ಕರ್ನಾಟಕ

ಸಂಬಂಧಿಕರೊಂದಿಗೆ ಸೇರಿ ಪತಿಯ ಬರ್ಬರ ಹತ್ಯೆಗೈದ ಪತ್ನಿ

Pinterest LinkedIn Tumblr

patiತುಮಕೂರು, ಫೆ.11-ಪ್ರತಿದಿನ ಜಗಳವಾಡುತ್ತಿದ್ದ ಪತಿಯನ್ನು ಸಂಬಂಧಿಕರೊಂದಿಗೆ ಸೇರಿ ಪತ್ನಿಯೇ ಹತ್ಯೆ ಮಾಡಿರುವ ಘಟನೆ ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂತೋಷ್ ಬಡಾವಣೆಯ ನಿವಾಸಿ ರವಿಕಿರಣ್ (39) ಕೊಲೆಯಾದ ದುರ್ದೈವಿ.

ಘಟನೆ ವಿವರ: ರವಿಕಿರಣ್ ಹಾಗೂ ಸಂತೋಷಿ ದಂಪತಿಯಾಗಿದ್ದು, ಸಂತೋಷ್ ಬಡಾವಣೆಯಲ್ಲಿ ಹಲವಾರು ವರ್ಷಗಳಿಂದ ವಾಸವಾಗಿದ್ದರು. ಕಳೆದ 6 ತಿಂಗಳಿನಿಂದ ವಿನಾಕಾರಣ ಪತ್ನಿಯೊಂದಿಗೆ ರವಿಕಿರಣ್ ಜಗಳವಾಡುತ್ತಿದ್ದನು ಎನ್ನಲಾಗಿದೆ.

ಒಂದು ರೀತಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ರವಿಕಿರಣ್, ಕ್ಷುಲ್ಲಕ ವಿಚಾರಕ್ಕೂ ಪತ್ನಿಯೊಂದಿಗೆ ಹಗಲು-ರಾತ್ರಿಯೆನ್ನದೆ ನಿಂದಿಸಿ ಥಳಿಸುತ್ತಿದ್ದನು ಎನ್ನಲಾಗಿದೆ. ಈ ವಿಚಾರವಾಗಿ ಸಂತೋಷಿ ಸಂಬಂಧಿಕರು ರವಿಕಿರಣ್‌ಗೆ ಬುದ್ಧಿವಾದ ಹೇಳಿ ರಾಜೀ ಪಂಚಾಯ್ತಿ ಮಾಡಿಸಿದ್ದರು. ನಿನ್ನ್ನೆಯೂ ಪತಿ-ಪತ್ನಿ ನಡುವೆ ಜಗಳವಾಗಿದೆ. ಇದರಿಂದ ಮನನೊಂದ ಸಂತೋಷಿ ಬೆಂಗಳೂರಿನಲ್ಲಿ ವಾಸವಿದ್ದ ಸಹೋದರ ಹಾಗೂ ಸಂಬಂಧಿಕರಿಗೆ ಬರಲು ಹೇಳಿ ಕರೆಸಿಕೊಂಡಿದ್ದಾರೆ.

ರಾತ್ರಿ 8 ಗಂಟೆ ಸಂದರ್ಭದಲ್ಲಿ ಸಂಬಂಧಿಕರು ರವಿಕಿರಣ್ ಮನೆಗೆ ಬಂದು ಬುದ್ಧಿವಾದ ಹೇಳುವಾಗ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಸಂತೋಷಿ ಹಾಗೂ ಸಂಬಂಧಿಕರು ಕೈಗೆ ಸಿಕ್ಕ ಕಬ್ಬಿಣದ ರಾಡು ಹಾಗೂ ಮಚ್ಚಿನಿಂದ ಆತನ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇವರ ಮನೆಯಲ್ಲಿ ಜಗಳ ನಡೆಯುತ್ತಿದ್ದುದನ್ನು ಸ್ಥಳೀಯರು ಆಲಿಸಿದ್ದು, ಕೆಲ ಸಮಯದ ನಂತರ ನಿಶ್ಯಬ್ಧವಾಗಿದ್ದನ್ನು ಗಮನಿಸಿದ್ದಾರೆ. ಅಲ್ಲದೆ ಮನೆಯೊಳಗೆ ಕತ್ತಲೆ ಇದ್ದುದು ಹಾಗೂ ಗೇಟ್ ತೆಗೆದುಕೊಂಡಿರುವುದನ್ನು ಕಂಡು ಅನುಮಾನಗೊಂಡ ನೆರೆಹೊರೆಯವರು ತಕ್ಷಣ ಕ್ಯಾತಸಂದ್ರ ಪೊಲೀಸರಿಗೆ ತಿಳಿಸಿದ್ದಾರೆ.

ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್, ವೃತ್ತ ನಿರೀಕ್ಷಕ ರವಿಕುಮಾರ್ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿ ಮನೆಯೊಳಗೆ ಪ್ರವೇಶಿಸಿದಾಗ ರವಿಕಿರಣ್ ಹತ್ಯೆಯಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಅಲ್ಲದೆ, ಸ್ಥಳದಲ್ಲಿ ಮಾರಕಾಸ್ತ್ರಗಳು ದೊರೆತಿವೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಬಿ.ಮಂಜುನಾಥ್, ಡಿವೈಎಸ್ಪಿ ಚಿದಾನಂದಸ್ವಾಮಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ನೆರೆಹೊರೆಯವರಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ಸಂತೋಷಿ ಅವರ ಸಂಬಂಧಿ ಅದೇ ಬಡಾವಣೆಯಲ್ಲಿ ಇರುವುದನ್ನು ಪೊಲೀಸರು ಪತ್ತೆ ಹಚ್ಚಿ ಅವರ ಮನೆಗೆ ಹೋದಾಗ ಸಂತೋಷಿ ಅಲ್ಲಿದ್ದುದು ಕಂಡು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ. ಹತ್ಯೆಯಲ್ಲಿ ಭಾಗಿಯಾಗಿ ಪರಾರಿಯಾಗಿರುವವರ ಪತ್ತೆಗಾಗಿ ವೃತ್ತ ನಿರೀಕ್ಷಕ ರವಿಕುಮಾರ್ ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಗಿದೆ. ಈ ವೇಳೆ ಈ ಸಂಜೆಯೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಇದೊಂದು ವ್ಯವಸ್ಥಿತ ಕೊಲೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ರವಿಕಿರಣ್ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದನೆಂದು ಸ್ಥಳೀಯರು ಹೇಳುತ್ತಿದ್ದಾರೆ. ಈಗಾಗಲೇ ಮೃತನ ಪತ್ನಿ ಸಂತೋಷಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಲಾಗುತ್ತಿದೆ. ಈ ಕೊಲೆಯಲ್ಲಿ ಇನ್ನೂ ಮೂವರು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಎರಡು-ಮೂರು ದಿನಗಳಲ್ಲಿ ಈ ಆರೋಪಿಗಳನ್ನೂ ಸಹ ಬಂಧಿಸಲಾಗುವುದು ಎಂದು ತಿಳಿಸಿದರು.

Write A Comment