ಚಂಡೀಗಢ: ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 22 ವರ್ಷದ ಬಾಣಂತಿ ಮೇಲೆ ಅತ್ಯಾಚಾರವೆಸಗಿದ ಘಟನೆ ಹರಿಯಾಣದ ಜಾಜ್ಜರ್ ಜಿಲ್ಲೆಯ ಬಹದ್ದೂರ್ಗಢದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.
ಸಿಸಿಟಿವಿ ಫೂಟೇಜ್ನಲ್ಲಿ ಕಾಮುಕನ ಚಹರೆ ಪತ್ತೆಯಾಗಿದೆಯಾದರೂ, ಸ್ಪಷ್ಟತೆ ಇಲ್ಲ. ಕ್ಯಾಮರಾ ಇರುವುದನ್ನು ಗೊತ್ತುಮಾಡಿಕೊಂಡ ಕಾಮುಕ ಎಲ್ಲಿಯೂ ಮುಖವನ್ನು ಕ್ಯಾಮರಾ ಕಡೆ ತಿರುಗಿಸಿಯೇ ಇಲ್ಲ ಎನ್ನಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕೆಲದಿನಗಳ ಹಿಂದೆ ಶಸ್ತ್ರಚಿಕಿತ್ಸೆ ಮೂಲಕ ಮಗುವಿಗೆ ಜನ್ಮ ನೀಡಿದ ಮಹಿಳೆಗೆ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು.
ಸಿಸಿಟಿವಿಯಲ್ಲಿ ಲಭ್ಯವಾಗಿರುವ ಮಾಹಿತಿಯಂತೆ ವ್ಯಕ್ತಿಯೊಬ್ಬ ತಡರಾತ್ರಿ 3.30ರ ಸುಮಾರಿಗೆ ವರ್ಣ ಕಾರಿನಲ್ಲಿ ಬಂದು ಆಸ್ಪತ್ರೆಯ ಬಳಿ ಇಳಿದು ನೇರವಾಗಿ ತುರ್ತು ನಿಗಾಘಟಕಕ್ಕೆ ತೆರಳುತ್ತಾನೆ. ನಂತರ ಆಸ್ಪತ್ರೆಯಿಂದ ನಿರ್ಗಮಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಘಟನೆ ನಡೆದ ಬಳಿಕ ಅತ್ಯಾಚಾರಕ್ಕೊಳಗಾದ ಮಹಿಳೆ ನರ್ಸ್ ಒಬ್ಬರನ್ನು ಕರೆದು ತನ್ನ ಪತಿಗೆ ಬರಲು ಹೇಳುವಂತೆ ಹೇಳಿ, ಪತಿ ಆಸ್ಪತ್ರೆಗೆ ಬಂದ ಬಳಿಕ ನಡೆದ ಘಟನೆಗಳನ್ನೆಲ್ಲ ವಿವರಿಸಿದ್ದಾಳೆ. ನಂತರ ಪತಿ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಠಾಣೆ ಮೇಲುಸ್ತುವಾರಿ ರಣಭೀರ್ ಸಿಂಗ್ ತಿಳಿಸಿದ್ದಾರೆ.