ಅಹ್ಮದಾಬಾದ್: ರಾಷ್ಟ್ರ ಪಿತ ಗಾಂಧೀಜಿ ಅವರಿಗೆ ‘ಮಹಾತ್ಮ’ ಎಂಬ ಬಿರುದು ನೀಡಿದ್ದು ನೋಬೆಲ್ ಪ್ರಶಸ್ತಿ ಪುರಸ್ಕೃತ ಕವಿ ರವೀಂದ್ರನಾಥ್ ಟ್ಯಾಗೂರ್ ಅಲ್ಲ. ಒಬ್ಬ ಅನಾಮಧೇಯ ಪತ್ರಕರ್ತನಂತೆ !. ಗುಜರಾತ್ ಸರ್ಕಾರ ತನ್ನ ಪ್ರಶ್ನೆ ಪತ್ರಿಕೆಯಲ್ಲಿ ಈ ಕುರಿತಾದ ಪ್ರಶ್ನೆಗೆ ‘ಪತ್ರಕರ್ತ’ ಎಂಬ ಉತ್ತರ ಪ್ರಕಟಿಸಿದ್ದು, ಭಾರತದ ಅತಿ ದೊಡ್ಡ ನದಿ, ಗಂಗಾ ಅಲ್ಲ ಬ್ರಹ್ಮಪುತ್ರಾ ಎಂಬ ಉತ್ತರವನ್ನೂ ನೀಡಲಾಗಿದೆ. ಅಂದರೆ ಸೌರಾಷ್ಟ್ರದ ಜೆಟ್ಪುರ ಪಟ್ಟಣದ ಪತ್ರಕರ್ತನೊಬ್ಬ ಗಾಂಧೀಜಿ ಇನ್ನೂ ದಕ್ಷಿಣ ಆಫ್ರಿಕದಲಿದ್ದ ಸಂದರ್ಭದಲ್ಲೇ ಅವರಿಗೆ ಬರೆದ ಪತ್ರದಲ್ಲಿ ಮಹಾತ್ಮ ಎಂದು ನಮೂದಿಸಿದ್ದನಂತೆ.
2501ಕಿ.ಮೀ. ಉದ್ದದ ಗಂಗಾ ನದಿಗೆ ಬದಲಾಗಿ 1,346ಕಿ.ಮೀ ಉದ್ದಕ್ಕೆ ಹರಿಯುವ ಬ್ರಹ್ಮ ಪುತ್ರಾ ನದಿಯೇ ದೇಶದ ಅತಿ ದೊಡ್ಡ ನದಿ ಎಂದು ನಮೂದಿಸಲಾಗಿದೆ. ವೃತ್ತಿ ಆಯ್ಕೆ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲೂ ಈ ಉತ್ತರಗಳನ್ನು ಕೊಡಲಾಗಿದೆ. ಗುಜರಾತ್ ಸರ್ಕಾರದ ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶ ಜೆ.ಬಿ.ಸರ್ದಿವಾಲಾ, ವಿವಿಧ ಇಲಾಖೆಗಳ ನೇಮಕಾತಿ ವಿಷಯದಲ್ಲಿ ಈ ರೀತಿ ಹುಡುಗಾಟ ಅಥವಾ ಉತ್ತರ ತಿರುಚುವುದು ಸರಿಯಲ್ಲ ಎಂದು ಹೇಳಿದ್ದಾರೆ.
ನ್ಯಾಯವಾದಿ ಹೆಚ್.ಎಸ್.ಮುಶ್ವಾ ಅವರು, ನಾನು ಇದುವರೆಗೆ ಇಂತಹ ಉತ್ತರಗಳನ್ನು ನೋಡಿರಲಿಲ್ಲ. ನಾನು ಕೂಡ ಹಿಂದೆ ನಡೆದ ಇಂಥ ಪರೀಕ್ಷೆಯಲ್ಲಿ ಗಾಂಧೀಜಿಗೆ ಮಹಾತ್ಮ ಎಂಬ ಬಿರುದು ನೀಡಿದ್ದು ರವೀಂದ್ರನಾಥ್ ಟ್ಯಾಗೂರ್ ಹಾಗೂ ದೇಶದ ದೊಡ್ಡ ನದಿ ಗಂಗಾ ಎಂದೇ ಬರೆದಿದ್ದೆ ಎಂದು ಹೇಳಿದ್ದಾರೆ. ಈ ಕುರಿತ ವಿಚಾರಣೆಯನ್ನು ನ್ಯಾಯಾಧೀಶರು ಫೆ.17ಕ್ಕೆ ಮುಂದೂಡಿದ್ದಾರೆ.