ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಚಟಕ್ಕೆ ಬಿದ್ದು, ತಾನು ಕೆಲಸ ಮಾಡುತ್ತಿದ್ದ ಆಭರಣ ಮಳಿಗೆಯಲ್ಲಿ ₹ 24 ಲಕ್ಷ ಮೌಲ್ಯದ 79 ಚಿನ್ನದ ಉಂಗುರಗಳನ್ನು ಎಗರಿಸಿದ್ದ ಬಾಲಕೃಷ್ಣ ಅಲಿಯಾಸ್ ಬಾಬು (32) ಎಂಬಾತನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತ್ಯಾಗರಾಜನಗರ ನಿವಾಸಿಯಾದ ಆರೋಪಿ, ಜಯನಗರ 3ನೇ ಬ್ಲಾಕ್‌ನಲ್ಲಿರುವ ಪಿ.ಸಿ. ಜ್ಯುವೆಲ್ಲರ್ಸ್ ಆಭರಣ ಮಳಿಗೆಯಲ್ಲಿ 2 ವರ್ಷದಿಂದ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ.
ಇತ್ತೀಚೆಗೆ ಬೆಟ್ಟಿಂಗ್ ಹಾಗೂ ಜೂಜಿನ ಚಟಕ್ಕೆ ಬಿದ್ದಿದ್ದ ಆತ, ನಾಲ್ಕೈದು ತಿಂಗಳಿಂದ ಮಳಿಗೆಯಲ್ಲಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ 3–4 ದಿನಕ್ಕೊಮ್ಮೆ ಒಂದೊಂದೇ ಉಂಗುರವನ್ನು ಎಗರಿಸುತ್ತಿದ್ದ. ಮಳಿಗೆಯ ಮ್ಯಾನೇಜರ್ ಆಭರಣಗಳ ಸ್ಟಾಕ್ ಬಗ್ಗೆ ಪರಿಶೀಲನೆ ನಡೆಸಿದಾಗ, ಉಂಗುರಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂತು. ಈ ಬಗ್ಗೆ ಉದ್ಯೋಗಿಗಳ ಮೇಲೆ ಕಣ್ಣಿಟ್ಟಿದ್ದ ಅವರಿಗೆ ಬಾಲಕೃಷ್ಣನೇ ಉಂಗುರ ಕದ್ದೊಯ್ಯುತ್ತಿರುವ ಸಂಗತಿ ಗೊತ್ತಾಯಿತು.
ಈ ಸಂಬಂಧ ಅವರು ಠಾಣೆಗೆ ದೂರು ಕೊಟ್ಟಿದ್ದರು. ಮಾರನೆಯ ದಿನ ಏನೂ ಗೊತ್ತಿಲ್ಲದಂತೆ ಕೆಲಸಕ್ಕೆ ಬಂದ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೃತ್ಯ ಒಪ್ಪಿಕೊಂಡ. ಆರೋಪಿ ಕದ್ದ ಉಂಗುರಗಳನ್ನು ಮಣಪ್ಪುರಂ ಗೋಲ್ಡ್ ಲೋನ್ ಹಾಗೂ ಕೆಲ ಸ್ಥಳೀಯ ಗಿರವಿ ಅಂಗಡಿಗಳಲ್ಲಿ ಅಡವಿಟ್ಟು ಹಣ ಪಡೆದುಕೊಂಡಿದ್ದ. ಆತ ನೀಡಿದ ಮಾಹಿತಿ ಮೇರೆಗೆ ಉಂಗುರಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಯನಗರ ಠಾಣೆ ಪೊಲೀಸರು ತಿಳಿಸಿದರು.