ಬೆಂಗಳೂರು, ಫೆ.17- ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ, ಮುಖ್ಯಮಂತ್ರಿಗಳ ವಿರುದ್ಧ ಪ್ರತಿಪಕ್ಷಗಳಿಗೆ ಪ್ರಬಲ ಅಸ್ತ್ರವಾಗಿರುವ, ವಿಧಾನಸಭಾ ಮತ್ತು ಲೋಕಸಭೆಯಲ್ಲೂ ಪ್ರತಿಧ್ವನಿಸಲು ಸಿದ್ಧವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಂದಿರುವ ದುಬಾರಿ ಉಡುಗೊರೆ ಹ್ಯೂಬ್ಲೆಟ್ ವಾಚ್ ಪ್ರಕರಣದ ಹಿಂದೆ ರೋಚಕ ಕಥೆಯೇ ಇದೆ. ಇದನ್ನು ಸಮಗ್ರವಾಗಿ ತನಿಖೆ ಮಾಡುತ್ತಾ ಹೋದರೆ ಈ ವಾಚ್ ಎಲ್ಲಿಂದ ಬಂತು, ಯಾರು ಕೊಟ್ಟರು, ಯಾರ ಮೂಲಕ ಮುಖ್ಯಮಂತ್ರಿಗಳಿಗೆ ತಲುಪಿತು ಎಂಬುದನ್ನು ಹುಡುಕುತ್ತಾ ಹೋದರೆ ಬ್ರಹ್ಮಾಂಡವೇ ಬಯಲಾಗುತ್ತದೆ. ಈ ವಾಚ್ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ತಲೆದಂಡವಾದರೂ ಆಶ್ಚರ್ಯವಿಲ್ಲ. ಮುಖ್ಯಮಂತ್ರಿಗಳ ಹಲವು ಆಪ್ತರು ಕಾರಾಸ್ಥಾನಕ್ಕೆ ಹೋಗಬೇಕಾಗುತ್ತದೆ. ಈ ದುಬಾರಿ ಡೈಮಂಡ್ ಕೈಗಡಿಯಾರವನ್ನು ದುಬೈ ಮೂಲದ ವೈದ್ಯರೊಬ್ಬರು ಖರೀದಿಸಿದ್ದು ಎಂದು ತಿಳಿದು ಬಂದಿದೆ.
ಸುಮಾರು 70ಲಕ್ಷ ರೂ. ಬೆಲೆ ಬಾಳುವ ಈ ಕೈ ಗಡಿಯಾರವನ್ನು ಅವರು ಸುಂಕವನ್ನು ಸಲ್ಲಿಸಿಯೇ ಖರೀದಿಸಿದ್ದಾರೆ. ಪಾಪ ಮುಖ್ಯಮಂತ್ರಿಗಳಿಗೆ ಈ ವಾಚಿನ ಮೌಲ್ಯವೇ ಗೊತ್ತಿಲ್ಲ.
ಸಿಎಂಗೆ ಈ ವಾಚ್ ಕೊಟ್ಟಾಗ ಅದರ ಬೆಲೆ ಗೊತ್ತಿಲ್ಲ. ಯಾರು ಕೊಟ್ಟರು, ಏಕೆ ಕೊಟ್ಟರು ಎಂಬುದೂ ಅವರಿಗೆ ತಿಳಿದಿರಲಿಲ್ಲ. ವಾಚ್ ಕೊಟ್ಟಾಗ ಸಂತೋಷದಿಂದ ಸ್ವೀಕರಿಸಿದ್ದಾರೆ. ಆದರೆ, ಆರೋಪ ಎದುರಾದಾಗ ಬೆಚ್ಚಿಬಿದಿದ್ದಾರೆ. ಸಾರ್ವಜನಿಕ ಉತ್ತರದಾಯತ್ವ ಹೊಂದಿರುವವರು ಇದನ್ನು ತಿಳಿದುಕೊಳ್ಳದಿದ್ದರೆ ಮೂರ್ಖತನದ ಪರಮಾವಧಿಯಾಗುತ್ತದೆ. ಅಥವಾ ಮುಗ್ಧತನವಾಗುತ್ತದೆ. ವಾಚಂತೂ ಮುಖ್ಯಮಂತ್ರಿಗಳ ಕೈ ಸೇರಿದೆ. ಆದರೆ, ಅದರ ಮೌಲ್ಯ ಅವರಿಗೆ ತಿಳಿದಿರಲಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ಆರೋಪ ಮಾಡಿದಾಗಲೇ ಅದರ ಮಹತ್ವ, ಅದರ ಒಳಮರ್ಮ, ಅದರ ಮೌಲ್ಯ ಸಿದ್ದರಾಮಯ್ಯ ಅವರಿಗೆ ಗೊತ್ತಾಗಿದ್ದು.
