರಾಜಕೀಯ ನಾಯಕರು, ಸಿನಿಮಾ ತಾರೆಯರು ಸೇರಿದಂತೆ ಹಲವು ಮಂದಿ ಮದುವೆಗೆ ಸಾಕ್ಷಿಯಾದರು.

ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ಬನಶಂಕರಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ 17ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧು-ವರರಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಬೇಲಿ ಮಠದ ಶ್ರೀ ಶಿವರುದ್ರಮಹಾಸ್ವಾಮೀಜಿ ರವರು ಬೆಳಗ್ಗೆಯೆ ಆಗಮಿಸಿ ಶುಭ ಹಾರೈಸಿದರು. ಬಳಿಕ ಮಧ್ಯಾಹ್ನ 12.14ರ ವೇಳೆಗೆ 27 ಜೋಡಿಗಳು ವಿವಾಹ ಬಂಧನಕ್ಕೆ ಒಳಗಾದರು.

ನಟಿ ಹಾಗೂ ವಿಧಾನಪರಿಷತ್ ಸದಸ್ಯೆ ತಾರಾ ನವ ವಧು-ವರರಿಗೆ ಮಾಂಗಲ್ಯ ವಿತರಿಸುತ್ತಿದ್ದಂತೆ ಬನಶಂಕರಿ ದೇವಾಲಯದ ಅರ್ಚಕರು ಮಂತ್ರ ಘೋಷ ಮಾಡುತ್ತಿದ್ದಂತೆ 27 ಜೋಡಿಗಳು ಹೊಸ ಬಾಳಿಗೆ ಕಾಲಿರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಯನಗರ ಶಾಸಕ ವಿಜಯಕುಮಾರ್, ಇಂದು ವಿವಾಹ ಬಂಧನಕ್ಕೆ ಒಳಗಾಗಿರುವ ಎಲ್ಲ ದಂಪತಿಗಳಿಗೆ ಒಳಿತಾಗಲಿ. ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಿ ನಡೆಯಲಿ ಎಂದರು.

ಮಾಜಿ ಶಾಸಕ ಎಂ. ಶ್ರೀನಿವಾಸ್ ಮಾತನಾಡಿ, ಜೀವನದಲ್ಲಿ ಎದುರಾಗುವ ಕಷ್ಟ ಸುಖಗಳನ್ನು ಸರಿ ಸಮಾನಾಗಿ ಸ್ವೀಕರಿಸಿ ಸತಿ-ಪತಿಗಳು ಮುನ್ನೆಡಿಯಿರಿ. ಪರಸ್ಪರ ಹೊಂದಾಣಿಕೆ ಜೀವನದ ಅಮೂಲ್ಯ ಗಳಿಗೆ ಎಂದರು.

ವಿಧಾನಪರಿಷತ್ ಸದಸ್ಯರಾದ ತಾರಾ, ಶರವಣ ಸೇರಿದಂತೆ ಅನೇಕರು, ಹೊಂದಾಣಿಕೆಯ ಜೀವನ ನಿಮ್ಮದಾಗಲಿ ಎಂದು ನೂತನ ವಧು-ವರರನ್ನು ಹಾರೈಸಿದರು.

ಉಚಿತ ಸಾಮೂಹಿಕ ವಿವಾಹ ವೇದಿಕೆ ಅಧ್ಯಕ್ಷ ಹಾಗೂ ಪಾಲಿಕೆ ಮಾಜಿ ಸದಸ್ಯ ಬಸವರಾಜು ಮಾತನಾಡಿ, 27 ಜೋಡಿಗಳು ಇಂದು ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ. ಅದರಲ್ಲಿ ಕಣ್ಣಿಲ್ಲದ ಜೋಡಿ ಹಿಂದೂ ಸಂಪ್ರದಾಯಕ್ಕೆ ಬಂದ ಕ್ರಿಶ್ಚಿಯನ್ ಹುಡುಗಿ ಸೇರಿದ್ದಾರೆ. ಬನಶಂಕರಿ ಅಮ್ಮನ ಕೃಪಾರ್ಶೀವಾದ, ಸಾರ್ವಜನಿಕರ ಬೆಂಬಲ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗಲಾಗುವುದು. ಇದು 17ನೇ ವರ್ಷದ ವಿವಾಹ ಕಾರ್ಯಕ್ರಮ ಎಂದರು.

ಕಾರ್ಯಕ್ರಮದಲ್ಲಿ ವೇದಿಕೆಯ ಎಚ್.ಕೆ. ನಟರಾಜ್, ಜೆ. ದೇವರಾಜಲು, ಹೆಚ್.ಕೆ. ಮುತ್ತಪ್ಪ, ಎಸ್. ವಿದ್ಯಾಸಾಗರ್, ದಾಮೋದರನಾಯ್ಡ್, ಜಿ.ಎಸ್. ಪ್ರಸನ್ನಕುಮಾರ್, ಆರ್. ನಾರಾಯಣಸ್ವಾಮಿ, ಚಲನಚಿತ್ರ ಕಲಾವಿದ ನಾಗರಾಜಕೋಟೆ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ 7 ಮಂದಿ ಗಣ್ಯರನ್ನು ಸನ್ಮಾನಿಸಲಾಯಿತು.

Write A Comment