ಬೆಂಗಳೂರು: ಶಾಲಾ ಮಕ್ಕಳಿಗೆ ಶಿಕ್ಷಕರು ಥಳಿಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು. ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಕ್ಕಳಿಗೆ ಥಳಿಸುವ ನಿಯಮಗಳು ಜಾರಿಯಲಿಲ್ಲ. ಮಕ್ಕಳ ಮನಸ್ಸನ್ನು ಪ್ರೀತಿ, ವಿಶ್ವಾಸದಿಂದ ಗೆದ್ದು ಶಿಕ್ಷಕರು ಕಲಿಸಬೇಕಾಗುತ್ತದೆ ಎಂದರು. ಕೆಲವೊಂದು ಶಾಲೆಗಳಲ್ಲಿ ಮಕ್ಕಳಿಗೆ ಥಳಿಸಿರುವ ಘಟನೆ ಜರುಗಿದ್ದು, ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು.
ರಾಜ್ಯದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ 54 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದ ಅವರು, ನ್ಯಾಯಾಲಯದ ತಡೆಯಾಜ್ಞೆ ತೆರವಾಗಿರುವ ಹಿನ್ನೆಲೆಯಲ್ಲಿ ಆರ್‌ಟಿಇ ಮೂಲಕ ಪ್ರವೇಶ ಪಡೆವ ಪ್ರಕ್ರಿಯೆ ಕಳೆದ ವರ್ಷದಂತೆ ನಡೆಯಲಿದೆ ಎಂದರು. ಶಾಲಾ ಮಕ್ಕಳ ಪಠ್ಯಪುಸ್ತಕ ಹೊರೆ ತಗ್ಗಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಹೊರೆ ತಗ್ಗಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ಖಾಸಗಿ ಶಾಲೆಗಳಲ್ಲಿ ಪುಸ್ತಕ ಹೊರೆ ಹೆಚ್ಚಾಗಿದೆ ಎಂದು ಹೇಳಿದರು.
ವಿಪ್ರೊ ಇನ್ಪೋಸಿಸ್, ಅಕ್ಷರ ಪ್ರತಿಷ್ಠಾನ ಸೇರಿದಂತೆ ಖಾಸಗಿಯವರು ಮುಂದೆ ಬಂದು ಶಾಲೆ ನಿರ್ಮಾಣ, ಮೂಲಸೌಕರ್ಯ ಕಲ್ಪಿಸಲು, ನಿರ್ವಹಣೆ ಮಾಡಲು ಕೋರಿದರೆ ಅವಕಾಶ ನೀಡಲಾಗುವುದು ಎಂದರು. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಜೂ.1ರಿಂದಲೇ ಪ್ರೌಢಶಾಲೆ ಮಕ್ಕಳಿಗೆ ಸೈಕಲ್ ನೀಡಲು ಸಿದ್ಧತೆ ನಡೆಸಲಾಗಿದೆ. ಈ ಸಂಬಂಧ ಸೈಕಲ್ ಪೂರೈಸುವ ಕಂಪೆನಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. 12,700 ಶಿಕ್ಷಕರ ನೇಮಕಾತಿ ಪೈಕಿ ಈಗಾಗಲೇ 9ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಪ್ರೌಢಶಾಲೆಯ ಇಂಗ್ಲಿಷ್ ಹಾಗೂ ಪಿಯುಸಿ ಕಾಲೇಜಿನ 3700 ಉಪನ್ಯಾಸಕರ ನೇಮಕಾತಿಗೆ ನ್ಯಾಯಾಲಯದ ತಡೆಯಾಜ್ಞೆ ಇದೆ ಎಂದರು.
ಒಂಭತ್ತು ತಿಂಗಳ ತರಬೇತಿ ಕೋರ್ಸ್ ಮುಗಿಸಿದ ಇಂಗ್ಲಿಷ್ ಶಿಕ್ಷಕರ ನೇಮಕಾತಿ ಮಾನ್ಯತೆ ಮಾಡದಂತೆ ನ್ಯಾಯಾಲಯ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 9 ತಿಂಗಳ ಕೋರ್ಸ್ ಮುಗಿಸಿರುವ ಶಿಕ್ಷಕರ ಹಿತಕಾಪಾಡಲು ಮಾರ್ಗೋಪಾಯಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇಂಗ್ಲಿಷ್ ಶಿಕ್ಷಕರು ಇಂಗ್ಲಿಷ್ ಐಚ್ಛಿಕವಾಗಿ ಪದವಿ ಪಡೆಯುವುದು ಸೇರಿದಂತೆ ವಿವಿಧ ಮಾರ್ಗೋಪಾಯ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.