ಬೆಂಗಳೂರು: ಬಸವೇಶ್ವರನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ ದಲ್ಲಿ ಶನಿವಾರ ರಾತ್ರಿ ಮ್ಯಾಕ್ಸ್ ಮುಲ್ಲರ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ವೇಳೆ ವೇದಿಕೆ ಕುಸಿದು, ಮಕ್ಕಳು ಮತ್ತು ಶಿಕ್ಷಕರು ಸೇರಿದಂತೆ 8 ಮಂದಿ ಗಾಯಗೊಂಡಿದ್ದಾರೆ.
ಶಿಕ್ಷಕ ಕೃಷ್ಣಮೂರ್ತಿ, ವಿದ್ಯಾರ್ಥಿಗಳಾದ ಸಮರ್ಥ್, ನಿಖಿಲ್ ಗೌಡ ಹಾಗೂ ಮನೋಜ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಿರೂಪಕಿ ಪಿಂಕಿ ಅವರ ಕೈ ಮುರಿದಿದೆ. ಎಲ್ಲರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿಸಲಾಗಿದ್ದು, ಉಳಿದ ಗಾಯಾಳುಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದರು.
ರಾತ್ರಿ 8.30ರ ಸುಮಾರಿಗೆ ಮೈದಾನದಲ್ಲಿ ವೇದಿಕೆಯಲ್ಲಿ 50 ಮಕ್ಕಳು ಕನ್ನಡದ ‘ಐರಾವತ’ ಚಿತ್ರದ ಹಾಡಿಗೆ ನೃತ್ಯ ಮಾಡುತ್ತಿದ್ದರು. ಆಗ, ವೇದಿಕೆಯ ಅಕ್ಕಪಕ್ಕ ಮತ್ತು ಹಿಂಭಾಗ ಹಾಕಿದ್ದ ಲೈಟಿಂಗ್ಸ್ ಕಂಬಗಳು, ಶಾಮಿಯಾನ ಸಮೇತ ಮುಂಭಾಗಕ್ಕೆ ಬಿದ್ದಿದ್ದರಿಂದ ವೇದಿಕೆ ಒಮ್ಮೆಲೆ ಕುಸಿಯಿತು ಎಂದು ಪೊಲೀಸರು ಹೇಳಿದರು. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಕಂಬ ಮತ್ತು ಶಾಮಿಯಾನದಡಿ ಸಿಲುಕಿದ್ದ ಮಕ್ಕಳನ್ನು ರಕ್ಷಿಸಿದರು. ಘಟನೆ ವೇಳೆ ವಿದ್ಯಾರ್ಥಿಗಳು ಮತ್ತು ಪೋಷಕರು ಸೇರಿದಂತೆ ಸುಮಾರು 500 ಮಂದಿ ಸ್ಥಳದಲ್ಲಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಸುರಕ್ಷತಾ ಕ್ರಮ ಕೈಗೊಂಡಿಲ್ಲ: ಕಾರ್ಯಕ್ರಮಕ್ಕಾಗಿ ಶಾಲಾ ಆಡಳಿತ ಮಂಡಳಿ, ಪ್ರತಿ ವಿದ್ಯಾರ್ಥಿಯಿಂದ ತಲಾ₹ 3 ಸಾವಿರ ಸಂಗ್ರಹಿಸಿದೆ. ಆದರೆ ಕಾರ್ಯಕ್ರಮದ ವೇಳೆ ಮಾತ್ರ ಸರಿಯಾದ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ರಾತ್ರಿ ನಡೆಯುವ ಕಾರ್ಯ ಕ್ರಮಕ್ಕೆ ಪೊಲೀಸರ ಭದ್ರತೆಯಾಗಲೀ, ತುರ್ತು ಸಂದರ್ಭಕ್ಕಾಗಿ ಆಂಬುಲೆನ್ಸ್ ವ್ಯವಸ್ಥೇ ಕೂಡ ಮಾಡಿಲ್ಲ ಎಂದು ಪೋಷಕರೊಬ್ಬರು ಆರೋಪಿಸಿದರು.
ಪ್ರಾಣ ಲೆಕ್ಕಿಸದೆ ಬಾಲಕಿ ರಕ್ಷಿಸಿದ
ವೇದಿಕೆ ಮುಂಭಾಗ ಕುಳಿತು ನೃತ್ಯ ವೀಕ್ಷಿಸುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮುನೇಶ್, ತನ್ನ ಪ್ರಾಣ ಲೆಕ್ಕಿಸದೆ ಬಾಲಕಿಯೊಬ್ಬಳನ್ನು ರಕ್ಷಿಸಿದ ಘಟನೆ ನಡೆಯಿತು.
ಬಾಲಕಿಯ ಮೇಲೆ ವೇದಿಕೆ ಲೈಟಿಂಗ್ಸ್ ಕಂಬ ಬೀಳುತ್ತಿರುವು ದನ್ನು ಅರಿತ ಆತ, ಕೂಡಲೇ ಓಡಿ ಹೋಗಿ ಆಕೆಯನ್ನು ಪಕ್ಕಕ್ಕೆ ಎಳೆದು ಕೊಂಡ. ಈ ವೇಳೆ ಕಂಬ ತಾಗಿ ದ್ದರಿಂದ ತಲೆಗೆ ಗಾಯವಾಯಿತು.
ಆಸ್ಪತ್ರೆಗೆ ದಾಖಲಾಗಿರುವ ಆತನ ತಲೆಗೆ 9 ಹೊಲಿಗೆ ಹಾಕ ಲಾಗಿದೆ. ರಾಜಾಜಿನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಆತನಿಗೆ ಸೋಮವಾರದಿಂದ ಪೂರ್ವ ಸಿದ್ಧತಾ ಪರೀಕ್ಷೆ ಇದೆ. ಆದರೆ, ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾಗಿ ಪೋಷಕರು ತಿಳಿಸಿದರು.