ಅಲ್ಲಿಯವರೆಗೂ ಅವರಿಗೆ ಅದರ ಮೌಲ್ಯದ ಬಗ್ಗೆ ತಿಳಿದೇ ಇರಲಿಲ್ಲ. ಅದಕ್ಕಾಗಿಯೇ ಅವರು ನನ್ನ ಕನ್ನಡಕವನ್ನು 50ಸಾವಿರಕ್ಕೆ ಕೊಡುತ್ತೇನೆ. ವಾಚನ್ನು 5ಲಕ್ಷಕ್ಕೆ ಕೊಡುತ್ತೇನೆ ಎಂದು ಹೇಳಿದ್ದು. ಮೌಲ್ಯ ಗೊತ್ತಿದ್ದರೆ ಬಹುಶಃ ಹಾಗೆ ಹೇಳುತ್ತಿರಲಿಲ್ಲ. ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ರಾಜ್ಯಾದ್ಯಂತ ಈ ವಿಷಯ ಸುದ್ದಿಯಾಗಿತ್ತು. ಚರ್ಚೆಗೆ ಗ್ರಾಸವಾಗಿತ್ತು. ಮುಖ್ಯಮಂತ್ರಿಗಳು ದುಬಾರಿ ಉಡುಗೊರೆ ಯಾವ ಕಾರಣಕ್ಕೆ ಪಡೆದಿದ್ದಾರೆ, ಯಾವ ಹಿನ್ನೆಲೆಯಲ್ಲಿ ಪಡೆದಿದ್ದಾರೆ, ಏತಕ್ಕಾಗಿ ಇಷ್ಟು ಪ್ರಮಾಣದ ಉಡುಗೊರೆಯನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ ಎಂಬುದನ್ನು ಪ್ರತಿಪಕ್ಷದವರು, ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು. ಹೈಕಮಾಂಡ್ ಕೂಡ ಅನುಮಾನದ ದೃಷ್ಟಿಯಲ್ಲಿ ನೋಡ ತೊಡಗಿತ್ತು.
ಮುಖ್ಯಮಂತ್ರಿಗಳ ಬಳಿ ಇರುವ ದುಬಾರಿ ವಾಚ್, ಕನ್ನಡಕಗಳ ಹಗರಣದಲ್ಲಿ ಸಿದ್ಧರಾಮಯ್ಯನವರ ಬೆಂಬಲಕ್ಕೆ ಯಾವ ಸಚಿವರೂ ನಿಂತಂತೆ ಕಾಣಲಿಲ್ಲ. ಉಪ ಚುನಾವಣೆಯಲ್ಲಿ ಸೋಲಿನ ವಿಷಯಕ್ಕೆ ಪ್ರತಿಪಕ್ಷಗಳಿಗೆ ಇದೇ ಅಸ್ತ್ರವಾಯಿತು. ವಾಚ್ ಖರೀದಿಸಿದವರು ಸದ್ಯ ಬೆಂಗಳೂರಿನಲ್ಲಿ ಇಲ್ಲ. ಅವರ ಬಾಯನ್ನು ಕೆಲ ಪಟ್ಟಭದ್ರಹಿತಾಸಕ್ತಿಗಳ ಮೂಲಕ ಮುಚ್ಚಿಸಲಾಗಿದೆ. ಇದು ಬೇರೆ ದೇಶದ ವಾಚು, ಯಾರದು, ಎಲ್ಲಿಂದ, ಹೇಗೆ ಬಂತು ಎಂಬ ಸಂಪೂರ್ಣ ಮಾಹಿತಿ ಉನ್ನತ ಪೊಲೀಸ್ ಅಧಿಕಾರಿಗಳ ಬಳಿ ಇದೆ.
ಒಟ್ಟಾರೆ ವಾಚ್ ಪ್ರಕರಣ ನಿಗೂಢವಾಗಿದೆ. ಇದನ್ನು ವಾಚ್ ಪಡೆದ ಮುಖ್ಯಮಂತ್ರಿಗಳು ಬಹಿರಂಗಪಡಿಸಬೇಕು. ಇಲ್ಲವೇ ಆರೋಪ ಮಾಡಿರುವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಬೇಕು ಅಥವಾ ವಾಚ್ ನೀಡಿರುವವರು ಹೇಳಬೇಕು. ಅಲ್ಲಿಯವರೆಗೂ ಈ ಪ್ರಕರಣ ನಿಗೂಢವಾಗಿಯೇ ಉಳಿಯುತ್ತದೆ. ವಾಚ್ ಪ್ರಕರಣ ಪ್ರಾರಂಭದಲ್ಲಿ ಕ್ಷುಲ್ಲಕ ವಿಚಾರದಂತೆ ಕಂಡು ಬಂದಿದೆ. ಆದರೆ, ಇದು ಜಾದೂ ಗಡಿಯಾರವಾಗಿ ಪರಿಣಮಿಸಿದೆ. ಇದರ ಸತ್ಯದ ಮೂಲ ಹೊರಬಂದರೆ ಹಲವರ ಕೊರಳಿಗೆ ಉರುಳಾಗುವುದು ಗ್ಯಾರಂಟಿ ಎನ್ನುವ ಆತಂಕ ಎದುರಾಗಿದೆ.
ಮುಖ್ಯಮಂತ್ರಿಗಳ ಕಾರ್ಯಾಲಯದ ಸುತ್ತಮುತ್ತಲಿರುವ ಅಧಿಕಾರಿಗಳು, ಆಪ್ತರು ಪ್ರಾಮಾಣಿಕರಾಗಿದ್ದರೆ ಈ ಪ್ರಕರಣ ನಡೆಯುತ್ತಿರಲಿಲ್ಲ. ಬಹುತೇಕರು ಭ್ರಷ್ಟರೇ ಸುತ್ತುವರಿದಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಲೆಯಲ್ಲಿ ಸಿಕ್ಕಿಕೊಂಡ ಜೇಡದಂತೆ ಆಗಿದ್ದಾರೆ. ಈಗಲಾದರೂ ತಮ್ಮ ಸುತ್ತಮುತ್ತ ಇರುವ ಭ್ರಷ್ಟ ಅಧಿಕಾರಿಗಳನ್ನು ಬದಲಿಸಿ ಪ್ರಾಮಾಣಿಕರನ್ನು ನೇಮಿಸಿಕೊಂಡು ಬಲೆಯ ಸಿಕ್ಕಿನಿಂದ ಹೊರಬರಬೇಕಾಗಿದೆ.